ಪ್ರಜ್ಞಾಹೀನ ಗರ್ಭಿಣಿಗೆ ವಾಣಿವಿಲಾಸ ವೈದ್ಯರಿಂದ ಯಶಸ್ವಿ ಚಿಕಿತ್ಸೆ

Vanivalas hospital - 2
Published on

ಬೆಂಗಳೂರು: ಮಿದುಳಿನಲ್ಲಿ ರಕ್ತಸ್ರಾವವಾಗಿ, ಪ್ರಜ್ಞಾಹೀನ ಸ್ಥಿತಿಯಲ್ಲಿ ನಗರದ ವಾಣಿವಿಲಾಸ ಆಸ್ಪತ್ರೆಗೆ ದಾಖಲಾಗಿದ್ದ ಗರ್ಭಿಣಿಗೆ ಯಶಸ್ವಿಯಾಗಿ ಹೆರಿಗೆ ಮಾಡಿಸಿರುವ ಆಸ್ಪತ್ರೆ ವೈದ್ಯರ ತಂಡ, ಸತತ 77 ದಿನಗಳ ಕಾಲ ತೀವ್ರ ನಿಗಾ ಘಟಕ (ಐಸಿಯು)ದಲ್ಲಿ ಚಿಕಿತ್ಸೆ ನೀಡಿದ್ದು, ಮಹಿಳೆ ಈಗ ಚೇತರಿಸಿಕೊಂಡಿದ್ದಾರೆ.

ತುಮಕೂರಿನ ಮಂಚಲಕುಪ್ಪೆಯ ಒಂಬತ್ತು ತಿಂಗಳ ಗರ್ಭಿಣಿಗೆ ಅಧಿಕ ರಕ್ತದೊತ್ತಡದಿಂದಾಗಿ ಮಿದುಳಿನಲ್ಲಿ ರಕ್ತಸ್ರಾವವಾಗಿತ್ತು. ಸ್ಥಳೀಯ ಆಸ್ಪತ್ರೆ ವೈದ್ಯರ ಶಿಫಾರಸು ಮೇರೆಗೆ ಜೂನ್ 5ರಂದು ವಾಣಿವಿಲಾಸ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಹಿಳೆಗೆ ವೈದ್ಯರು ಅದೇ ದಿನ ಸಿಸೇರಿಯನ್ ಮಾಡಿ, ಗಂಡು ಮಗುವಿನ ಜನನವಾಗಿತ್ತು. ಬಳಿಕ ಮಹಿಳೆಯನ್ನು ತೀವ್ರ ನಿಗಾ ಘಟಕಕ್ಕೆ ವರ್ಗಾಯಿಸಿ ಚಿಕಿತ್ಸೆ ಒದಗಿಸಲಾಗಿದ್ದು, ಈಗ ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಮಗುವೂ ಆರೋಗ್ಯದಿಂದ ಇದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಹಿಳೆಗೆ ಹನ್ನೊಂದು ದಿನ ವೆಂಟಿಲೇಟರ್ ಸಂಪರ್ಕ ಕಲ್ಪಿಸಲಾಗಿತ್ತು. ಎರಡು ಬಾರಿ ಕಾರ್ಡಿಯಾಕ್ ಅರೆಸ್ಟ್ ಸಹ ಆಗಿತ್ತು. ಬಳಿಕ ಟ್ರಾಕಿಯೊಸ್ಟೊಮಿ ಸಹಾಯದಿಂದ ಕೃತಕ ಗಾಳಿ ನೀಡಲಾಯಿತು. ಆಸ್ಪತ್ರೆಗೆ ದಾಖಲಾದಾಗ ಅವರ ಕೈ-ಕಾಲುಗಳಿಗೆ ಸ್ವಾಧೀನ ಇರಲಿಲ್ಲ. ಫಿಸಿಯೊಥೆರಪಿ ಸಹಾಯದಿಂದ ಚೇತರಿಸಿಕೊಂಡರು. ಈಗ ಯಾರ ಸಹಾಯವಿಲ್ಲದೆ ಎದ್ದು ಓಡಾಡುತ್ತಾರೆ. ಇದನ್ನು ವೈದ್ಯಕೀಯ ಕ್ಷೇತ್ರದ ಚಮತ್ಕಾರವೆಂದೇ ಭಾವಿಸಿದ್ದೇವೆ ಎಂದು ಚಿಕಿತ್ಸೆ ನೀಡಿದ ವೈದ್ಯಕೀಯ ತಂಡ ಹೇಳಿದೆ.

ಈ ಅವಧಿಯಲ್ಲಿ ಮಗುವಿಗೆ ಆಸ್ಪತ್ರೆಯ ಅಮೃತಧಾರೆ ಎದೆಹಾಲು ಬ್ಯಾಂಕಿನ ಮೂಲಕ ಅಗತ್ಯ ಹಾಲನ್ನು ಒದಗಿಸಿ, ಆರೈಕೆ ಮಾಡಲಾಗಿದೆ. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ. ಸವಿತಾ, ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಮುಖ್ಯಸ್ಥ ಡಾ. ಶ್ರೀನಿವಾಸ್, ಘಟಕದ ಮುಖ್ಯಸ್ಥ ಡಾ. ಅಶೋಕ್ ಕುಮಾರ್ ದೇವೂರ್, ವೈದ್ಯಕೀಯ ವಿಭಾಗದ ಡಾ. ರವಿಶಂಕರ್ ಹಾಗೂ ವಿವಿಧ ವಿಭಾಗಗಳ ವೈದ್ಯರನ್ನು ಒಳಗೊಂಡ ತಂಡ ಮಹಿಳೆಗೆ ಚಿಕಿತ್ಸೆ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net