

ಪಂಕಜ ಕೆ.ಎಂ. ಬೆಂಗಳೂರು
ನಗರದಲ್ಲಿ ವರಮಹಾಲಕ್ಷ್ಮೀ ಹಬ್ಬದ ಆಚರಣೆಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಕಳೆದ 4-5 ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಮಾರುಕಟ್ಟೆಗೆ ನಿರೀಕ್ಷಿತ ಪ್ರಮಾಣದಲ್ಲಿ ಹೂವು- ಹಣ್ಣು ಪೂರೈಕೆಯಾಗದೆ ಬೇಡಿಕೆಯೊಂದಿಗೆ ದರವೂ ಏರಿಕೆಯಾಗಿದೆ.
ಹವಾಮಾನ ಇಲಾಖೆ ವರದಿ ಪ್ರಕಾರ, ಶನಿವಾರದವರೆಗೂ ಮಳೆ ಆಗಲಿದೆ. ಅಲ್ಲದೆ ಈ ಬಾರಿ ಬೇಸಿಗೆಯಲ್ಲಿ ತಾಪಮಾನ ಹೆಚ್ಚಾಗಿದ್ದರಿಂದ ಹೂವಿನ ಬೆಳೆ ಇರಲಿಲ್ಲ. ಇದೀಗ ಉತ್ತಮ ಬೆಳೆ ಇದ್ದರೂ ಮಳೆಯಿಂದಾಗಿ ಪೂರೈಕೆಯಾಗುತ್ತಿಲ್ಲ. ಇನ್ನು ತಮಿಳುನಾಡಿನಿಂದಲೂ ಹೂವಿನ ಆಗಮನ ಪ್ರಮಾಣ ಇಳಿಕೆಯಾಗಿದೆ. ಉಳಿದಂತೆ ಬೆಂಗಳೂರು ಸುತ್ತಮುತ್ತ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಕೋಲಾರ, ದೇವನಹಳ್ಳಿ ಮತ್ತಿತರ ಭಾಗಗಳಿಂದ ಹೂವು ಬರುತ್ತಿವೆಯಾದರೂ ಬೇಡಿಕೆಗೆ ತಕ್ಕಂತೆ ಇಲ್ಲ. ಇದರಿಂದ ಹಬ್ಬಕ್ಕೆ ದರ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎನ್ನುತ್ತಾರೆ ವ್ಯಾಪಾರಿಗಳು.
ದರ ಹೆಚ್ಚಳ ಆಗಲಿದೆ ಎಂಬ ಕಾರಣಕ್ಕೆ ಜನರು ಹಬ್ಬಕ್ಕೆ ಮುಂಚಿತವಾಗಿಯೇ ಖರೀದಿಯಲ್ಲಿ ತೊಡಗಿದ್ದು, ಕೆ.ಆರ್. ಮಾರುಕಟ್ಟೆಯಲ್ಲಿ ಮಳೆ ನಡುವೆಯೇ ಜನರು ಹೂವು- ಹಣ್ಣು ಸೇರಿ ಹಬ್ಬಕ್ಕೆ ಬೇಕಾದ ವಸ್ತುಗಳ ಖರೀದಿಯಲ್ಲಿ ನಿರತರಾಗಿದ್ದ ದೃಶ್ಯ ಸಾಮಾನ್ಯವಾಗಿತ್ತು. ಅಲ್ಲದೆ ಯಶವಂತಪುರ, ದಾಸರಹಳ್ಳಿ, ಮಲ್ಲೇಶ್ವರ, ಗಾಂಧಿ ಬಜಾರ್, ಮಡಿವಾಳ ಸೇರಿ ಸಮೀಪದ ಮಾರುಕಟ್ಟೆಗಳಿಗೆ ತೆರಳಿ ಹೂ ಹಣ್ಣುಗಳ ಜತೆಗೆ ಪೂಜಾ ಸಾಮಗ್ರಿಗಳನ್ನು ಖರೀದಿಸಿದರು.
