ಹಾಲು ಉತ್ಪಾದನೆಗೆ ವಡ್ಡರಹಳ್ಳಿ ಹೆಸರುವಾಸಿ

Kailaancha-Ph-008-Gramayana Vaddarahalli - Story Photo-Dairy Halu Hakuva Raitharu-9-6-2024
Published on

* ಕಾಶಿಯಿಂದ ತಂದ ಲಿಂಗ ಪ್ರತಿಷ್ಠಾಪಿಸಿ ಬಸವೇಶ್ವರ ಹೆಸರಿನಲ್ಲಿ ಆರಾಧನೆ

* ಹೈನುಗಾರಿಕೆಗಳಿಗೆ ಉಪ ಕಸುಬಾಗಿ ಅವಲಂಬಿತ

* ನೀರಿನ ಬವಣೆ ನೀಗಿಸಿದ ಅರ್ಕಾವತಿ ನದಿ, ಕೆರೆ

ವಿಭೂತಿಕೆರೆ ಶಿವಲಿಂಗಯ್ಯ ಕೈಲಾಂಚ

ಸುತ್ತಲೂ ತೆಂಗು ಮರಗಳ ಸಾಲು ಸಾಲು .. ಒಂದು ಕಡೆ ಕೆರೆ, ಒಂದು ಕಡೆ ಅರಣ್ಯ.. ಮತ್ತೊಂದೆಡೆ ಝುಳು ಝುಳು ಹರಿಯುವ ಅರ್ಕಾವತಿ ನದಿ. ಇಂತಹ ಸುಂದರ ಹಸಿರಿನ ಮಧ್ಯೆ ಧಾರ್ಮಿಕ, ಶೈಕ್ಷಣಿಕವಾಗಿ, ಕೃಷಿ ಪ್ರಧಾನವಾಗಿ ಗುರ್ತಿಸಿಕೊಂಡು ಜಿಲ್ಲೆಯಲ್ಲಿ ಪ್ರಮುಖ ಗ್ರಾಮವಾಗಿದೆ ವಡ್ಡರಹಳ್ಳಿ.

ರಾಮನಗರ ತಾಲೂಕಿನ ಕೈಲಾಂಚ ಹೋಬಳಿಯ ವಡ್ಡರಹಳ್ಳಿ ತನ್ನದೇ ಆದ ಪ್ರಕೃತಿ ಶ್ರೀಮಂತಿಕೆ ಹೊಂದಿದೆ.

ಕಾಶಿಯಿಂದ ತಲೆಮೇಲೆ ನಡೆದು ಹೊತ್ತು ತಂದ ಲಿಂಗವನ್ನು ಗ್ರಾಮದಲ್ಲಿ ಪ್ರತಿಷ್ಠಾಪಿಸಿ ಬಸವೇಶ್ವರ ಎಂಬ ಹೆಸರಿನಲ್ಲಿ ಗ್ರಾಮ ದೇವರಾಗಿ ಆರಾಧಿಸುತ್ತಿರುವ ಗ್ರಾಮ ಇದಾಗಿದೆ.

ಹೈನುಗಾರಿಕೆ :

ತೆಂಗು, ಮಾವು, ರೇಷ್ಮೆ ಅವಲಂಬಿಸಿರುವ ರೈತರು ಪ್ರಮುಖವಾಗಿ ಹೈನುಗಾರಿಕೆಗೆ ಒತ್ತು ನೀಡಿದ್ದಾರೆ. ಗ್ರಾಮದಲ್ಲಿ 5 ಸಾವಿರ ಲೀಟರ್ ಬಿಎಂಸಿ ಕೇಂದ್ರ ಇದ್ದು, ಜಿಲ್ಲೆಯ ಪ್ರಮುಖ ಹಾಲು ಉತ್ಪಾದಕ ಗ್ರಾಮವಾಗಿದೆ.

ಹಿಂದೆ ವಡ್ಡರಹಳ್ಳಿಯಲ್ಲಿ ನಾಡ ಹೆಂಚು ತಯಾರಿಕೆಗೆ ಹೆಸರುವಾಸಿಯಾಗಿ ಜಿಲ್ಲೆಯ ಮನೆಗಳ ಸೂರಿಗೆ ನೆರಳು ಒದಗಿಸುತ್ತಾ ಮನೆ ಬಳಕೆಯ ಮಡಕೆ ಕುಡಿಕೆ ಅಡುಗೆ ಮಾಡುವ ಮಣ್ಣಿನ ವಸ್ತುಗಳನ್ನು ಜನರಿಗೆ ಪೂರೈಸುತ್ತಾ ಬಂದಿತ್ತು. ವಡ್ಡರಹಳ್ಳಿಯಲ್ಲಿ ನಾಡಹೆಂಚುಗಳಿಗೆ ಅಕ್ಕಪಕ್ಕದ ಜಿಲ್ಲೆಯ ಗ್ರಾಮಗಳಲ್ಲಿ ಬಹು ಬೇಡಿಕೆಯಿತ್ತು. ಗ್ರಾಮದಲ್ಲಿ ಈಗಲೂ ಸುಂದರವಾದ ನಾಡ ಹೆಂಚಿನ ಮನೆಗಳು ಕಾಣಸಿಗುತ್ತವೆ.

