ಶಾಂತಿ ವನದಲ್ಲಿ ವಿವಿಧ ಪೂಜಾ ಕಾರ್ಯಕ್ರಮ

ಶಾಂತಿ ವನದಲ್ಲಿ ವಿವಿಧ ಪೂಜಾ ಕಾರ್ಯಕ್ರಮ
Published on

ಕೆ.ಎಂ.ದೊಡ್ಡಿ: ಮಾಜಿ ಸಂಸದ, ರೈತ ಹೋರಾಟಗಾರ ಮತ್ತು ಹಿರಿಯ ಗಾಂಧಿವಾಧಿ, ಬಿಇಟಿ ಟ್ರಸ್ಟ್ ಸಂಸ್ಥಾಪಕ ದಿವಂಗತ ಡಾ.ಜಿ.ಮಾದೇಗೌಡ ಅವರ 98ನೇ ಹುಟ್ಟು ಹಬ್ಬದ ಅಂಗವಾಗಿ ಸಮೀಪದ ಹನುಮಂತನಗರದ ಅವರ ಸಮಾಧಿ ಶಾಂತಿ ವನದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಮಾಜಿ ಸಂಸದ ದಿವಂಗತ ಡಾ.ಜಿ.ಮಾದೇಗೌಡ ಮತ್ತು ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಅಭಿಮಾನಿಗಳು ಹಾಗೂ ಭಾರತೀ ಎಜುಕೇಷನ್ ಟ್ರಸ್ಟ್‌ನ ಅಧ್ಯಾಪಕರು ಮತ್ತು ಸಿಬ್ಬಂದಿ ವರ್ಗದ ವತಿಯಿಂದ ಏರ್ಪಡಿಸಿದ್ದ ಪೂಜಾ ಕಾರ್ಯಕ್ರಮದಲ್ಲಿ ಗೌಡರ ಸಮಾಧಿ ಮತ್ತು ಭಾವಚಿತ್ರಕ್ಕೆ ವಿವಿಧ ಹೂಗಳಿಂದ ಅಲಂಕಾರ ಮಾಡಲಾಗಿತ್ತು.

ಈ ವೇಳೆ ಗೌಡರ ಸಮಾಧಿಗೆ ಪೂಜೆ ಸಲ್ಲಿಸಿದ ವಿಧಾನಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಮಾತನಾಡಿ, ನನ್ನ ತಂದೆ ಹೋರಾಟಗಳನ್ನು ಮಾಡುತ್ತಲೇ ಜೀವ ಸವೆಸಿ ಅನ್ಯಾಯದ ವಿರುದ್ಧ ಆಳುವ ಸರ್ಕಾರಗಳ ವಿರುದ್ಧ ಸಿಡಿದೇಳುತ್ತ ರೈತ, ಬಡವರ ಪರ ಧ್ವನಿ ಎತ್ತಿ ಹೋರಾಟ ಮಾಡುತ್ತಲೇ ಕೊನೆಯುಸಿರೆಳೆದಿದ್ದು ಅವರು ಮಾಡಿರುವ ಸತ್ಕಾರ್ಯಗಳು ಇನ್ನು ಜೀವಂತವಾಗಿ ಉಳಿದಿವೆ ಎಂದರು.

ಗಾಂಧಿ ತತ್ವಗಳನ್ನು ಅನುಸರಿಸುತ್ತ ಎಚ್.ಮಲ್ಲಿಗೆರೆ ಗ್ರಾಮದಲ್ಲಿ ಗಾಂಧಿ ಗ್ರಾಮ ಮಾಡಲು ಯೋಜನೆ ರೂಪಿಸಿದ್ದು, ಅವರ ಕನಸು ಈಡೇರಿಸುವ ಹೊಣೆ ನನ್ನ ಹೆಗಲ ಮೇಲಿದ್ದು, ಅದಕ್ಕಾಗಿ ತಂಡ ಕಟ್ಟಿ ಕೊಂಡು ಸಹಜ ಬೇಸಾಯ ಸೇರಿದಂತೆ ಹಲವು ರೈತ ಉಪಯೋಗಿ ಕೆಲಸಗಳನ್ನು ಮಾಡುತಿದ್ದೇನೆ ಎಂದು ಹೇಳಿದರು.

