ವರಮಹಾಲಕ್ಷ್ಮೀ ಹಬ್ಬಕ್ಕೆ ಖರೀದಿ ಭರಾಟೆ

Sudhee_14_Varamahalaxmi_Festival_Crowd_@_KR_Market (2)
Published on

ಬೆಂಗಳೂರು: ವರಮಹಾಕ್ಷ್ಮೀ ಹಬ್ಬಕ್ಕೆ ನಗರದೆಲ್ಲೆಡೆ ಈಗಾಗಲೇ ಸಂಭ್ರಮ ಮನೆ ಮಾಡಿದ್ದು, ಪ್ರಮುಖ ಮಾರುಕಟ್ಟೆಗಳಲ್ಲಿ ಹಾಗೂ ಅಂಗಡಿಗಳಲ್ಲಿ ಖರೀದಿ ಭರಾಟೆ ಜೋರಾಗಿದೆ. ಈ ಹಬ್ಬಕ್ಕೆ ಅತೀ ಮುಖ್ಯವಾಗಿರುವ ಹೂವು, ಹಣ್ಣು ಸೇರಿ ಅಲಂಕಾರಿಕ ವಸ್ತುಗಳಿಗೆ ಬೇಡಿಕೆ ಹೆಚ್ಚಾಗಿರುವ ಕಾರಣ ಬೆಲೆಯೂ ಏರಿಕೆಯಾಗಿದೆ.

ಹಬ್ಬದ ದಿನ ಮತ್ತಷ್ಟು ದರ ಹೆಚ್ಚಳವಾಗುವ ಸಾಧ್ಯತೆ ಇರುವುದರಿಂದ ಎರಡು ದಿನ ಮುಂಚಿತವಾಗಿಯೇ ಖರೀದಿಯಲ್ಲಿ ತೊಡಗಿದ್ದಾರೆ. ಹೀಗಾಗಿ ಬುಧವಾರ ನಗರದ ವಿವಿಧ ಮಾರುಕಟ್ಟೆಗಳು ಜನರಿಂದ ಕಿಕ್ಕಿರಿದು ತುಂಬಿದ್ದವು. ಬಿಸಿಲನ್ನೂ ಲೆಕ್ಕಿಸದೆ ವ್ಯಾಪಾರಿಗಳು ಮಾರಾಟ ಮಾಡುತ್ತಿದ್ದರೆ, ಗ್ರಾಹಕರು ಖರೀದಿಯಲ್ಲಿ ನಿರತರಾಗಿದ್ದರು.

ಕೆ.ಆರ್. ಮಾರುಕಟ್ಟೆ, ಮಲ್ಲೇಶ್ವರ, ಯಶವಂತಪುರ, ದಾಸರಹಳ್ಳಿ, ಮಡಿವಾಳ, ವಿಜಯನಗರ, ಜಯನಗರ, ಗಾಂಧಿ ಬಜಾರ್ ಸೇರಿ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಪೂಜಾ ಸಾಮಗ್ರಿಗಳು, ಲಕ್ಷ್ಮೀಪೂಜೆಗೆ ಅಗತ್ಯವಿರುವ ಅಲಂಕಾರಿಕ ಸಾಮಗ್ರಿಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ. ಇದಲ್ಲದೆ ಹಬ್ಬದ ಸಲುವಾಗಿ ನಗರದ ಪ್ರತಿ ಬಡಾವಣೆಯಲ್ಲೂ ಮಿನಿ ಮಾರುಕಟ್ಟೆಗಳು ತಲೆಎತ್ತಿದ್ದು, ಅಲ್ಲಿಯೂ ಖರೀದಿ-ಮಾರಾಟಗಾರರ ಬಿರುಸಾಗಿ ಸಾಗುತ್ತಿದೆ.

