

ಕೈಲಾಂಚ
ದೇವರೇ ನನ್ನ ಆಪರೇಷನ್ ಇದೆ, ತೊಂದರೆ ಇರುವ ಒಂದು ಕಿಡ್ನಿಯ ಅರ್ಧಭಾಗ ಮಾತ್ರ ತೆಗೆದು ಹಾಕುವಂತೆ ಮಾಡು.. ನನ್ನ ಮಗಳು ನನ್ನ ಜೀವ ಅವಳ ಆರೋಗ್ಯ ಚೆನ್ನಾಗಿರುವಂತೆ ನೋಡಿಕೋ,.. ಚೆನ್ನಾಗಿ ಓದಿಸು ತಾಯಿ ಹೀಗೆ.. ಹಲವಾರು ಬೇಡಿಕೆಗಳನ್ನು ಹೊತ್ತ ಪತ್ರಗಳು ರಾಮನಗರ ತಾಲೂಕು ಕೈಲಾಂಚ ಹೋಬಳಿಯ ಪ್ರಸಿದ್ಧ ಯಾತ್ರಾ ಕ್ಷೇತ್ರ ರೇವಣಸಿದ್ದೇಶ್ವರ ಸ್ವಾಮಿಯ ಹುಂಡಿಯಲ್ಲಿ ಪತ್ತೆಯಾಗಿವೆ.
ಹೋಬಳಿಯ ಪ್ರಸಿದ್ಧ ಪ್ರವಾಸಿ ತಾಣ ಅವ್ವೇರಹಳ್ಳಿ ರೇವಣಸಿದ್ದೇಶ್ವರ ಬೆಟ್ಟದ ದೇವಾಲಯದ ಹುಂಡಿಗಳಲ್ಲಿ ಸಂಗ್ರಹವಾಗಿದ್ದ ಹಣ ಎಣಿಕೆ ಕಾರ್ಯ ಇತ್ತಿಚಿಗೆ ದೇವಾಲಯದ ಕಾರ್ಯ ನಿರ್ವಹಕಾಧಿಕಾರಿ ಎಸ್.ಜೆ. ಯೇಸುರಾಜ್, ಉಪ ತಹಸೀಲ್ದಾರ್ ರುದ್ರಮ್ಮ ಕಂದಾಯ, ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ನಡೆಯಿತು.
ದೇವಾಲಯದ ಎಲ್ಲ ಹುಂಡಿಗಳಿಂದ ಒಟ್ಟು 5.03,700 ರೂ. ಸಂಗ್ರಹವಾಗಿತ್ತು. ಎಣಿಕೆ ಹಣವನ್ನು ಸ್ಥಳದಲ್ಲೇ ಹಾಜರಿದ್ದ ಬ್ಯಾಂಕ್ ಅಧಿಕಾರಿಗಳು ದೇವಾಲಯದ ಖಾತೆಗೆ ಜಮಾ ಮಾಡಿಕೊಂಡರು.
ಎಣಿಕೆ ಸಂದರ್ಭದಲ್ಲಿ ರೇಣುಕಾಂಬ ದೇವಿಗೆ ಮೊರೆಯಿಟ್ಟ ವಿಶೇಷ ಪತ್ರಗಳು ಸಿಕ್ಕವು. ‘ಅಮ್ಮ ನನ್ನ ಮಗಳ ಆರೋಗ್ಯ ಕಾಪಾಡು, ಅವಳ ವಿದ್ಯಾಭ್ಯಾಸ ಮುನ್ನಡೆಸು, ನನ್ನ ಜೀವ ಇರುವ ತನಕ ನಿನ್ನ ಪೂಜೆ ಮಾಡುತ್ತೇನೆ’ ಎಂದು ಭಕ್ತರೊಬ್ಬರು ಮೊರೆ ಇಟ್ಟಿದ್ದರೆ, ಮತ್ತೊಬ್ಬ ಭಕ್ತೆ, ‘ನಾಳೆ ನನ್ನ ಆಪರೇಷನ್ ಇದೆ, ದಯವಿಟ್ಟು ಗಡ್ಡೆ ಇರುವ ಒಂದು ಕಿಡ್ನಿ ಪೂರ್ತಿ ತೆಗೆಯಬಾರದು, ಒಂದು ಕಿಡ್ನಿ ಆರೋಗ್ಯವಾಗಿದ್ದು, ಇನ್ನೊಂದರಲ್ಲಿ ಅರ್ಧಭಾಗ ಮಾತ್ರ ತೆಗೆಯುವಂತೆ ಮಾಡು. ಅದು ಕ್ಯಾನ್ಸರ್ ಗೆಡ್ಡೆ ಆಗಿರಬಾರದು, ದೇಹದ ಇತರ ಭಾಗಕ್ಕೆ ಹರಡಬಾರದು, ಆಪರೇಷನ್ ಸರಳವಾಗಿರಲಿ, ನನಗೆ ನೋವಾಗದಂತೆ ನೋಡಿಕೋ ತಾಯಿ’ ಎಂದು ಪ್ರಾರ್ಥಿಸಿರುವ ಪತ್ರ ಸಿಕ್ಕಿತು.
ಮತ್ತೊಂದು ಪತ್ರ ಸಂತಾನ ಭಾಗ್ಯ ಕರುಣಿಸು ಎಂದು ತಾಯಿ ರೇಣುಕಾಂಬೆಯನ್ನು ಪ್ರಾರ್ಥಿಸಿದ್ದರೆ, ಮಗದೊಂದು ಪತ್ರದಲ್ಲಿ, ಬಟ್ಟೆ ಅಂಗಡಿ ಖಾಲಿ ಮಾಡಿ ಬಟ್ಟೆ ತಂದು ರೂಮಿನಲ್ಲಿ ತುಂಬಿದ್ದೇವೆ. ಈ ಎಲ್ಲ ಬಟ್ಟೆಗಳನ್ನು ವ್ಯಾಪಾರ ಮಾಡಿಸು ತಾಯಿ ಎಂದು ಬೇಡಿಕೊಂಡಿದ್ದ ಪತ್ರಗಳು ಕಂಡುಬಂದವು.