

ಮೇಲುಕೋಟೆ: ಮಾರ್ಚ್ 21ರಂದು ನಡೆಯುವ ಚೆಲುವನಾರಾಯಣಸ್ವಾಮಿ ವೈರಮುಡಿ ಉತ್ಸವವನ್ನು ಹೆಚ್ಚು ಅರ್ಥಪೂರ್ಣ ಹಾಗೂ ಅಚ್ಚುಕಟ್ಟಾಗಿ ಆಚರಿಸಲಾಗುವುದು ಎಂದು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು.
ವೈರಮುಡಿ ಜಾತ್ರಾ ಮಹೋತ್ಸವ ಶನಿವಾರದಿಂದಲೇ ಆರಂಭವಾಗಿ ಮಾ.28ರವರೆಗೆ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಮಾರ್ಗದರ್ಶನದಲ್ಲಿ ಜಾತ್ರಾ ಮಹೋತ್ಸವದಲ್ಲಿ ಯಾವುದೇ ಲೋಪವಾಗದಂತೆ ಎಚ್ಚರ ವಹಿಸಿ ಸಿದ್ಧತೆ ಮಾಡಲಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶುದ್ಧ ಕುಡಿಯುವ ನೀರು ಹಾಗೂ ಸ್ವಚ್ಛತೆ, ವೈದ್ಯಕೀಯ ಸೇವೆಗೆ ಹೆಚ್ಚು ಕಾಳಜಿ ವಹಿಸಲಾಗಿದೆ. ಭಕ್ತಸ್ನೇಹಿಯಾಗಿ ಜಾತ್ರಾ ಮಹೋತ್ಸವವನ್ನು ಆಚರಿಸಲಾಗುತ್ತಿದೆ. ಕಳೆದ ಸಲಕ್ಕಿಂತ ಹೆಚ್ಚಿನ ಭಕ್ತರು ಬರುವ ನಿರೀಕ್ಷೆಯೊಂದಿಗೆ ಎಲ್ಲ ವ್ಯವಸ್ಥೆ ಮಾಡಲಾಗಿದೆ ಎಂದರು.
ಆಕರ್ಷಕ ದೀಪಾಲಂಕಾರ: ಈ ವರ್ಷ ಆಕರ್ಷಕ ಹಾಗೂ ನವೀನ ರೀತಿಯ ದೀಪಾಲಂಕಾರ ಮಾಡಲಾಗಿದೆ. ವೈರಮುಡಿ ಉತ್ಸವದಂದು ದೇವಾಲಯದ ಆವರಣಕ್ಕೆ ಹೆಚ್ಚಿನ ರೀತಿಯಲ್ಲಿ ಪುಷ್ಪಾಲಂಕಾರ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಕಲ್ಯಾಣೋತ್ಸವ ನಾಗವಲ್ಲಿಯಂದು ಧಾರಾಮಂಟಪಕ್ಕೆ ರಥ ಹಾಗೂ ತೆಪ್ಪಮಂಟಪಕ್ಕೆ ವಿಶೇಷ ಪುಷ್ಪಾಲಂಕಾರ ಮಾಡಲಾಗುತ್ತದೆ. ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆ ಹಾಗೂ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಹಲವು ಸುತ್ತಿನ ಪೂರ್ವಭಾವಿ ಸಭೆ ನಡೆಸಿ ಸಿದ್ಧತೆ ಮಾಡಲಾಗಿದೆ. ವಸತಿಸೌಕರ್ಯ ಪಡೆಯಲು ಸಾಧ್ಯವಾಗದ ಭಕ್ತರಿಗೆ ಮಲಗಲು ವಿಶೇಷ ವ್ಯವಸ್ಥೆ ಮಾಡಿಕೊಡಲಾಗುತ್ತಿದೆ. ದಿನದ 24 ಗಂಟೆ ವಿದ್ಯುತ್ ಕಡಿತವಾಗದಂತೆ ಎಚ್ಚರ ವಹಿಸಲಾಗುತ್ತದೆ. ಬರಗಾಲ ಇರುವ ಕಾರಣ ಅದ್ದೂರಿ ಆಚರಣೆಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕಡಿವಾಣ ಹಾಕಲಾಗಿದೆ ಎಂದು ತಿಳಿಸಿದರು.
ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ್ ಮಾತನಾಡಿ, ಪೂರ್ವಭಾವಿ ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳಿಗೆ ವಹಿಸಿದ ಕಾರ್ಯಗಳನ್ನು ಲೋಪವಿಲ್ಲದಂತೆ ಮಾಡಬೇಕು, ವೈರಮುಡಿಗೆ ಬಂದ ಭಕ್ತರು ಸಂತೃಪ್ತಿಯಿಂದ ದೇವರ ದರ್ಶನ ಪಡೆಯುವ ವ್ಯವಸ್ಥೆ ಮಾಡಬೇಕು, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ದೇವಾಲಯದವರೆಗೆ ವೃದ್ಧ ಭಕ್ತರು ಹೋಗಿ ಬರಲು ಉಚಿತ ಬಸ್ ಸೌಕರ್ಯ ಕಲ್ಪಿಸಲಾಗಿದೆ. ದೇವಾಲಯದಲ್ಲಿ ಉತ್ಸವಾದಿಗಳನ್ನು ಹೆಚ್ಚು ಭಕ್ತರು ದರ್ಶನ ಮಾಡುವಂತೆ ನಡೆಸಬೇಕು, ವೈರಮುಡಿ ಉತ್ಸವವವನ್ನು ರಾತ್ರಿ 8 ಗಂಟೆಯಿಂದ ಬೆಳಗಿನ ನಾಲ್ಕು ಗಂಟೆಯವರೆಗೆ ನಡೆಸಲಾಗುತ್ತದೆ. ರಥೋತ್ಸವ ತೆಪ್ಪೋತ್ಸವ ಹಾಗೂ ಇತರ ಉತ್ಸವಗಳನ್ನೂ ಅಚ್ಚುಕಟ್ಟಾಗಿ ಭಕ್ತರಿಗೆ ಅನುಕೂಲವಾಗುವಂತೆ ನಡೆಸಲಾಗುತ್ತದೆ ಎಂದರು.
ಸುದ್ದಿಗೋಷ್ಠಿಗೂ ಮೊದಲು ಶಾಸಕರು, ಜಿಲ್ಲಾಧಿಕಾರಿಗಳು ಉತ್ಸವ ಬೀದಿ ಪಾರ್ಕಿಂಗ್ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್, ಪಾಂಡವಪುರ ಉಪ ವಿಭಾಗಾಧಿಕಾರಿ ಮಾರುತಿ, ಮುಜರಾಯಿ ತಹಸೀಲ್ದಾರ್ ತಮ್ಮೇಗೌಡ, ತಹಸೀಲ್ದಾರ್ ಶ್ರೇಯಸ್, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ್, ಇತರ ಅಧಿಕಾರಿಗಳು ಭಾಗವಹಿಸಿದ್ದರು.