

ಕಾರವಾರ: ಮಂಗಳೂರು-ಮಡಗಾಂವ ನಡುವೆ ಡಿಸೆಂಬರ್ 30 ರಿಂದ ವಂದೇ ಭಾರತ ಎಕ್ಸ್ಪ್ರೆಸ್ ಸಂಚಾರ ನಡೆಸಲಿದ್ದು, ಮಂಗಳವಾರ ಪ್ರಯೋಗಾರ್ಥ ಸಂಚಾರ ಯಶಸ್ವಿಯಾಗಿದೆ. ಬೆಳಗ್ಗೆ ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಬಿಟ್ಟ ರೈಲು ಮಡಗಾಂವವರೆಗೆ ಸಂಚರಿಸಿ ವಾಪಸಾಗಿದೆ. ಕಾರವಾರದಲ್ಲಿ ರೈಲನ್ನು ನಿಲ್ಲಿಸಿರಲಿಲ್ಲ.
ಡಿಸೆಂಬರ್ 30 ರಂದು ಬೆಳಗ್ಗೆ 11 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯಾದಲ್ಲಿ 7 ವಂದೇ ಭಾರತ ಎಕ್ಸ್ಪ್ರೆಸ್ ರೈಲುಗಳ ಸಂಚಾರಕ್ಕೆ ಏಕಕಾಲದಲ್ಲಿ ವಿಡಿಯೋ ಕಾನರೆನ್ಸ್ ಮೂಲಕ ಚಾಲನೆ ನೀಡುವರು. ಅದರಲ್ಲಿ ಮಂಗಳೂರು-ಮಡಗಾಂವ ರೈಲು ಕೂಡ ಸೇರಿದೆ. ಮಂಗಳೂರಿನಲ್ಲಿ ಅದೇ ಸಮಯದಲ್ಲಿ ಅಲ್ಲಿನ ಸಂಸದರು ಚಾಲನೆ ನೀಡುವರು.
ರೈಲು ಅಂದು ಉದ್ಘಾಟನೆಯ ನಿಮಿತ್ತ ಸುರತ್ಕಲ್, ಉಡುಪಿ, ಕುಂದಾಪುರ, ಭಟ್ಕಳ, ಕುಮಟಾ ಸೇರಿ ವಿವಿಧ ನಿಲ್ದಾಣಗಳಲ್ಲಿ ನಿಂತು ಸುಮಾರು 2 ಗಂಟೆಯ ಸುಮಾರಿಗೆ ಕಾರವಾರಕ್ಕೆ ಆಗಮಿಸಲಿದ್ದು, ಕಾರವಾರದಲ್ಲಿ ಸ್ವಾಗತ ಕಾರ್ಯಕ್ರಮ ಆಯೋಜಿಸಲಾಗಿದೆ.
ಡಿಸೆಂಬರ್ 31 ರಿಂದ ರೈಲು ಮಂಗಳವಾರ ಹೊರತುಪಡಿಸಿ ವಾರದ ಉಳಿದ 6 ದಿನ ನಿರಂತರವಾಗಿ ಸಂಚರಿಸಲಿದೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಆದರೆ, ಇದುವರೆಗೂ ಕೊಂಕಣ ರೈಲ್ವೆಯಾಗಲಿ ಅಥವಾ ದಕ್ಷಿಣ ರೈಲ್ವೆ ಅಧಿಕೃತ ವೇಳಾಪಟ್ಟಿ ಬಿಡುಗಡೆ ಮಾಡಿಲ್ಲ.
ರೈಲು ಪ್ರತಿದಿನ ಬೆಳಗ್ಗೆ 8.30 ಕ್ಕೆ ಮಂಗಳೂರು ಸೆಂಟ್ರಲ್ ನಿಲ್ದಾಣ ಬಿಡಲಿದ್ದು, 9.50 ಕ್ಕೆ ಉಡುಪಿ, 12.10 ಕ್ಕೆ ಕಾರವಾರ ಹಾಗೂ 1.05 ಮಡಗಾಂವ ತಲುಪಲಿದೆ. ಮಡಗಾಂವನಿಂದ ಸಾಯಂಕಾಲ 6.10 ಕ್ಕೆ ಬಿಡಲಿರುವ ರೈಲು 6.57 ಕ್ಕೆ ಕಾರವಾರ, 9.14 ಕ್ಕೆ ಉಡುಪಿ, 10.45 ಕ್ಕೆ ಮಂಗಳೂರು ಸೆಂಟ್ರಲ್ ನಿಲ್ದಾಣ ತಲುಪಲಿದೆ. ನಡುವೆ ಎಲ್ಲೂ ನಿಲುಗಡೆ ಇಲ್ಲ. ರೈಲಿನಲ್ಲಿ ಒಟ್ಟು 8 ಬೋಗಿಗಳಿದ್ದು, ಸುಮಾರು 560 ಆಸನಗಳಿವೆ. ಎರಡೂ ಕಡೆ ಇಂಜಿನ್ ಇದ್ದು, ಇಂಜಿನ್ ದಿಕ್ಕು ಬದಲಿಸುವ ಅವಶ್ಯಕತೆ ಇರುವುದಿಲ್ಲ.
ಇದನ್ನು ಓದಿ: ಇಂದೇ ಕಾರವಾರಕ್ಕೆ ಬರಲಿದೆ ವಂದೇ ಭಾರತ್ ರೈಲು