ನಗರದಲ್ಲಿ ಸಡಗರ ಸಂಭ್ರಮದಿಂದ ವರಮಹಾಲಕ್ಷ್ಮೀ ಹಬ್ಬ ಆಚರಣೆ

Mahalaxmi_Temple_Puttenahalli (2)
Published on

* ದೇವಾಲಯಗಳಲ್ಲಿ ಮಹಿಳೆಯರಿಗೆ ಅರಿಶಿಣ- ಕುಂಕುಮದ ಬಾಗಿನ ವತರಣೆ

ಬೆಂಗಳೂರು: ನಗರದಲ್ಲಿ ಶುಕ್ರವಾರ ವರಮಹಾಲಕ್ಷ್ಮೀ ಹಬ್ಬ ಸಡಗರ ಸಂಭ್ರಮದಿಂದ ಆಚರಣೆಗೊಂಡಿತು. ಹೆಂಗೆಳೆಯರು ಸಂಪತ್ತಿನ ಅಧಿದೇವತೆ ವರಮಹಾಲಕ್ಷ್ಮೀಯನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸಿ ಸಕಲ ಸಂಪತ್ತು ಕರುಣಿಸುವಂತೆ ಹಾಗೂ ಇಷ್ಟಾರ್ಥ ಸಿದ್ಧಿಸುವಂತೆ ಪ್ರಾರ್ಥಿಸಿದರು.

ಮುಂಜಾನೆಯೇ ಮನೆ ಅಂಗಳದಲ್ಲಿ ಬಣ್ಣಗಳಿಂದ ರಂಗೋಲಿ ಬಿಡಿಸಿ, ತಳಿರು ತೋರಣಗಳಿಂದ ಸಿಂಗರಿಸಿ ಬ್ರಾಹ್ಮಿಮುಹೂರ್ತದಲ್ಲಿ ಲಕ್ಷ್ಮಿಯನ್ನು ಪ್ರತಿಷ್ಠಾಪಿಸಿ ಸೀರೆ ಉಡಿಸಿ, ಬಳೆ ತೊಡಿಸಿ, ಹೂ ಗಳಿಂದ ಅಲಂಕರಿಸಿ, ಹಣ್ಣುಗಳನ್ನು ಇಟ್ಟು, ಬಗೆ ಬಗೆಯ ಖಾದ್ಯಗಳ ನೈವೇದ್ಯ ಮಾಡಿ ವರಮಹಾಲಕ್ಷ್ಮೀಯನ್ನು ಪೂಜಿಸಿದರು.

ಸಂಜೆ ಹೊತ್ತಿಗೆ ಆರತಿ ಮಾಡಿ ನೆರೆ ಹೊರೆಯವರನ್ನು ಕರೆದು ಅರಿಶಿನ-ಕುಂಕುಮ, ಹೂವು, ಬಳೆಗಳೊಂದಿಗೆ ಬಾಗಿನ ನೀಡಿ ಸಂಭ್ರಮಿಸಿದರು. ಮನೆಯಲ್ಲಿ ಮಾತ್ರವಲ್ಲದೇ ಕಚೇರಿಗಳಲ್ಲೂ ಹಬ್ಬದ ಕಳೆ ಇಮ್ಮಡಿಗೊಂಡಿತ್ತು.

ಅಡುಗೆಯ ಸವಿ: ವರಮಹಾಲಕ್ಷ್ಮೀ ಹಬ್ಬದ ಅಡುಗೆಯಲ್ಲಿ ಒಬ್ಬಟ್ಟು ಪ್ರದಾನ ಪಾತ್ರ ವಹಿಸುತ್ತದೆ. ಮನೆಗಳಲ್ಲಿ ಒಬ್ಬಟ್ಟಿನೊಂದಿಗೆ ಇತರೆ ಖಾದ್ಯಗಳನ್ನು ಮಾಡಿಕೊಂಡು ಕುಟುಂಬ ಸಮೇತರಾಗಿ ಊಟ ಮಾಡಿ ಹಬ್ಬ ಆಚರಿಸಿದರು. ಸಂಜೆ ಮಹಿಳೆಯರು ಪರಸ್ಪರ ಬಾಗಿನ ನೀಡಿ ಸಂಭ್ರಮಿಸಿದರು.