ಮಳೆಯಿಂದ ದರ ಹೆಚ್ಚಳ:
ಕೆ.ಆರ್. ಮಾರುಕಟ್ಟೆಯಲ್ಲಿ ಕನಕಾಂಬರ ಹೂವಿನ ಸಗಟು ದರ ಕೆ.ಜಿ.ಗೆ 1,000-1,200 ರೂ., ಮಲ್ಲಿಗೆ ಕೆಜಿಗೆ 600-800 ರೂ. ಕೇದಗೆ ಒಂದಕ್ಕೆ 50-60 ರೂ., ಸೇವಂತಿಗೆ 250-500 ರೂ., ತುಳಸಿ, ದವನ, ಗುಲಾಬಿ ಹೂ 250- 300 ರೂ., ತಾವರೆ ಒಂದಕ್ಕೆ 50-80 ರೂ. ಸೇರಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹೂವಿನ ದರ ಶೇ.20 ಏರಿಕೆಯಾಗಿದೆ. ಬಾಳೆ ಕಂದು ಗಾತ್ರಕ್ಕೆ ಅನುಗುಣವಾಗಿ ಮಾರಾಟ ಮಾಡಲಾಗುತ್ತಿದೆ.
ಹಣ್ಣುಗಳ ಬೆಲೆಯೂ ಏರಿಕೆ:
ಲಕ್ಷ್ಮೀ ಹಬ್ಬಕ್ಕೆ ಹೂವು ಖರೀದಿಸಿದಂತೆ ಹಣ್ಣುಗಳನ್ನು ಕೂಡ ಖರೀದಿಸುತ್ತಾರೆ. ಪೂಜೆಗೆ ನಾನಾ ಬಗೆಯ ಹಣ್ಣುಗಳನ್ನು ಜೋಡಿಸಲಾಗುತ್ತದೆ. ಹೀಗಾಗಿ ಬೇಡಿಕೆ ಹೆಚ್ಚು. ಆದರೆ ಈ ಬಾರಿ ಮಳೆಯಿಂದ ಬೆಳೆ ಹಾಳಾಗಿದ್ದು, ಹಣ್ಣಿನ ದರವೂ ಏರಿಕೆಯಾಗಿದೆ. ಏಲಕ್ಕಿ ಬಾಳೆ ಕೆ.ಜಿ.ಗೆ 120-140 ರೂ., ಸೀಬೆ 100 ರೂ., ಅನಾನಸ್ ಜೋಡಿಗೆ 60 ರೂ., ಮೂಸಂಬಿ 120 ರೂ., ದಾಳಿಂಬೆ 250-300 ರೂ., ಸೇಬು 250-300 ರೂ.ಗೆ ಮಾರಾಟವಾಗುತ್ತಿವೆ.
ಅಂಗಡಿ ಮಳಿಗೆಗಳಲ್ಲಿ ಜನದಟ್ಟಣೆ
ಲಕ್ಷ್ಮೀ ಹಬ್ಬ ಆಚರಿಸುವವರು ದೇವಿಗೆ ಸೀರೆ ಉಡಿಸಿ ಅಲಂಕರಿಸುತ್ತಾರೆ. ಬಂದವರಿಗೆ ತಾಂಬೂಲದ ಜತೆಗೆ ರವಿಕೆ ಮತ್ತು ಬಳೆ ನೀಡುತ್ತಾರೆ. ಇದಲ್ಲದೆ ತಿಂಗಳಾಂತ್ಯಕ್ಕೆ ಗೌರಿ ಹಬ್ಬವೂ ಬಂದಿರುವುದರಿಂದ ಬಾಗಿನ ಕೊಡಲು ಬಹುತೇಕರು ಈಗಲೇ ಸೀರೆ ಖರೀದಿಯಲ್ಲಿ ತೊಡಗಿಕೊಂಡಿದ್ದಾರೆ. ಹಾಗಾಗಿ ಮಂಗಳವಾರ ಬಟ್ಟೆ ಅಂಗಡಿಗಳು ಹಾಗೂ ಸ್ಟೋರ್‌ಗಳು, ಒಡವೆ ಅಂಗಡಿಗಳು ಮಹಿಳೆಯರಿಂದ ತುಂಬಿದ್ದವು.
