

ತುಮಕೂರು: ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನಲ್ಲಿ ಭಾನುವಾರ ಚಾಲನೆ ನೀಡಿದ ಬೆಂಗಳೂರು-ಬೆಳಗಾವಿ ವಂದೇಭಾರತ್ ರೈಲು ತುಮಕೂರು ರೈಲ್ವೆ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಅಲ್ಲಿ ನೆರದಿದ್ದ ಬಿಜೆಪಿ ಕಾರ್ಯಕರ್ತರು ಪಕ್ಷದ ಬಾವುಟ ಹಿಡಿದು ಮೋದಿ, ಮೋದಿ ಘೋಷಣೆ ಮೊಳಗಿಸಿದರು. ರೈಲನ್ನು ಸಡಗರದಿಂದ ಸ್ವಾಗತಿಸಿ, ಸಿಹಿ ವಿತರಿಸಿ ಸಂಭ್ರಮಿಸಿದರು.
ಮಧ್ಯಾಹ್ನ 12.40ಕ್ಕೆ ರೈಲು ನಿಲ್ದಾಣಕ್ಕೆ ವಂದೇ ಭಾರತ್ ಆಗಮಿಸುತ್ತಿದ್ದಂತೆ ಶಾಸಕ ಜಿ.ಬಿ.ಜ್ಯೋತಿಗಣೇಶ್, ಮಾಜಿ ಸಂಸದ ಜಿ.ಎಸ್.ಬಸವರಾಜು, ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ವೀರೇಶಾನಂದ ಸರಸ್ವತಿ, ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಎಸ್.ರವಿಶಂಕರ್, ಮಾಜಿ ಸಚಿವ ಸೊಗಡು ಶಿವಣ್ಣ, ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ.ಆಂಜನಪ್ಪ, ಮಾಜಿ ಶಾಸಕ ಎಚ್.ನಿಂಗಪ್ಪ ಸ್ವಾಗತಿಸಿದರು. ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಶಾಸಕ ಬಿ.ಸುರೇಶ್ಗೌಡ ಬೆಂಗಳೂರಿನಿಂದ ವಂದೇ ಭಾರತ್ ರೈಲಿನಲ್ಲಿ ಬಂದಿಳಿದು ಎಲ್ಲರ ಜತೆಗೂಡಿ ಸಂಭ್ರಮದಲ್ಲಿ ಭಾಗಿಯಾದರು.
ವಂದೇ ಭಾರತ್ ಸ್ವಾಗತ ಸಮಾರಂಭದಲ್ಲಿ ಮಾತನಾಡಿದ ಶಾಸಕ ಜಿ.ಬಿ.ಜ್ಯೋತಿಗಣೇಶ್, ಪ್ರಧಾನಿ ನರೇಂದ್ರ ಮೋದಿ ದೂರದೃಷ್ಟಿತ್ವ, ದಿಟ್ಟ ನಾಯಕತ್ವದಿಂದ ಭಾರತವು ವಿಶ್ವ ಭೂಪಟದಲ್ಲಿ ರಾರಾಜಿಸುತ್ತಿದೆ. ಹಿಂದಿನ ರೈಲ್ವೆ ವ್ಯವಸ್ಥೆಗೂ ಈ 10 ವರ್ಷಗಳಿಂದ ಆಗಿರುವ ಬದಲಾವಣೆಗೂ ಅಜಗಜಾಂತರ ವ್ಯತ್ಯಾಸವಿದೆ. ಆಧುನಿಕ ತಂತ್ರಜ್ಞಾನದಿಂದ ರೈಲ್ವೆ ಸೇವೆ ಹೆಚ್ಚು ಸುಸಜ್ಜಿತ, ಸುರಕ್ಷಿತವಾಗಿದೆ. ರೈಲು ನಿಲ್ದಾಣಗಳು ವಿಮಾನ ನಿಲ್ದಾಣಗಳ ಮಾದರಿಯಲ್ಲಿ ಅತ್ಯಾಧುನಿಕವಾಗಿ ನಿಮಾರ್ಣವಾಗುತ್ತಿವೆ. ಪ್ರಯಾಣಿಕರಿಗೆ ಹೆಚ್ಚು ಸೇವೆಗಳನ್ನು ಒದಗಿಸಲಾಗುತ್ತಿದೆ. ಪ್ರಧಾನಿ ಮೋದಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಕಾರಣದಿಂದ ರೈಲ್ವೆ ಇಲಾಖೆಯಲ್ಲಿ ಬಹಳಷ್ಟು ಬದಲಾವಣೆ ಕಾಣುತ್ತಿದ್ದೇವೆ ಎಂದು ಹೇಳಿದರು.
