

ಮಾಗಡಿ : ಪಟ್ಟಣದ ಕಲ್ಯಾಗೇಟ್ ಬಳಿಯ ಶ್ರೀ ವರಸಿದ್ಧಿ ವಿನಾಯಕ ದೇವಾಲಯವನ್ನು ನೆಲಸಮಗೊಳಿಸಲು ಮುಂದಾದರೆ ಉಗ್ರಹೋರಾಟ ನಡೆಸಲಾಗುವುದು ಎಂದು ತಾಲೂಕು ಬಿಜೆಪಿ ಅಧ್ಯಕ್ಷ ವೀರಭದ್ರಯ್ಯ ಎಚ್ಚರಿಕೆ ನೀಡಿದರು.
ಕೆಶಿಫ್ ರಸ್ತೆ ವಿಸ್ತರಣೆಗಾಗಿ ದೇವಾಲಯವನ್ನು ಸ್ಥಳಾಂತರ ಮಾಡಲು ಮುಂದಾಗಿರುವುದು ಬಹುಸಂಖ್ಯಾತ ಹಿಂದುಗಳ ಭಾವನೆಗೆ ಧಕ್ಕೆಯಾಗಿದೆ. ಕೆಲ ಆದೇಶಗಳಲ್ಲಿ ದೇವಾಲಯ ತೆರವುಗೊಳಿಸುವುದನ್ನು ಕೈಬಿಡಲಾಗಿದೆ. ಅದೇ ರೀತಿ ಈ ದೇವಾಲಯವನ್ನು ಮಧ್ಯದಲ್ಲಿ ಉಳಿಸಿ ಸುತ್ತ ರಸ್ತೆ ನಿರ್ಮಿಸಲಿ. ಅವರು ನೆಲಸಮಗೊಳಿಸಲೇಬೇಕು ಎನ್ನುವುದಾದರೆ ಬಹು ಸಂಖ್ಯಾತರ ವಿರೋಧ ಎದುರಿಸಬೇಕಾಗುತ್ತದೆ. ದೇವಾಲಯ ಉಳಿವಿಗಾಗಿ ಸಂಬಂಧಪಟ್ಟವರೊಂದಿಗೆ ಮಾತುಕತೆ ನಡೆಸಲಾಗಿದೆ. ಈ ಸಂಬಂಧ ಶಾಸಕ ಎಚ್.ಸಿ.ಬಾಲಕೃಷ್ಣ ಅವರ ಗಮನಕ್ಕೂ ತರಲಾಗಿದೆ. ಶಾಸಕರು ದೇವಾಲಯವನ್ನು ಉಳಿಸಲು ಮುಂದಾಗಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಬಿಜೆಪಿ ಮುಖಂಡ ಕೆ.ಆರ್.ಪ್ರಸಾದ್ ಗೌಡ ಮಾತನಾಡಿ, ಕೆಶಿಫ್ ರಸ್ತೆ ವಿಸ್ತರಣೆಯಿಂದ ವಿಘ್ನನಿವಾರಕನಿಗೆ ವಿಘ್ನ ಬಂದಿದೆ. ಯಥಾಸ್ಥಿತಿ ದೇವಾಲಯ ಉಳಿಸಿದರೆ ರಸ್ತೆ ನಿರ್ಮಿಸಲು ಸಹಕಾರ ನೀಡುತ್ತೇವೆ. ಇಲ್ಲದಿದ್ದರೆ ಸಂಸದ ಡಾ.ಸಿ.ಎನ್.ಮಂಜುನಾಥ್ ಹಾಗೂ ಇತರ ಮುಖಂಡರ ನೇತೃತ್ವದಲ್ಲಿ ಧರಣಿ ಕುಳಿತು ಉಗ್ರಹೋರಾಟ ನಡೆಸುತ್ತೇವೆ. ಕಾನೂನು ಹೋರಾಟ ನಡೆಸಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಎಚ್ಚರಿಸಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಆರ್.