ದೇವಾಲಯಗಳಲ್ಲೂ ಸಂಭ್ರಮ: ಬನಶಂಕರಿ, ರಾಜರಾಜೇಶ್ವರಿ, ಗಂಗಮ್ಮದೇವಿ, ಸರ್ಕಲ್ ಮಾರಮ್ಮ, ಅಣ್ಣಮ್ಮ, ಯಶವಂತಪುರದ ಚೌಡೇಶ್ವರಿ ದೇವಿ, ಪುಟ್ಟೇನಹಳ್ಳಿಯ ಮಹಾಲಕ್ಷ್ಮೀ ದೇವಾಲಯ, ವೈಯಾಲಿಕಾವಲ್‌ನ ಲಕ್ಷ್ಮೀ ದೇವಾಲಯ ಸೇರಿ ದೇವಿ ದೇವಾಲಯಗಳಲ್ಲಿ ವಿಶೇಷ ಅಲಂಕಾರದೊಂದಿಗೆ ಪೂಜೆ ನಡೆಯಿತು.

ದೇವಾಲಯಗಳಲ್ಲಿ ಬಾಗಿನ ವಿತರಣೆ: ಕಳೆದ ವರ್ಷದಂತೆ ಈ ಬಾರಿಯೂ ವರಮಹಾಲಕ್ಷ್ಮಿ ಹಬ್ಬದ ದಿನದಂದು ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಾಲಯಗಳಿಗೆ ಆಗಮಿಸಿದ ಮಹಿಳೆಯರಿಗೆ ಶುಕ್ರವಾರ ಅರಿಶಿಣ ಕುಂಕುಮ, ಹಸಿರು ಬಳೆ ಸಹಿತ ಬಾಗಿನ ವಿತರಿಸಲಾಯಿತು.

ನಗರದಲ್ಲಿ ಬನಶಂಕರಿ ದೇವಿ ದೇವಾಲಯದಲ್ಲಿ ಬನಶಂಕರಿ ಅಮ್ಮನಿಗೆ ಒಣ ಹಣ್ಣುಗಳಿಂದ (ಡ್ರೈ ್ರೂಟ್ಸ್) ವಿಶೇಷ ಅಲಂಕಾರ ಮಾಡಲಾಗಿತ್ತು. ಬೆಳಗ್ಗೆಯಿಂದಲೇ ಮಹಿಳೆಯರು ಸಾಲು ಸಾಲಾಗಿ ದೇವಾಲಯಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದರು. ದೇವಿಗೆ ನಿಂಬೆಹಣ್ಣಿನ ಹಾಗೂ ಬೆಲ್ಲದ ಆರತಿ ಬೆಳಗಿದರು. ಈ ವೇಳೆ ಭಕ್ತರಿಗೆ ದೇವಾಲಯದ ವತಿಯಿಂದ ಅರಿಶಿನ - ಕುಂಕುಮ - ಬಳೆ ಹಾಗೂ ರವಿಕೆ ಸಹಿತ ಬಾಗಿನ ವಿತರಿಸಲಾಯಿತು. 30 ಸಾವಿರಕ್ಕೂ ಅಧಿಕ ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದರು. ಪ್ರಸಾದವಾಗಿ ಪಾಯಸ, ಸಿಹಿ ಪೊಂಗಲ್, ರೈಸ್‌ಬಾತ್ ಮತ್ತು ಮೈಸೂರು ಪಾಕ್ ನೀಡಲಾಯಿತು.

ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ರಾಜ್ಯದ ಮುಜರಾಯಿ ದೇವಸ್ಥಾನಗಳಲ್ಲಿ ಮಹಿಳೆಯರಿಗೆ ಅರಿಶಿನ-ಕುಂಕುಮ ಹಾಗೂ ಗಾಜಿನ ಬಳೆಗಳನ್ನು ವಿತರಿಸುವಂತೆ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿತ್ತು. ಅದರಂತೆ ಬನಶಂಕರಿ ದೇವಾಲಯ, ದುರ್ಗಾ ಪರಮೇಶ್ವರಿ, ದೊಡ್ಡ ಗಣಪತಿ ದೇವಾಲಯ, ಶ್ರೀ ಪ್ರಸನ್ನ ಆಂಜನೇಯಸ್ವಾಮಿ ದೇವಾಲಯ ಸೇರಿ ನಗರದ ಪ್ರಮುಖ ದೇವಾಲಯಗಳಲ್ಲಿ ಭಕ್ತರಿಗೆ ಬಾಗಿನ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net