

ತಾಳಗುಪ್ಪ (ಸಾಗರ): ‘ಗಡಿ ಮಾರಿ’ ಹಿಂದಿನಿಂದಲೂ ಜನ ಪಾಲಿಸಿಕೊಂಡು ಬಂದ ಒಂದು ಸಂಪ್ರದಾಯ. ಸಣ್ಣನೆಯ ಮರದ ಪಲ್ಲಕ್ಕಿಯೊಳಗೆ ದೇವರ ಕೂರಿಸಿ ಮನೆಯಲ್ಲಿ ಬೇಡದ ವಸ್ತುಗಳನ್ನು ಅದರಲ್ಲಿ ತುಂಬಿ ಸಣ್ಣ ದೀಪ ಹಚ್ಚಿ ಮುಸ್ಸಂಜೆಯಲ್ಲಿ ಊರ ಜನ ಸೇರಿ ಒಟ್ಟಾಗಿ ಊರಿಗೆ ಅಂಟಿದ ಕಾಯಿಲೆ-ಕಸಾಲೆ ಹೋಗಲಿ ಎಂದು ಪ್ರಾರ್ಥಿಸಿ ಮುಂದಿನ ಊರಿನ ಗಡಿಯವರೆಗೆ ಬಿಟ್ಟುಬರುತ್ತಾರೆ. ರಸ್ತೆಯಂಚಲ್ಲಿ ಇರುವ ಮಾರಿಯ ಗಮನಿಸಿದ ಆ ಊರಿನವರು ತಮ್ಮ ಮನೆಯ ಹಳೇ ವಸ್ತುಗಳನ್ನು ಅದಕ್ಕೆ ಸೇರಿಸಿ ಪೂಜೆ, ಹಣ್ಣುಕಾಯಿ ಮಾಡಿ ಮುಂದಿನ ಊರಿಗೆ ದಾಟಿಸುತ್ತಾರೆ. ಹೀಗೆ ಅದು ಮುಂದುವರಿಯುತ್ತ ಮಾರಮ್ಮನ ದೇವಸ್ಥಾನವಿರುವ ಊರು ಸೇರಿ ಅಲ್ಲಿ ದಹಿಸಲ್ಪಡುತ್ತದೆ. ಇದರಿಂದ ಊರಿಗೆ ಕಾಯಿಲೆ ಬರುವುದಿಲ್ಲ ಎಂಬ ನಂಬಿಕೆ. ಆದರೆ ಈ ವರ್ಷ ಕರೊನಾ ಬಂದ ಕಾರಣ ಸಾಗರ ತಾಲೂಕಿನ ಚೂರಿಕಟ್ಟೆ ಬಳಿ 15 ದಿನಗಳಿಂದ ಒಂದೇ ಜಾಗದಲ್ಲಿ ನಿಂತಿದೆ. ಹೀಗಾಗಿ ಕರೊನಾ ಕಣ್ಮರೆಯಾದ ನಂತರವೇ ಗಡಿಮಾರಮ್ಮ ಹೊರಡಬಹುದು!
ಮೀಸೆ ಬೋಳಿಸಿಕೊಂಡರು!
ಸಾಗರ: ಕೆಮ್ಮು, ನೆಗಡಿ, ಸೀನುವುದರಿಂದ ಸಿಂಬಳ ಮೀಸೆ ಗಡ್ಡದ ಮೇಲೆ ಬಿದ್ದು ಕರೊನಾ ಹರಡುತ್ತದೆ ಎನ್ನುವ ಭಯಕ್ಕೆ ಸಾಕಷ್ಟು ಜನ ಮೀಸೆ-ಗಡ್ಡವನ್ನು ಬೋಳಿಸಿ ಕೊಳ್ಳುತ್ತಿದ್ದಾರೆ. ಶೋಕಿಗಾಗಿ ಕೂದಲು ವಿನ್ಯಾಸ ಮಾಡಿಸಿಕೊಂಡವರು ಕತ್ತರಿಗೆ ಕೆಲಸ ನೀಡಿದ್ದಾರೆ.