ವಿಗ್ರಹಗಳಿಗೆ ಬೇಡಿಕೆ: ಮಾರುಕಟ್ಟೆಗಳಲ್ಲಿ ಆಕರ್ಷಕ ರೆಡಿಮೇಡ್ ಲಕ್ಷ್ಮೀ ವಿಗ್ರಹಗಳು ಗಮನ ಸೆಳೆಯುತ್ತಿದ್ದು, ಜೊತೆಗೆ ಈ ಬಾರಿ ಲಕ್ಷ್ಮೀ ಪೂಜೆಗೆ ಅಲಂಕಾರ ಮಾಡಲು ವಿವಿಧ ವಿನ್ಯಾಸಗಳ ಆಕರ್ಷಕ ಸ್ಟಾೃಂಡ್‌ಗಳು ಹೆಚ್ಚು ಬೇಡಿಕೆ ಪಡೆದುಕೊಂಡಿವೆ. ರೆಡಿಮೇಡ್ ಲಕ್ಷ್ಮೀ ವಿಗ್ರಹಗಳು 3 ಸಾವಿರದಿಂದ 8 ಸಾವಿರ ರೂ.ವರೆಗೆ ಮಾರಾಟವಾಗುತ್ತಿದ್ದು, ಅಲಂಕಾರಿಕ ಸ್ಟಾೃಂಡ್‌ಗಳು 5 ಸಾವಿರಿಂದ 25 ಸಾವಿರದವರೆಗೂ ಲಭ್ಯವಿದೆ. ಜನರು ತಮ್ಮ ಶಕ್ತಿಗೆ ಅನುಸಾರವಾಗಿ ಕೊಳ್ಳುತ್ತಿದ್ದಾರೆ. ಪೂಜಾ ಸಾಮಗ್ರಿಗಳ ಹೊರತಾಗಿ ಸೀರೆ, ಬಟ್ಟೆ, ಬಳೆಯಂತಹ ಇತರೆ ವಸ್ತುಗಳ ಖರೀದಿಯೂ ಜೋರಾಗಿದೆ.

ಹೂ ಹಣ್ಣುಗಳ ಬೆಲೆ ಏರಿಕೆ : ಈ ವರ್ಷ ಬೇಸಿಗೆಯಲ್ಲಿ ತೀವ್ರ ತಾಪಮಾನದಿಂದಾಗಿ ಹೂವಿನ ಬೆಳೆ ಸರಿಯಾಗಿರಲಿಲ್ಲ. ಇದೀಗ ಬೆಳೆ ಆಗಿದೆಯಾದರೂ, ಕೊಯ್ಲಿಗೆ ಮಳೆ ಅಡ್ಡಿಯಾಗಿದೆ. ಹೂವಿನ ತೋಟದಲ್ಲಿ ನೀರು ತುಂಬಿರುವ ಕಾರಣ ಹೂಗಳು ಕೊಳೆಯುತ್ತಿವೆ. ಹಾಗಾಗಿ ಹೆಚ್ಚಿನ ದಿನ ಇಡಲು ಸಾಧ್ಯವಿಲ್ಲ. ಬದಲಿಗೆ ಆಯಾ ದಿನ ಕೊಯ್ಲ ಮಾಡಿದ ಹೂವುಗಳನ್ನು ಅಂದೇ ಮಾರಾಟ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ. ಹೀಗಾಗಿ ಈ ಬಾರಿ ಕೆ.ಆರ್. ಮಾರುಕಟ್ಟೆಗೆ ಹೂವಿನ ಪೂರೈಕೆ ಪ್ರಮಾಣದಲ್ಲಿ ಭಾರೀ (ಶೇ. 40) ಇಳಿಕೆಯಾಗಿದೆ. ಹಬ್ಬ ಎಂಬ ಕಾರಣಕ್ಕೆ ಹಣ್ಣು ತರಕಾರಿ ದರವೂ ಏರಿಕೆಯಾಗಿದೆ ಎನ್ನುತ್ತಾರೆ ವ್ಯಾಪಾರಿಗಳು.

ಕೆ.ಆರ್. ಮಾರುಕಟ್ಟೆಯಲ್ಲಿ ಬಿಡಿ ಹೂ ದರ (ಕೆ.ಜಿ.ಗಳಲ್ಲಿ)

ಕನಕಾಂಬರ 2,000-2500 ರೂ.

ಮಲ್ಲಿಗೆ 1000 -1200 ರೂ.

ಮಳ್ಳೆ 800 -1000 ರೂ.

ಕಾಕಡ 600-700 ರೂ.

ಸೇವಂತಿಗೆ 300- 400ರೂ.

ಗುಲಾಬಿ 250 -300ರೂ.

ಕಣಿಗಲೆ 250-300 ರೂ.

ಬಟನ್ಸ್ 250-300 ರೂ.

ಸುಗಂಧರಾಜ 180-200 ರೂ.

ತಾವರೆ (ಜೋಡಿಗೆ) 80-100 ರೂ.

ಕೇದಗೆ ಒಂದಕ್ಕೆ 50-60 ರೂ.

ಬಾಳೆಕಂಬ- ಚಿಕ್ಕವು (ಜೋಡಿಗೆ) 50 ರೂ.

ಹಣ್ಣುಗಳ ದರ ಕೆ.ಜಿ.ಗೆ

* ಏಲಕ್ಕಿ ಬಾಳೆ 80-90 ರೂ.

* ಸೀಬೆ 50-60 ರೂ.

* ಅನಾನಸ್- ಜೋಡಿಗೆ 60-80 ರೂ.

* ಮೂಸಂಬಿ 90-110 ರೂ.

* ದಾಳಿಂಬೆ 200-240 ರೂ.

* ಸೇಬು 200-250 ರೂ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net