ಅನ್ಯಾಯ ಕಂಡಾಗ ಯಾವುದೇ ಮುಲಾಜಿಲ್ಲದೆ ಸಿಡಿದೇಳುತ್ತ ಆಳುವ ಸರ್ಕಾರದ ವಿರುದ್ಧವೇ ಗಟ್ಟಿ ಧ್ವನಿಯಲ್ಲಿ ಪ್ರಶ್ನಿಸುತ್ತಿದ್ದ ವ್ಯಕ್ತ್ತಿತ್ವವನ್ನು ಬೆಳೆಸಿ ಕೊಂಡಿದ್ದು, ಅವರೇ ನನ್ನ ಕೆಲಸಗಳಿಗೆ ಸ್ಫೂರ್ತಿ. ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ನಾನು ಮತ್ತು ನನ್ನ ಪುತ್ರ ಆಶಯ್ ನಡೆಯುತಿದ್ದೇವೆ ಎಂದು ಭಾವುಕರಾದರು.

ಗೌಡರು ಸಾತ್ವಿಕ ಸ್ವಭಾವದ ವ್ಯಕ್ತಿ. ಯಾರನ್ನು ಗದರಿಸಿದರು ಸಹ ಅದರ ಹಿಂದೆ ಪ್ರೀತಿ ಇತ್ತು ಅನೀತಿ, ಅನ್ಯಾಯ ಮತ್ತು ಅಧರ್ಮಗಳ ವಿರುದ್ಧ ಹೋರಾಟ ಮಾಡಿಕೊಂಡು ಬಂದಂತಹ ವ್ಯಕ್ತಿತ್ವ ಯಾವುದೇ ಅಧಿಕಾರದ ಆಸೆಗೆ ಸಿಲುಕದೆ ಹೋರಾಟದ ಕಿಚ್ಚನ್ನು ಇಳಿವಯಸ್ಸಿನವರೆಗೂ ರೂಢಿಸಿಕೊಂಡು ಬಂದಂತಹವರು ಎಂದು ಗದ್ಗದಿತರಾದರು.

ಹಳ್ಳಿಗಾಡಿನ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಸ್ಥಾಪಿಸಿದ ಭಾರತೀ ವಿದ್ಯಾಸಂಸ್ಥೆ ಶರವೇಗದಲ್ಲಿ ಬೆಳೆಯುತ್ತಿದ್ದು, ಲಕ್ಷಾಂತರ ಬಡ ವಿದ್ಯಾರ್ಥಿಗಳಿಗೆ ದಾರಿದೀಪವಾಗಿದ್ದ ಸಂಸ್ಥೆಯನ್ನು ಅವರ ಆಶಯದಂತೆ ಸಮರ್ಥವಾಗಿ ಮುನ್ನಡೆಸುತ್ತ ಮತ್ತಷ್ಟು ಹೊಸ ಕೋರ್ಸ್‌ಗಳನ್ನು ತಂದು ಅವರ ಕನಸು ನನಸು ಮಾಡುತ್ತಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಬಿಇಟಿ ಟ್ರಸ್ಟ್ ಹನುಮಂತನಗರ ಕ್ಯಾಂಪಸ್ ಕಾರ್ಯದರ್ಶಿ ಗುರುದೇವರಹಳ್ಳಿ ಸಿದ್ದೇಗೌಡ, ಮುಖಂಡರಾದ ಕೆ.ಎಸ್.ಗೌಡ, ಮಾಸ್ಟರ್ ಬೋರಯ್ಯ, ಮಾದರಹಳ್ಳಿ ನಾಗಣ್ಣ ಸೇರಿದಂತೆ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net