ಸುಳ್ಳು ಸುದ್ದಿಗೆ ಬೆಪ್ಪಾದ ಎಣ್ಣೆಪ್ರಿಯರು
ಗದಗ: ಏ.1ರಂದು ಮದ್ಯಅಂಗಡಿಗಳು ಶುರುವಾಗುತ್ತವೆ ಎಂದು ಫೂಲ್(ಮೂರ್ಖರನ್ನಾಗಿಸಲು) ಮಾಡಲು ಅದ್ಯಾವ ಪುಣ್ಯಾತ್ಮ ಸುದ್ದಿ ಹಬ್ಬಿಸಿದನೋ ಗೊತ್ತಿಲ್ಲ. ಆದರೆ, ಬುಧವಾರ ಬೆಳಗ್ಗೆ ನಗರದ ಎಂಎಸ್ಐಎಲ್ ಮದ್ಯದಂಗಡಿಗಳ ಮುಂದೆ ಕುಡುಕರು ಜಮಾಯಿಸಿದ್ದರು. ಅಲ್ಲದೆ, ಸಾಮಾಜಿಕ ಅಂತರ ಕಾಯ್ದುಕೊಂಡು ಆರಿದ ಬಾಯಿಗೆ ಎಣ್ಣೆ ಹಾಕಿಕೊಳ್ಳಲು ಶಿಸ್ತಿನಿಂದ ಕಾದು ನಿಂತಿದ್ದರು. ಆದರೆ, ಏ.1ಕ್ಕೆ ಫೂಲ್ ಮಾಡಲು ಮಾಡಿದ ಕಿತಾಪತಿ ಎಂದು ತಿಳಿದ ಕೂಡಲೇ ಬಂದ ದಾರಿಗೆ ಸುಂಕವಿಲ್ಲದಂತೆ ಮನೆ ಕಡೆ ಹೆಜ್ಜೆ ಹಾಕಿದರು.
ರಾತ್ರೋರಾತ್ರಿ ದೀಪ ಹಚ್ಚಿದ ಜನ
ಬಾಗಲಕೋಟೆ: 2-3 ದಿನಗಳಿಂದ ರಬಕವಿ ಬನಹಟ್ಟಿ ಭಾಗದಲ್ಲಿ ಹರಡಿದ ವದಂತಿಗೆ ಮಹಿಳೆಯರು ಮನೆಯಲ್ಲಿ ರಾತ್ರೋರಾತ್ರಿ ದೇವರ ಮುಂದೆ ದೀಪ ಹಚ್ಚಿಡುತ್ತಿದ್ದಾರೆ. ಮನೆಯಲ್ಲಿ ಎಷ್ಟು ಜನ ಇದ್ದಿರೋ ಅಷ್ಟು ದೀಪ ಹಚ್ಚಿದರೆ ಕರೋನಾ ಬರಲ್ಲ ಎಂಬ ಸುದ್ದಿ ಈ ಭಾಗದಲ್ಲಿ ವ್ಯಾಪಕವಾಗಿ ಹರಡಿದೆ.
ದೇವಿಯ ಮಂಗಳಸೂತ್ರ ಹರಿದ ವದಂತಿ
ಉಗರಗೋಳ: ಆದಿಶಕ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಿಯ ಮಂಗಳಸೂತ್ರ ಹರಿದು ಬಿದ್ದಿದೆ ಎಂದು ಕೆಲವರು ವದಂತಿ ಹಬ್ಬಿಸುತ್ತಿದ್ದು, ಇದನ್ನು ಯಾರೂ ನಂಬಬಾರದು ಎಂದು ಯಲ್ಲಮ್ಮ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ರವಿ ಕೋಟಾರಗಸ್ತಿ ವಿನಂತಿಸಿದ್ದಾರೆ. ಮಂಗಳವಾರ ರಾತ್ರಿಯಿಂದ ಇಂಥದ್ದೊಂದು ಸುಳ್ಳು ಸಂದೇಶ ಹರಿದಾಡಿದ್ದರಿಂದ ಭಕ್ತರು ದೇವಸ್ಥಾನ ಸಿಬ್ಬಂದಿಗೆ ಕರೆ ಮಾಡಿ ವಿಚಾರಿಸುತ್ತಿದ್ದಾರೆ. ವಾಸ್ತವವಾಗಿ ಇಂಥ ಯಾವ ವಿದ್ಯಮಾನವೂ ನಡೆದಿಲ್ಲ. ಭಕ್ತರು ಆತಂಕಕ್ಕೆ ಒಳಗಾಗಬಾರದು ಎಂದಿದ್ದಾರೆ.