ತುಮಕೂರು ನಿಲ್ದಾಣದಲ್ಲಿ ಎರಡು ವಂದೇ ಭಾರತ ರೈಲು ನಿಲುಗಡೆ ಅವಕಾಶ ಸಿಕ್ಕಿದೆ. ವಿ.ಸೋಮಣ್ಣ ಕೇಂದ್ರದಲ್ಲಿ ಮಂತ್ರಿಯಾದ್ದರಿಂದ ಜಿಲ್ಲೆಯಲ್ಲಿ ರೈಲ್ವೆ ಇಲಾಖೆಯಿಂದ ಹಲವಾರು ಯೋಜನೆಗಳನ್ನು ತಂದಿದ್ದಾರೆ. ಸುಮಾರು 85 ಕೋಟಿ ರೂ., ವೆಚ್ಚದಲ್ಲಿ ತುಮಕೂರು ರೈಲ್ವೆ ನಿಲ್ದಾಣವನ್ನು ಆಧುನಿಕವಾಗಿ ನಿಮಾರ್ಣ ಮಾಡಲಾಗುತ್ತಿದೆ. ನಿಲ್ದಾಣಕ್ಕೆ ಡಾ.ಶಿವಕುಮಾರ ಸ್ವಾಮೀಜಿಗಳ ಹೆಸರಿಡಬೇಕೆಂಬ ಆಶಯ ಈಡೇರಿದ್ದು ಸರ್ಕಾರವು ಅನುಮತಿ ನೀಡಿದೆ. ಜಿಲ್ಲೆಯಲ್ಲಿ ಹಲವಾರು ಕಡೆ ರೈಲ್ವೆ ಮೇಲ್ಸೇತುವೆ, ಕೆಳ ಸೇತುವೆಗಳ ನಿಮಾರ್ಣ ಮಾಡಲಾಗುತ್ತಿದೆ ಎಂದರು.
ಮಾಜಿ ಸಂಸದ ಜಿ.ಎಸ್.ಬಸವರಾಜು ಮಾತನಾಡಿ, ಬಹಳ ವರ್ಷಗಳ ಕನಸನ್ನು ಮೋದಿ ಸರ್ಕಾರ ನನಸು ಮಾಡುತ್ತಿದೆ. ಹತ್ತು ವರ್ಷಗಳಲ್ಲಿ ಅನೇಕ ಅಭಿವೃದ್ಧಿ ಕೆಲಸಗಳಾಗಿವೆ. ಕೈಗಾರಿಕೆ, ಹೆದ್ದಾರಿಗಳ ಅಭಿವೃದ್ಧಿ, ರೈಲ್ವೆಯಲ್ಲಿ ಹೆಚ್ಚಿನ ಪ್ರಗತಿ ಕಾಣಬಹುದಾಗಿದೆ ಎಂದರು.
50 ವರ್ಷಗಳಿಂದ ತಾವು ರೈಲು ಪ್ರಯಾಣ ಮಾಡುತ್ತಿದ್ದು, ಈ ಹತ್ತು ವರ್ಷಗಳಲ್ಲಿ ನಾವು ಹೆಮ್ಮೆಯಿಂದ ಹೇಳಿಕೊಳ್ಳುವ ಬದಲಾವಣೆಗಳಾಗಿವೆ. ಇದಕ್ಕೆಲ್ಲಾ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸಂಕಲ್ಪಶಕ್ತಿ, ಅವರಲ್ಲಿನ ಅದಮ್ಯಚೈತನ್ಯ ಹಾಗೂ ಬದ್ಧತೆ ಕಾರಣ ಎಂದು ರಾಮಕೃಷ್ಣ&ವಿವೇಕಾನಂದ ಆಶ್ರಮದ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ , ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ . ಆಂಜನಪ್ಪ, ಮಾಜಿ ಶಾಸಕ ಎಚ್.ನಿಂಗಪ್ಪ, ಮುಖಂಡರಾದ ವೈ.ಹೆಚ್.ಹುಚ್ಚಯ್ಯ, ಎಸ್.ಪಿ.ಚಿದಾನಂದ್, ಎಸ್.ಶಿವಪ್ರಸಾದ್, ನೈರುತ್ಯ ರೈಲ್ವೆ ವಿಭಾಗದ ಬೆಂಗಳೂರು ವಲಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯರಾದ ಟಿ.ಜೆ.ಗಿರೀಶ್, ಕರಣಂ ರಮೇಶ್, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಬಿ.ಎಚ್.ನವಚೇತನ್, ಮಾಜಿ ಮೇಯರ್ ಬಿ.ಜಿ.ಕೃಷ್ಣಪ್ಪ,ಎಸ್.ಡಿ.ದಿಲೀಪ್ ಕುಮಾರ್ ಸೇರಿದಂತೆ ರೈಲ್ವೆ ಇಲಾಖೆ ವಿವಿಧ ಅಧಿಕಾರಿಗಳು, ಬಿಜೆಪಿ ಮುಖಂಡರು ಭಾಗವಹಿಸಿದ್ದರು.