ಎರಡೂವರೆ ಎಕರೆಯಲ್ಲಿ ಬೆಳೆಗಳ ವೈವಿಧ್ಯ

negila yogi 1
Published on

* ಸಾವಯವ ಗೊಬ್ಬರಕ್ಕೆ ಆದ್ಯತೆ

* ನೀರಿನ ಬರ ನೀಗಿಸಿದ ಕೃಷಿಹೊಂಡ

* ಮಾದರಿಯಾದ ಅರಳೀಮರದದೊಡ್ಡಿ ಗ್ರಾಮದ ರೈತ ನಂಜೇಗೌಡ

ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ

ಹೊಸ ಹೊಸ ಪ್ರಯೋಗಗಳ ಮೂಲಕ ಸಮಗ್ರ ಕೃಷಿ ಅವಲಂಬಿಸಿ ಕೃಷಿಯಲ್ಲೇ ಯಶಸ್ಸಿನ ಮೆಟ್ಟಿಲು ಏರಿ ಖುಷಿ ಕಾಣುತ್ತಿರುವ ರೈತ ನಂಜೇಗೌಡ ಮಾದರಿ ಕೃಷಿಕರಾಗಿ ಗುರುತಿಸಿಕೊಂಡಿದ್ದಾರೆ.

ರಾಮನಗರ ತಾಲೂಕಿನ ಕೂಟಗಲ್ ಹೋಬಳಿಯ ಅರಳೀಮರದದೊಡ್ಡಿ ಗ್ರಾಮದ ರೈತ ನಂಜೇಗೌಡ ತನಗಿರುವ ಎರಡೂವರೆ ಎಕರೆ ಜಮೀನಿನಲ್ಲೇ ಕುಟುಂಬದ ಸಹಕಾರದಲ್ಲಿ ಹಲವು ಮಿಶ್ರ ಕೃಷಿ ಮಾಡುವ ಮೂಲಕ ಕಡಿಮೆ ಜಮೀನಿನಲ್ಲೂ ಮನಸ್ಸು ಮಾಡಿದರೆ ಯಶಸ್ಸು ಸಾಧಿಸಿ ತೋರಬಹುದು ಎಂಬುದನ್ನು ಕೃಷಿ ಮೂಲಕವೇ ಉತ್ತರ ನೀಡಲು ಹೊರಟಿದ್ದಾರೆ.

ನೀರಾವರಿಗೆ ಒಂದು ಬೋರ್‌ವೆಲ್ ಕೊರೆಸಿಕೊಂಡಿರುವ ಇವರು ತೆಂಗು, ಮಾವು, ರಾಗಿ, ಜೋಳ ವ್ಯವಸಾಯ ಮಾಡುತ್ತಾ ಬಂದಿದ್ದರು. ಕಳೆದ ಹಲವು ವರ್ಷಗಳಿಂದ ಮಿಶ್ರ ಕೃಷಿ ಕಾರ್ಯಕ್ಕೆ ಮುಂದಡಿ ಇಟ್ಟ ಇವರು ಒಂದೊಂದೇ ಬೆಳೆಯನ್ನು ಬೆಳೆಯುವ ಮೂಲಕ ಯಶಸ್ಸಿನತ್ತ ಸಾಗಿ ಹತ್ತು ಹಲವು ಬೆಳೆಗಳು ಕಾಣುವಂತೆ ಕೃಷಿ ನಡೆಸುತ್ತಿದ್ದಾರೆ.

ಜಮೀನಿನಲ್ಲಿ ತೆಂಗು, ಮಾವು ಜತೆ ಹೈನುಗಾರಿಕೆ, ಪಪ್ಪಾಯ, ನೇರಳೆ, ಸಪೋಟ, ನಿಂಬೆ, ನುಗ್ಗೆ, ಹಲಸು, ಸೀಬೆ ಸೇರಿ ವಿವಿಧ ಬಗೆಯ ವಿಶೇಷ ತಳಿಯ ಹಣ್ಣಿನ ಗಿಡಗಳ ಕೃಷಿ ಜತೆಗೆ ತೋಟದ ಬೆಳೆ ಕೃಷಿಯಲ್ಲಿ ಖುಷಿ ಕಾಣುತ್ತಿದ್ದಾರೆ. ಮಿಶ್ರ ಬೇಸಾಯ ಪದ್ದತಿ ಅನುಸರಿಸಿ ಹೊಸ ಹೊಸ ಬೆಳೆಗಳತ್ತ ಚಿತ್ತ ಹರಿಸಿದ್ದು, ಕೃಷಿಯನ್ನು ಲಾಭದಾಯಕಗೊಳಿಸಿಕೊಂಡು ಜೀವನ ಕಟ್ಟಿಕೊಂಡಿದ್ದಾರೆ. ಕೃಷಿ ಜತೆಗೆ ಅರಣ್ಯ ಕೃಷಿ ಮರಗಳನ್ನು ಬೆಳೆಸಿದ್ದು, ವಿಶೇಷವಾಗಿ ಇತ್ತೀಚೆಗೆ ರೈತರು ಅಪರೂಪವಾಗಿ ಬೆಳೆಯುತ್ತಿರುವ ಬಟರ್‌ ಫ್ರೂಟ್ , ಅಂಜೂರ, ವಿಶೇಷ ತಳಿಯ ಸೀಬೆ ಹಣ್ಣಿನ ಕೃಷಿ ನಡೆಸುವತ್ತ ಚಿತ್ತ ಹರಿಸಿದ್ದಾರೆ.