ಲಕ್ಷ್ಮೀ ವಿಗ್ರಹಗಳ ಮಾರಾಟ
ವರಮಹಾಲಕ್ಷ್ಮೀ ಹಬ್ಬದಲ್ಲಿ ಹಿಂದೆಲ್ಲಾ ಕಳಸದಲ್ಲಿ ನೀರು ತುಂಬಿ, ವೀಳ್ಯದೆಲೆ ನಡುವೆ ತೆಂಗಿನ ಕಾಯಿ ಇಟ್ಟು ಅದಕ್ಕೆ ಅರಿಶಿನ ಕುಂಕುಮದಿಂದ ಲಕ್ಷ್ಮೀ ರೂಪ ನೀಡಿ, ಕಳಸಕ್ಕೆ ಸೀರೆ ಉಡಿಸಿ ಹೂ ಮುಡಿಸಿ ಬಳೆಗಳೊಂದಿಗೆ ಮನೆಯಲ್ಲಿರುವ ಒಡವೆಗಳನ್ನು ತೊಡಿಸಿ ಸಿಂಗಾರಿಸಿ ಪೂಜೆ ಮಾಡಲಾಗುತ್ತಿತ್ತು. ನಂತರದಲ್ಲಿ ಬೆಳ್ಳಿಯ ಮುಖವಾಡ ರೂಢಿಗೆ ಬಂತು. ಕೆಲ ವರ್ಷಗಳಿಂದ ಲಕ್ಷ್ಮೀ ವಿಗ್ರಹಕ್ಕೆ ಸೀರೆ ಉಡಿಸಿ, ಆಭರಣಗಳಿಂದ ಅಲಂಕರಿಸಿರುವ ವಿಗ್ರಹಗಳಿಗೆ ಬೇಡಿಕೆ ಹೆಚ್ಚಿದೆ. ಕೆಲಸಕ್ಕೆ ಹೋಗುವವರು ಸಿದ್ಧತೆ ಮಾಡಲು ಸಮಯದ ಅಭಾವದಿಂದಾಗಿ ಹಾಗೂ ಮನೆಯಲ್ಲಿ ಲಕ್ಷ್ಮೀ ಕೂರಿಸಿದಾಗ ಹೆಚ್ಚು ಆಕರ್ಷಕವಾಗಿ ಕಾಣಬೇಕು ಎಂದು ಬಯಸುವವರು ಈ ವಿಗ್ರಹಗಳನ್ನು ತಂದು ಪೂಜಿಸುತ್ತಾರೆ. ಹಾಗಾಗಿ ಮಾರುಕಟ್ಟೆಗಳಲ್ಲಿ 500ರಿಂದ 5 ಸಾವಿರ ರೂ.ಗೂ ಹೆಚ್ಚು ಬೆಲೆಯಲ್ಲಿ ಅಕರ್ಷಕ ಲಕ್ಷ್ಮೀ ವಿಗ್ರಹಗಳು ಮಾರಾಟಕ್ಕಿವೆ.
ಕೆ.ಆರ್. ಮಾರುಕಟ್ಟೆಯಲ್ಲಿ ಹೂವು ದರ (ಪ್ರತಿ ಕೆ.ಜಿ.ಗೆ)
ಕನಕಾಂಬರ 1000-1,200 ರೂ.
ಮಲ್ಲಿಗೆ, ಮಳ್ಳೆ 600-800 ರೂ.
ಕಾಕಡ 600-700 ರೂ.
ಸೇವಂತಿಗೆ 250- 500 ರೂ.
ಗುಲಾಬಿ 250 -300ರೂ.
ಕಣಿಗಲೆ 250 -300 ರೂ.
ಬಟನ್ಸ್ 250-300 ರೂ.
ಸುಂಗಂಧರಾಜ 180-200 ರೂ.
ತಾವರೆ(ಒಂದಕ್ಕೆ) 50-80 ರೂ.
ಕೇದಗೆ ಒಂದಕ್ಕೆ 50-60 ರೂ.