

ತುಮಕೂರು: ಸಾರ್ವಜನಿಕರಿಗೆ ಯಾವುದೇ ಮುನ್ಸೂಚನೆ ನೀಡದೆ ಗ್ರಾಮ ಆಡಳಿತ ಅಧಿಕಾರಿಗಳು (ವಿಎಒ) ಅರ್ನಿದಿಷ್ಟಾವಧಿ ಮುಷ್ಕರ ಆರಂಭಿಸಿರುವುದರಿಂದ ತೀವ್ರ ಅನಾನುಕೂಲವಾಗುತ್ತಿರುವ ಬಗ್ಗೆ ದಲಿತ ಸ್ವಾಭಿಮಾನಿ ಸಂಘರ್ಷ ಸಮಿತಿ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಮಂಗಳವಾರ ನಗರದಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್ರನ್ನು ಭೇಟಿ ಮಾಡಿದ ಸಮಿತಿ ಅಧ್ಯಕ್ಷ ಕೆ.ಎಚ್.ಶಿವಕುಮಾರ್(ಬಂಡೆ ಕುಮಾರ್), ಗ್ರಾಮ ಆಡಳಿತ ಅಧಿಕಾರಿಗಳ ಅನಿರೀಕ್ಷಿತ ಮುಷ್ಕರದಿಂದ ಸಾರ್ವಜನಿಕರಿಗೆ ಅನಾನುಕೂಲವಾಗಿದೆ. ಅವರ ಕೆಲಸ ಕಾರ್ಯಗಳಿಗೆ ತೊಂದರೆಯಾಗಿದೆ. ಸಾರ್ವಜನಿಕ ಸೇವೆಯಲ್ಲಿರುವವರು ಯಾವುದೇ ಮುಷ್ಕರ ಮಾಡುವ ಮೊದಲು ಸಾರ್ವಜನಿಕ ಪ್ರಕಟಣೆ ನೀಡಬೇಕು ಎಂದು ಒತ್ತಾಯಿಸಿದರು.
ವಿಎಒಗಳು ಅರ್ನಿದಿಷ್ಟಾವಧಿ ಮುಷ್ಕರದಿಂದ ಅವರ ಕಾರ್ಯವ್ಯಾಪ್ತಿಯಲ್ಲಿ ಯಾವುದೇ ನಿಗಧಿತ ಕಾಲದಲ್ಲಿ ಆಗಬೇಕಿರುವ ಕಂದಾಯ ಇಲಾಖೆಯ ಕೆಲಸಗಳು ಮುಂದೂಡುವಂತಾಗಿದೆ. ಹಾಗಾಗಿ, ರೈತರು, ಬಡ ಕುಟುಂಬಗಳಿಗೆ ತೊಂದರೆಯಾಗಿ ನಷ್ಟ ಅನುಭವಿಸುವಂತಾಗಿದೆ. ಈ ರೀತಿ ಮುನ್ಸೂಚನೆಯ ಪ್ರಕಟಣೆ ನೀಡದೆ ಸೇವಾ ಕಾರ್ಯ ಬಹಿಷ್ಕರಿಸಿ ಹೋರಾಟ ಮಾಡುವ ಅಧಿಕಾರಿ, ಸಿಬ್ಬಂದಿಗೆ ಸೂಕ್ತ ತಿಳುವಳಿಕೆ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಈ ವೇಳೆ ಸಮಿತಿಯ ಮುಖಂಡರಾದ ಗೋವಿಂದರಾಜು, ಎನ್.ನಾಗರಾಜು, ಮರಳೂರು ಗಂಗರಾಜು, ಕೆಂಪರಾಜು ಹಾಜರಿದ್ದರು.