ಕೊಟ್ಟಿಗೆ ಗೊಬ್ಬರಕ್ಕೆ ಆದ್ಯತೆ

ಬೆಳೆಗೆ ಹೆಚ್ಚಾಗಿ ರಸಗೊಬ್ಬರ ನೀಡದೆ ಕೊಟ್ಟಿಗೆ ಗೊಬ್ಬರ ನೀಡಿ ಹೆಚ್ಚಿನ ರೀತಿಯಲ್ಲಿ ಸಾವಯವ ಕೃಷಿಯತ್ತ ಚಿತ್ತಹರಿಸಿದ್ದಾರೆ. ಪಪ್ಪಾಯ, ತೆಂಗು, ಮಾವು ಜತೆಗೆ ಹೈನುಗಾರಿಕೆ ಅವಲಂಭಿಸಿ ಬಟರ್ ಫ್ರೂಟ್ ವಿಶೇಷ ತಳಿಯ ಸಪೋಟ, ಸೀಬೆ ತೋಟದ ಬೆಳೆ ವಿಸ್ತರಣೆಗೆ ಮುಂದಡಿ ಇಟ್ಟಿರುವ ಇವರು ಹೈನುಗಾರಿಕೆ ಹಸು ಸಾಕಣೆ, ನಾಟಿ ಕೋಳಿ ಸಾಕುತ್ತಿದ್ದು ಅವುಗಳಲ್ಲೂ ಆದಾಯ ತನ್ನದಾಗಿಸಿಕೊಳ್ಳುತ್ತಿದ್ದಾರೆ.

ಪಪ್ಪಾಯ ತೋಟದಲ್ಲಿ ಮಿಶ್ರ ಬೆಳೆಯಾಗಿ ತರಕಾರಿ, ಸೊಪ್ಪು ಸೋಟ, ಸೀಬೆ, ಜಮ್ಮುನೇರಳೆ, ಹಲಸು ಸೇರಿ ಹಲವು ಹಣ್ಣಿನ ಗಿಡಗಳನ್ನು ಬೆಳೆಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಭಾಗದಲ್ಲಿಯೇ ಅಪರೂಪವಾಗಿರುವ ಚರಿ, ಅಂಜೂರ, ಬಟರ್ ಪ್ರೂಟ್, ಬೆಳೆಯಲು ಆಸಕ್ತಿ ಇದೆ ಎನ್ನುತ್ತಾರೆ ರೈತ ನಂಜೇಗೌಡ.

ಹನಿ ನೀರಾವರಿ

ಜಮೀನು ಬಳಿ ಪ್ರತ್ಯೇಕವಾಗಿ ಮೇಕೆ ಸೆಡ್ ನಿರ್ಮಾಣ ಮಾಡಿ ಕುರಿ, ಮೇಕೆ, ನಾಟಿ ಕೋಳಿ ಸಾಕಣಿಕೆ ಮಾಡುತ್ತಿದ್ದಾರೆ. ಹೈನುಗಾರಿಕೆಗೆ ಜೋಳ ಸೀಮೆಹುಲ್ಲು ಬೆಳೆದು ಮೇವಿನ ಕೊರತೆ ನೀಗಿಸಿಕೊಂಡು ಬಂದಿದ್ದು, ಇವರ ಕೃಷಿ ಕೆಲಸಗಳಲ್ಲಿ ಕುಟುಂಬ ಸಹಾಯಕ್ಕೆ ನಿಂತಿದೆ. ಇವರ ಜಮೀನಿಗೆ ಒಂದೇ ಬೋರ್‌ವೆಲ್ ಇದ್ದು, ನೀರಿನ ಕೊರತೆ ಇರಬಾರದು ಎಂದು ನೀರಿನ ಮಿತ ಬಳಕೆಗೆ ಒತ್ತು ಕೊಟ್ಟಿರುವ ಇವರು ಪಪ್ಪಾಯ, ಹಣ್ಣಿನ ಗಿಡಗಳಿಗೆ ಹನಿ ನೀರಾವರಿ, ತುಂತುರು ನೀರಾವರಿ ಅಳವಡಿಸಿಕೊಂಡು ವೈಜ್ಞಾನಿಕ ರೀತಿಯಲ್ಲಿ ಸಲು ಪಡೆಯುತ್ತಿದ್ದಾರೆ.