ರಾಘವೇಂದ್ರ ಮಾತನಾಡಿ, ಯಾವುದೇ ಕಾರಣಕ್ಕೂ ದೇವಾಲಯ ತೆರವುಗೊಳಿಸಲು ಬಿಡುವುದಿಲ್ಲ. ಇದರಿಂದ ಮಾಗಡಿ ಹಿಂದುಗಳಿಗೆ ಧಾರ್ಮಿಕ ನೆಲೆಗಟ್ಟಿನಲ್ಲಿ ಧಕ್ಕೆ ಉಂಟಾಗಲಿದೆ. 300 ವರ್ಷ ಇತಿಹಾಸಹೊಂದಿರುವ ಅಶ್ವತ್ಥ ವೃಕ್ಷವು ಸಹಸ್ತ್ರಾರು ಮಂದಿಗೆ ನ್ಯಾಯದೊರಕಿಸುವುದರೊಂದಿಗೆ ಇದರ ಸುತ್ತಮುತ್ತಲಿನ ಜನರಿಗೆ ಜೀವನ ಕಟ್ಟಿಕೊಟ್ಟಿದೆ. ಶಾಸಕರ ತಂದೆಯೂ ಸಹ ಇದೇ ಅಶ್ವತ್ಥ ವೃಕ್ಷದ ಕೆಳಗೆ ಕುಳಿತು ನೂರಾರು ನ್ಯಾಯ ಮಾಡಿದ್ದಾರೆ. ಇಂತಹ ಐತಿಹಾಸಿಕ ವೃಕ್ಷ ಹಾಗೂ ದೇವಾಲಯವನ್ನು ರಕ್ಷಿಸಲು ಮುಂದಾಗಬೇಕು ಎಂದರು. ಒಬಿಸಿ ತಾಲೂಕು ಅಧ್ಯಕ್ಷ ಕುಮಾರಸ್ವಾಮಿ, ಕಾರ್ಯದರ್ಶಿ ಗೌತಮ್, ಉಪಾಧ್ಯಕ್ಷ ರಾಜಣ್ಣ, ಚಕ್ರಭಾವಿ ಯೋಗಣ್ಣ, ಜಯರಾಮು ಬಜ್ಜ ಇದ್ದರು.
ಅವೈಜ್ಞಾನಿಕ ಆದೇಶ ಕೈಬಿಡಿ
ದೇವಾಲಯ ತೆರವುಗೊಳಿಸಿ ರಸ್ತೆ ನಿರ್ಮಿಸುವುದು ಅಭಿವೃದ್ಧಿ ಅಲ್ಲ. ದೇವಾಲಯ ಸುತ್ತಲಿನ ಜಾಗದಲ್ಲಿ ರಸ್ತೆ ನಿರ್ಮಿಸಿ ಅಭಿವೃದ್ಧಿ ಮಾಡಲಿ. ಅಭಿವೃದ್ಧಿ ವಿಚಾರವಾಗಿ ಶಾಸಕರಿಗೆ ಸಹಕಾರ ನೀಡುತ್ತೇವೆ. ಆದರೆ, ಇಂತಹ ಅವೈಜ್ಞಾನಿಕ ಆದೇಶವನ್ನು ಕೈಬಿಡಬೇಕು. ಶಾಸಕ ಎಚ್.ಸಿ.ಬಾಲಕೃಷ್ಣ ಅವರು ಚುನಾವಣೆ ನಾಮಪತ್ರ ಸಲ್ಲಿಸುವ ಮುನ್ನ ಇದೇ ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸಿ, 5 ಬಾರಿ ಗೆದ್ದಿದ್ದಾರೆ. ಈ ಬಗ್ಗೆ ಸಲ್ಪ ಯೋಚಿಸಿ ದೇವಾಲಯ ಉಳಿವಿಗೆ ಸಹಕಾರ ನೀಡಬೇಕು ಎಂದು ವೀರಭದ್ರಯ್ಯ ಮನವಿ ಮಾಡಿದರು.