

ಬೆಂಗಳೂರು: ನಗರದಲ್ಲಿ ವರಮಹಾಲಕ್ಷ್ಮೀ ಹಬ್ಬ ಶುಕ್ರವಾರ ಸಡಗರ ಸಂಭ್ರಮದಿಂದ ಆಚರಣೆಗೊಂಡಿತು. ಹೆಂಗಳೆಯರು ಸಂಪತ್ತಿನ ಅಧಿದೇವತೆ ವರಮಹಾಲಕ್ಷ್ಮೀಯನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸಿ ಸಕಲ ಸಂಪತ್ತು ಕರುಣಿಸುವಂತೆ ಹಾಗೂ ಇಷ್ಟಾರ್ಥ ಸಿದ್ಧಿಸುವಂತೆ ಪ್ರಾರ್ಥಿಸಿದರು.
ಮನೆಗಳಲ್ಲಿ ಬೆಳಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಲಕ್ಷ್ಮೀದೇವಿಯನ್ನು ಪ್ರತಿಷ್ಠಾಪಿಸಿ ಬಗೆಬಗೆಯ ಹೂಗಳಿಂದ ಅಲಂಕರಿಸಿ, ತರಹೇವಾರಿ ಹಣ್ಣು ಹಾಗೂ ಭಕ್ಷ್ಯಗಳ ನೈವೇದ್ಯ ಅರ್ಪಿಸಿ ಪೂಜಿಸಿದರು. ಸಂಜೆ ಹೊತ್ತಿಗೆ ಆರತಿ ಮಾಡಿ ಬಂಧುಗಳು- ಹಿತೈಷಿಗಳ ಸಮ್ಮುಖದಲ್ಲಿ ಅರಿಶಿನ- ಕುಂಕುಮ, ಹೂವು, ಬಳೆಗಳೊಂದಿಗೆ ಬಾಗಿನ ನೀಡಿದರು. ಮನೆಯಲ್ಲಿ ಮಾತ್ರವಲ್ಲದೇ ಕಚೇರಿಗಳಲ್ಲೂ ಹಬ್ಬದ ಕಳೆ ಕಂಡುಬಂತು.
ವರಮಹಾಲಕ್ಷ್ಮೀ ಹಬ್ಬದ ಅಡುಗೆಯಲ್ಲಿ ಒಬ್ಬಟ್ಟು ಪ್ರಧಾನ. ಜತೆಗೆ ವಿವಿಧ ಭಕ್ಷ್ಯಗಳನ್ನು ತಯಾರಿಸಿ ಕುಟುಂಬಸಮೇತರಾಗಿ ಊಟ ಮಾಡಿ ಹಬ್ಬ ಆಚರಿಸಿದರು. ಬನಶಂಕರಿ, ರಾಜರಾಜೇಶ್ವರಿ, ಮೆಜೆಸ್ಟಿಕ್‌ನ ಅಣ್ಣಮ್ಮದೇವಿ, ಗಂಗಮ್ಮದೇವಿ, ಮಲ್ಲೇಶ್ವರದ ಸರ್ಕಲ್ ಮಾರಮ್ಮ, ಯಶವಂತಪುರದ ಚೌಡೇಶ್ವರಿ ದೇವಿ, ಪುಟ್ಟೇನಹಳ್ಳಿಯ ಮಹಾಲಕ್ಷ್ಮೀ ದೇವಾಲಯ, ವೈಯಾಲಿಕಾವಲ್‌ನ ಲಕ್ಷ್ಮೀ ದೇವಾಲಯ ಸೇರಿ ದೇವಿ ದೇವಾಲಯಗಳಲ್ಲಿ ವಿಶೇಷ ಅಲಂಕಾರದೊಂದಿಗೆ ಪೂಜೆ ನೆರವೇರಿಸಲಾಯಿತು.
ದೇವಾಲಯಗಳಲ್ಲಿ ವಿಶೇಷ ಪೂಜೆ:
ರಾಜಧಾನಿಯ ಲಕ್ಷ್ಮೀ ದೇವಾಲಯಗಳಲ್ಲಿ ವಿಶೇಷ ಪೂಜೆ- ಅಲಂಕಾರ ನಡೆಯಿತು. ಕನಕಪುರ ರಸ್ತೆಯಲ್ಲಿರುವ ಇಸ್ಕಾನ್‌ನ ವೈಕುಂಠಗಿರಿಯ ಶ್ರೀ ರಾಜಲಕ್ಷ್ಮಿ ಪದ್ಮಾವತಿ ದೇವಾಲಯ, ಜೆ.ಪಿ. ನಗರ 6ನೇ ಹಂತದಲ್ಲಿರುವ ಲಕ್ಷ್ಮೀ ದೇವಾಲಯ, ಕೋಣನಕುಂಟೆಯಲ್ಲಿರುವ (ಪುಟ್ಟೇನಹಳ್ಳಿ) ಮಹಾಲಕ್ಷ್ಮೀ ದೇವಸ್ಥಾನ, ಪದ್ಮನಾಭನಗರದ ಲಕ್ಷ್ಮೀಕಾಂತ ದೇವಸ್ಥಾನದಲ್ಲಿ ಹಬ್ಬ ಅಂಗವಾಗಿ ಶುಕ್ರವಾರ ವಿಶೇಷ ಪೂಜೆ ಮತ್ತು ಮಹಾಲಕ್ಷ್ಮೀಯ ಅಲಂಕಾರ ಮಾಡಲಾಗಿತ್ತು. ಟಿ.ಆರ್. ಮಿಲ್, ಶ್ರೀನಗರಗಳಲ್ಲಿ ಲಕ್ಷ್ಮೀ ದೇಗುಲ, ದೇವಗಿರಿ ವೆಂಕಟರಮಣ ಲಕ್ಷ್ಮೀ ದೇವಸ್ಥಾನ, ಮಹಾಲಕ್ಷ್ಮೀ ಲೇಔಟ್ ಲಕ್ಷ್ಮೀ ದೇವಸ್ಥಾನ, ಶೇಷಾದ್ರಿಪುರಂನ ಮಹಾಲಕ್ಷ್ಮೀ ಮಂದಿರ, ಹೆಬ್ಬಾಳದ ಕೆಂಪಾಪುರದ ಮಹಾಲಕ್ಷ್ಮೀ ದೇವಸ್ಥಾನ ಹೀಗೆ ನಾನಾ ದೇವಾಲಯಗಳಲ್ಲಿ ವಿಶೇಷ ಪೂಜೆ ಮತ್ತು ನಾನಾ ಲಕ್ಷ್ಮಿಯರ ಅಲಂಕಾರ ಮಾಡಲಾಗಿತ್ತು.