ಮೊದಲ ಹಂತದಲ್ಲಿ ಜೋಳ ಬೆಳೆದರೆ ಅದೇ ಜಾಗದಲ್ಲಿ ಮತ್ತೆ ಅದೇ ಬೆಳೆ ಬೆಳೆಯದೆ ಬೇರೆ ಸಲು ಬೆಳೆದು ಬೆಳೆಗಳಲ್ಲಿ ಬದಲಾವಣೆ ಮಾಡಿಕೊಂಡು ಕೃಷಿಯಲ್ಲಿ ಲಾಭಕಂಡುಕೊಂಡು ಬರುವ ಜತೆಗೆ ಭೂಮಿಯ ಫಲವತ್ತತೆಗೂ ಮುಂದಾಗಿದ್ದಾರೆ.

ನೀರಿನ ಬರ ನೀಗಿಸಿದ ಕೃಷಿಹೊಂಡ

ಜಮೀನಿನಲ್ಲಿ ಎರಡು ದೊಡ್ಡದಾದ ಕೃಷಿ ಹೊಂಡಗಳಿದ್ದು, ವಿದ್ಯುತ್ ಸರಬರಾಜು ದಿನದ 24 ಗಂಟೆ ಇಲ್ಲದಿರುವ ಕಾರಣ ವಿದ್ಯುತ್ ಇರುವ ವೇಳೆಯಲ್ಲಿ ಬೋರ್‌ವೆಲ್‌ಗಳಿಂದ ಕೃಷಿಹೊಂಡಕ್ಕೆ ನೀರು ಶೇಖರಣೆ ಮಾಡಿಕೊಂಡು ಜೋಳ, ಪಪ್ಪಾಯ, ಸೀಬೆ, ಮತ್ತಿತರ ತೋಟದ ಬೆಳೆಗಳಿಗೆ ನೀರೊದಗಿಸುತ್ತಿದ್ದಾರೆ.

ನಂಜೇಗೌಡ, ರೈತ, ಅರಳೀಮರದದೊಡ್ಡಿ.

ಕೃಷಿಯಲ್ಲಿ ಲಾಭ, ನಷ್ಟ ಲೆಕ್ಕ ಹಾಕಿದವನಲ್ಲ. ಸಾಧಿಸಬೇಕೆಂಬ ಬಯಕೆ ನನ್ನದು. ಕೃಷಿಗೆ ಸದಾ ನನ್ನ ಕುಟುಂಬ ಬೆನ್ನೆಲುಬಾಗಿ ಸಹಕಾರವಾಗಿ ನಿಂತಿದೆ. ಪಪ್ಪಾಯ ತೋಟದ ಬೆಳೆ ಜತೆಗೆ ವಿಶೇಷ ತಳಿಯ ಹಣ್ಣಿನ ಗಿಡ ಸೀಬೆ, ಹಲಸು, ನೇರಳೆ ವಿಸ್ತಾರ ಮಾಡಬೇಕೆಂದು ಒಂದೊಂದೇ ವಿಶೇಷ ತಳಿಯ ಹಣ್ಣಿನ ಗಿಡ ಬೆಳೆಗಳತ್ತ ಮುಖ ಮಾಡಿದ್ದೇನೆ.

ಪ್ರಭಾಕರ್, ಕೃಷಿ ಅಧಿಕಾರಿ, ರೈತ ಸಂಪರ್ಕ ಕೇಂದ್ರ, ಕೂಟಗಲ್.

ನಂಜೇಗೌಡ ಪ್ರಗತಿಪರ ಮಾದರಿ ಕೃಷಿಕರಾಗಿದ್ದು, ಹೊಸ ಹೊಸ ಬೆಳೆಯ ಬಗ್ಗೆ ಅನ್ವೇಷಣೆ ಮಾಡುತ್ತಿರುತ್ತಾರೆ. ಮಿಶ್ರ ಬೇಸಾಯ ಸೇರಿ ಹತ್ತಾರು ಕೃಷಿ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಇಲಾಖೆ ಅವರ ಕೃಷಿಗೆ ಪೂರಕವಾಗಿ ಸರ್ಕಾರದಿಂದ ಸಿಗುವ ನೆರವು ಮತ್ತು ಕಾಲಕಾಲಕ್ಕೆ ಕೃಷಿ ಇಲಾಖೆಯಿಂದ ಮಾಹಿತಿ ನೀಡಿ ಪ್ರೋತ್ಸಾಹಿಸುತ್ತಿದೆ.

9731561003 ಸಂಪರ್ಕಿಸಬೇಕಾದ ಸಮಯ ಬೆಳಗ್ಗೆ 9ರಿಂದ ಸಂಜೆ 6ಗಂಟೆವರೆಗೆ --

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net