ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಅನಿವಾರ್ಯ

ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಅನಿವಾರ್ಯ
Published on

ಹಾಸನ: ಶಿಕ್ಷಣ ಸಂಸ್ಥೆಗಳು ಹಾಗೂ ಸರ್ಕಾರ ಕೂಡ ಫಲಿತಾಂಶದ ಧಾವಂತದಲ್ಲಿದ್ದು, ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡುವ ಅನಿವಾರ್ಯತೆ ಇದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ಪಿ.ಗಂಗಾಧರ್ ಅಭಿಪ್ರಾಯಪಟ್ಟರು.

ಹಾಸನ ಪದವಿ ಪೂರ್ವ ಕಾಲೇಜುಗಳ ಅರ್ಥಶಾಸ್ತ್ರ ಪ್ರಾಂಶುಪಾಲರು ಮತ್ತು ಉಪನ್ಯಾಸಕರ ವೇದಿಕೆಯಿಂದ ಎವಿಕೆ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಶೈಕ್ಷಣಿಕ ಕಾರ್ಯಾಗಾರ, ಪ್ರತಿಭಾ ಪುರಸ್ಕಾರ ಮತ್ತು ವಿಚಾರಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿದ್ಯೆ ಕೆಲಸ ಪಡೆಯಲು ಮಾತ್ರವಲ್ಲದೆ ಬದುಕು ರೂಪಿಸಿಕೊಳ್ಳಲೂ ಸಹಕಾರಿಯಾಗಬೇಕು. ಎಐ ತಂತ್ರಜ್ಞಾನದ ಕಾಲಘಟ್ಟದಲ್ಲಿ ಉದ್ಯೋಗಕ್ಕೆ ಮನುಷ್ಯರೇ ಬೇಡವಾದ ಸನ್ನಿವೇಶ ಇದೆ. ಇಂತಹ ಸಂದರ್ಭದಲ್ಲಿ ವಿದ್ಯೆ ಬದುಕು ರೂಪಿಸಿಕೊಳ್ಳಲು ಸಹಕಾರಿಯಾಗಬೇಕು. ಆ ನಿಟ್ಟಿನಲ್ಲಿ ಶಿಕ್ಷಕರು ಮಕ್ಕಳಿಗೆ ಬೋಧನೆಮಾಡಬೇಕು ಎಂದರು.

ಫಲಿತಾಂಶ ಒಂದನ್ನೇ ಗುರಿಯಾಗಿಸಿಕೊಂಡು ಬೋಧನೆ ಮಾಡುವುದು ಸರಿಯಾದ ಕ್ರಮವಲ್ಲ. ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಅನಿವಾರ್ಯವಾಗಿದೆ. ಉಪಯೋಗಕ್ಕೆ ಬಾರದ ಮೂರು-ಮೂರು ಡಿಗ್ರಿ ಪಡೆಯುವುದರಿಂದ ದೇಶ ಮುನ್ನಡೆಯುವುದಿಲ್ಲ. ಭಾರತಕ್ಕೆ ಸತ್ವಯುತ ಶಿಕ್ಷಣ ಪಡೆದ ಪ್ರಜೆಗಳು ಬೇಕಾಗಿದ್ದಾರೆ ಎಂದ ಅವರು, ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿರಬೇಕು. ಆಗ ಬೋಧಕರೂ ಉತ್ಸಾಹದಲ್ಲಿ ಕಲಿಸಲು ಸಹಕಾರಿಯಾಗುತ್ತದೆ. ಶೇ.100 ಫಲಿತಾಂಶದ ಧಾವಂತಕ್ಕೆ ಬಿದ್ದ ಶಾಲೆಗಳೇ ಮಕ್ಕಳನ್ನು ಹುಡುಕಿಕೊಂಡು ಹೋಗುತ್ತಿರುವ ಸನ್ನಿವೇಶ ಉಂಟಾಗಿದೆ.ವಿದ್ಯೆ ಕೆಲಸ ಪಡೆಯಲು ಅಲ್ಲ. ಕೆಲಸವನ್ನು ಯಶಸ್ವಿಗೊಳಿಸಲು, ಜೀವನದ ಮಾರ್ಗ ಸುಗಮಗೊಳಿಸಿಕೊಳ್ಳಲು ಅವಶ್ಯಕವಾಗಿದೆ ಎಂದರು.

ದೊಡ್ಡಮಟ್ಟದ ಬದಲಾವಣೆ ಆಗುವ ಕಾಲಘಟ್ಟದಲ್ಲಿ ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಶಿಕ್ಷಣ ನೀಡಲು ವಿಫಲವಾಗುತ್ತಿದ್ದು, ಶಿಕ್ಷಕರು ಈ ನಿಟ್ಟಿನಲ್ಲಿ ಶ್ರಮವಹಿಸಬೇಕು ಎಂದರು.

ಸಕಲೇಶಪುರ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವಿ.ಪಿ. ರಮೇಶ್ ಮಾತನಾಡಿದರು. ದ್ವಿತೀಯ ಪಿಯುಸಿ ಅರ್ಥಶಾಸ್ತ್ರ ವಿಷಯದಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಹಾಸನ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ಎಚ್.ಡಿ.ಸುರೇಶ್, ಪದವಿ ಪೂರ್ವ ಕಾಲೇಜುಗಳ ಅರ್ಥಶಾಸ್ತ್ರ ಪ್ರಾಂಶುಪಾಲರು ಮತ್ತು ಉಪನ್ಯಾಸಕರ ವೇದಿಕೆ ಅಧ್ಯಕ್ಷ ಪ್ರಕಾಶ್, ಎಂ.ಆರ್.ಸಹದೇವ, ಜಸ್ಟಿನಾ ಪ್ಯಾಟ್ರಿಕ್, ವೆಂಕಟೇಶ್, ವೈ.ಪಿ.ಕೀರ್ತಿಕುಮಾರ್, ಎಚ್.ಟಿ ಸುರೇಶ್, ಎಚ್.ಎಸ್.ಶಕುಂತಲ, ಎಂ.ಎಸ್.ಫರ್ಜಾನಾ ಅಂಜುಂ, ಕಂಬೇಗೌಡ, ಗಿಡ್ಡೆಗೌಡ, ಎಂ.ಆರ್.ಸಹದೇವ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net