

ವಿಜಯವಾಣಿ ಸುದ್ದಿಜಾಲ ಹೆಬ್ರಿ
ದೇಶದಲ್ಲಿ ಅಭಿವೃದ್ಧಿ ಹಾಗೂ ಪರಿಸರದ ಸಮಾತೋಲನ ಹೊಂದಾಣಿಕೆ ಮಾಡಿಕೊಂಡು ಕಷ್ಟಕರವಾಗಿದೆ. ಎರಡು ಅತಿ ಅಗತ್ಯವಾಗಿದ್ದರೂ ಸಮನ್ವಯತೆ ಕಾಡುತ್ತಿದೆ. ಸದ್ಯದ ಪರಿಸ್ಥಿತಿ ಗಮನಿಸಿದಾಗ ಇಂದಿನ ಜನಾಂಗಕ್ಕೆ ಪರಿಸರ ಇರುತ್ತದೆಯೋ ಎಂಬ ಭಯದ ವಾತಾವರಣದಲ್ಲಿ ನಾವಿದ್ದೇವೆ ಎಂದು ಹೆಬ್ರಿ ಸಾಮಾಜಿಕ ವಲಯದ ಅರಣ್ಯ ಅಧಿಕಾರಿ ಸಿದ್ಧೇಶ್ವರ ಹೇಳಿದರು.
ಶಾಂತಿನಿಕೇತನ ಯುವವೃಂದ ಕುಡಿಬೈಲು ಕುಚ್ಚೂರು, ಶ್ರೀ ರಾಘವೇಂದ್ರ ಚಾರಿಟೆಬಲ್ ಟ್ರಸ್ಟ್ ಹೆಬ್ರಿ, ವಿಜಯವಾಣಿ ಸಹಯೋಗದೊಂದಿಗೆ ಎರಡನೇ ವರ್ಷದ ವನಮಹೋತ್ಸವ ಕಾರ್ಯಕ್ರಮದಲ್ಲಿ ಹೆರ್ಗ ವಿಠ್ಠಲಶೆಟ್ಟಿ ಪ್ರೌಢಶಾಲೆ ಕುಚ್ಚೂರಿನಲ್ಲಿ ಗಿಡ ವಿತರಿಸಿ ಮಾತನಾಡಿದರು.
ಮುಖ್ಯ ಶಿಕ್ಷಕಿ ತುಳಸಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘ-ಸಂಸ್ಥೆಗಳು ಗಿಡ ನೆಟ್ಟು ಅದನ್ನು ಪೋಷಣೆ ಮಾಡುವ ವಿದ್ಯಾರ್ಥಿಗಳಿಗೆ ಬಹುಮಾನ ನೀಡುವುದು ವಿನೂತನ ಕಾರ್ಯಕ್ರಮ. ಆದಷ್ಟು ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ ಸ್ವಚ್ಛ ಪರಿಸರ ಕಾಪಾಡಿಕೊಳ್ಳಬೇಕು ಎಂದರು.
ಹೆಬ್ರಿ ಶ್ರೀ ರಾಘವೇಂದ್ರ ಚಾರಿಟೆಬಲ್ ಟ್ರಸ್ಟ್ ಟ್ರಸ್ಟಿ ರಾಮಕೃಷ್ಣ ಆಚಾರ್ಯ, ಶಾಂತಿನಿಕೇತನ ಸಂಸ್ಥಾಪಕ ರಾಜೇಶ್, ಅಧ್ಯಕ್ಷ ದೀಕ್ಷಿತ್ ನಾಯಕ್, ಆಡಳಿತ ಮಂಡಳಿ ಸದಸ್ಯ ನರೇಂದ್ರ, ನಿತಿನ್, ಶಿಕ್ಷಕರಾದ ಜಯರಾಮ ಶೆಟ್ಟಿ, ಸುರೇಶ್ ದೇವಾಡಿಗ, ಗಣೇಶ್, ರೇವತಿ, ಮಲ್ಲಿಕಾರ್ಜುನ, ಪ್ರಸರಣ ವಿಭಾಗದ ಶ್ರೀಕಾಂತ್ ಇದ್ದರು.
ಹೆಬ್ರಿ ತಾಲೂಕಿನಲ್ಲಿ ಕಳೆದೆರಡು ವರ್ಷದಿಂದ 12 ಶಾಲೆಗಳಿಗೆ 10 ಗಿಡಗಳನ್ನು ನೀಡಿ ಒಂದು ತಂಡದಲ್ಲಿ ನಾಲ್ಕು ಜನ ಇರುವಂತೆ ವರ್ಷದಲ್ಲಿ ಪಾಲನೆ ಪೋಷಣೆ ಮಾಡಬೇಕು. ಮುಂದಿನ ವನಮಹೋತ್ಸವ ಕಾರ್ಯಕ್ರಮದಲ್ಲಿ ಪ್ರತಿ ಶಾಲೆಯಲ್ಲಿ ಉತ್ತಮವಾಗಿ ಗಿಡ ಬೆಳೆದ ಗುಂಪಿನ ವಿದ್ಯಾರ್ಥಿಗಳಿಗೆ ವಿಶೇಷ ಬಹುಮಾನ ನೀಡಲಾಗುವುದು. ಐದನೇ ವರ್ಷದಲ್ಲಿ ಗಿಡದ ಪ್ರಗತಿ ಗುರುತಿಸಿ ದೊಡ್ಡ ಮಟ್ಟದ ಪ್ರಶಸ್ತಿ ನೀಡಿ ವಿದ್ಯಾರ್ಥಿಗಳನ್ನು ಗೌರವಿಸಲಾಗುವುದು.-ರಾಮಕೃಷ್ಣ ಆಚಾರ್ಯ ಹೆಬ್ರಿ ಶ್ರೀ ರಾಘವೇಂದ್ರ ಚಾರಿಟೆಬಲ್ ಟ್ರಸ್ಟ್ ಟ್ರಸ್ಟಿ