

ಯಾದಗಿರಿ: ವಡಿಗೇರಾ ತಾಲೂಕಿನ ಉಳ್ಳೆಸೂಗುರು ಗ್ರಾಮ ಪಂಚಾಯಿತಿ ಕಚೇರಿ ಬಳಿ ಶುಕ್ರವಾರ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು, 50ಕ್ಕೂ ಹೆಚ್ಚು ಜನ ಗಂಭೀರ ಗಾಯಗೊಂಡಿದ್ದಾರೆ. ಕಾರುಗಳು ಸೇರಿದಂತೆ 20ಕ್ಕೂ ಹೆಚ್ಚು ವಾಹನ ಜಖಂಗೊಂಡಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿದೆ.
ಶುಕ್ರವಾರ ಉಳ್ಳೆಸೂಗುರು ಗ್ರಾಮ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಶುರುವಾಗುತ್ತಿದ್ದಂತೆ ಹೊರಗಡೆ ಜಮಾಯಿಸಿದ್ದ ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಗುಸುಗುಸು ಆರಂಭಗೊಂಡಿತು. ಇತ್ತ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗುತ್ತಿದ್ದಂತೆ ಕಾರ್ಯಕರ್ತರು ಘೋಷಣೆ ಕೂಗಿದರು. ಇದರಿಂದ ಕೆರಳಿದ ಮತ್ತೊಂದು ಗುಂಪು ಕೈಗೆ ಸಿಕ್ಕ ವಸ್ತುಗಳನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿತು. ದೊಡ್ಡ ಗಾತ್ರದ ಕಲ್ಲು, ಕಟ್ಟಿಗೆಯಿಂದ ಸಿಕ್ಕ-ಸಿಕ್ಕವರ ಮೇಲೆ ಎರಗಿ ಥಳಿಸಿದ್ದರಿಂದ ಕ್ಷಣಾರ್ಧದಲ್ಲಿ ಇಡೀ ಗ್ರಾಮಕ್ಕೆ ಗ್ರಾಮವೇ ಉದ್ವಿಗ್ನ ಪರಿಸ್ಥಿತಿಗೆ ಸಿಲುಕಿತು. ಇದನ್ನೂ ಓದಿರಿ ಗ್ರಾಪಂ ಅಧ್ಯಕ್ಷೆ-ಉಪಾಧ್ಯಕ್ಷೆ ಹಣೆ ಬರಹ ಬರೆದ 8 ವರ್ಷದ ಬಾಲಕಿ!
ಉಳ್ಳೆಸೂಗುರು ಗ್ರಾಮದಲ್ಲಿ ಎರಡು ಗುಂಪಿನ ಮಧ್ಯೆ ಜಟಾಪಟಿ ನಡೆದಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಘಟನೆ ಕುರಿತು ತನಿಖೆ ನಡೆಸಲಾಗುವುದು ಎಂದು ಎಸ್ಪಿ ಋಷಿಕೇಶ ಭಗವಾನ್ ಸೋನವಾಣೆ ತಿಳಿಸಿದ್ದಾರೆ.
ಇನ್ನು ಘಟನೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಸಂಜೆ ಯಾದಗಿರಿ ಹೊಸ ಜಿಲ್ಲಾಸ್ಪತ್ರೆ ಎದುರು ದಿಢೀರ್ ಪ್ರತಿಭಟನೆ ನಡೆಸಿದರು. ಚುನಾವಣೆ ಇದೆ ಎಂದು ಗೊತ್ತಿದ್ದರೂ ಪಿಎಸ್ಐ ಸೂಕ್ತ ಭದ್ರತೆ ಒದಗಿಸದ್ದರಿಂದ ಗಲಾಟೆ ನಡೆದಿದೆ. ಪಿಎಸ್ಐ ಅಮಾನತು ಮಾಡಬೇಕು ಎಂದು ಕಾಂಗ್ರೆಸ್ ಯುವ ಮುಖಂಡ ಬಸ್ಸುಗೌಡ ಬಿಳ್ಹಾರ ನೇತೃತ್ವದಲ್ಲಿ ಕಾರ್ಯಕರ್ತರು ಒತ್ತಾಯಿಸಿದರು.