

ನರೇಗಲ್ಲ: ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಬುಧವಾರ ಮತ್ತು ಗುರುವಾರ ಬೆಳಗ್ಗೆಯಿಂದ ಮೋಡ ಕವಿದ ವಾತಾವರಣ ನಿರ್ವಣವಾಗಿತ್ತು. ಗುರುವಾರ ಪೂರ್ತಿ ಜಿಟಿಜಿಟಿ ಮಳೆಯಾಗಿದೆ. ಆಗಾಗ ಬಿರುಸಾದ ಗಾಳಿಯೊಂದಿಗೆ ಜೋರಾದ ಮಳೆ ಸುರಿಯಿತು.
ಮುಂಗಾರು ಬಿತ್ತನೆ ಮಾಡಿದ ಬಳಿಕ ಕೈಕೊಟ್ಟಿದ ಮಳೆಯಿಂದಾಗಿ ಆತಂಕದಲ್ಲಿದ್ದ ರೈತರಿಗೆ ಸ್ವಲ್ಪ ಖುಷಿ ನೀಡಿದೆ. ಹೀಗೆ ಜೋರಾದ ಮಳೆಯಾದರೆ ಹೂವು ಬಿಡುವ ಹೆಸರು ಬೆಳೆಗೆ ಶಕ್ತಿ ನೀಡಿದಂತಾಗುತ್ತದೆ.
ಮುಂಗಾರು ಪೂರ್ವ ಮಳೆಗಳು ಉತ್ತಮವಾಗಿ ಸುರಿದಿದ್ದರಿಂದ ರೈತರು ಹೆಸರು ಬಿತ್ತನೆ ಮಾಡಿದ್ದರು. ಆದರೆ, ನಂತರದಲ್ಲಿ ಮಳೆ ಕೈಕೊಟ್ಟು ಇನ್ನೇನು ಹೆಸರು ಕಪ್ಪಾಗುವ ಹಂತಕ್ಕೆ ತಲುಪಿತ್ತು. ಈಗ ಎರಡು ದಿನಗಳಿಂದ ಸುರಿಯುತ್ತಿರುವ ಮಳೆ ರೈತರನ್ನು ನಿಟ್ಟುಸಿರು ಬಿಡುವಂತೆ ಮಾಡಿದೆ. ಆದರೂ, ಈ ಮಳೆ ಒಂದು ತಿಂಗಳ ಮೊದಲು ಆಗಿದ್ದರೆ ಹೆಸರು ಬೆಳೆ ಬಂಪರ್ಆಗಿ ಬರುತ್ತಿತ್ತು ಎಂಬ ಮಾತು ರೈತರದ್ದಾಗಿದೆ.