ಜಿಲ್ಲಾ ಕೇಂದ್ರದಿಂದ 10 ಕಿ.ಮೀ ಅಂತರದಲ್ಲಿರುವ ಗ್ರಾಮ ಇದಾಗಿದ್ದು, ಸುಮಾರು 1500 ಜನಸಂಖ್ಯೆ ಇದೆ. ಗ್ರಾಮದಲ್ಲಿ ಕೃಷಿ ಕುಟುಂಬಗಳೇ ಹೆಚ್ಚಿದ್ದು, ಪ್ರಮುಖವಾಗಿ ರೇಷ್ಮೆ, ಮಾವು, ತೆಂಗು ಬೆಳೆಗಾರರಿದ್ದು, ಉಪ ಕಸುಬಾಗಿ ಹೈನುಗಾರಿಕೆ ಅವಲಂಬಿತ ಕುಟುಂಬಗಳಿವೆ. ಮಾವು ಮತ್ತು ತೆಂಗು ತೋಟದ ಬೆಳೆಯೂ ಗ್ರಾಮದಲ್ಲಿ ಪ್ರಮುಖವಾಗಿದೆ.

ಗ್ರಾಮದ ಮೇಲ್ಬಾಗ ಕೆರೆ ಇದ್ದರೆ ಕೆಳಭಾಗ ಅರ್ಕಾವತಿ ನದಿ ಹರಿಯುತ್ತದೆ. ಕೆರೆ ಕಳೆದ 50 ವರ್ಷಗಳ ಹಿಂದೆ ಮಾಜಿ ಶಾಸಕ ಬನ್ನಿಕುಪ್ಪೆ ಪುಟ್ಟಸ್ವಾಮಿಗೌಡ ಎಂಬುವರು ಸರ್ಕಾರದಿಂದ ಕಟ್ಟಿಸಿದ್ದರು ಎನ್ನಲಾಗಿದೆ. ಅರ್ಕಾವತಿ ನದಿ ಮತ್ತು ಗ್ರಾಮದ ಕೆರೆ ರೈತರ ನೀರಿನ ಬವಣೆ ನೀಗಿಸಿದೆ.

ಪ್ರಸ್ತುತ ಅರ್ಕಾವತಿ ನದಿಯಿಂದ ಕಳೆದ ಎರಡು ವರ್ಷಗಳ ಹಿಂದೆ ಏತ ನೀರಾವರಿ ಮೂಲಕ ಕೆರೆ ತುಂಬಿಸುವ ಯೋಜನೆಯೂ ಕಾರ್ಯಗತಗೊಂಡಿದೆ. ಕೆರೆಯಲ್ಲಿ ಸದಾ ನೀರು ಮತ್ತು ನದಿಯಲ್ಲಿ ನೀರು ಹರಿಯುವ ಕಾರಣ ಅಂತರ್ಜಲಮಟ್ಟ ಕುಸಿಯದೆ ಉತ್ತಮ ನೀರಿನ ವ್ಯವಸ್ಥೆ ರೈತರ ಕೃಷಿಗೆ ಪುಷ್ಟಿ ನೀಡಿದೆ. ಅಭಿವೃದ್ಧಿಯತ್ತ ಗ್ರಾಮ ಸಾಗಿದೆ.

ಕುಂಬಾರಿಕೆ :

ಗ್ರಾಮದಲ್ಲಿ 15ಕ್ಕೂ ಹೆಚ್ಚು ಕುಂಬಾರಿಕೆ ಕುಟುಂಬಗಳು ಹಿಂದಿನಿಂದಲೂ ನಾಡ ಹೆಂಚು, ಮಡಕೆ, ಕುಡಿಕೆ ತಯಾರಿಕೆ ಮಾಡುತ್ತಿದ್ದವು. ಜಿಲ್ಲೆಯ ಹಲವು ಗ್ರಾಮಗಳಿಗೆ ಇಲ್ಲಿ ತಯಾರಾದ ಮಡಕೆ, ನಾಡಹೆಂಚುಗಳು ಸರಬರಾಜಾಗುತ್ತಿದ್ದವಂತೆ. ಆದರೆ, ಕಾಲಾಂತರದಲ್ಲಿ ಮಣ್ಣಿನ ವಸ್ತುಗಳಿಗೆ ಬೇಡಿಕೆ ಇಲ್ಲವಾದ್ದರಿಂದ ಆ ಕುಟುಂಬಗಳು ತಮ್ಮ ಕಾಯಕವನ್ನು ಬದಿಗೆ ಸರಿಸಿ ವ್ಯಾಪಾರ ಕೃಷಿಯತ್ತ ಮುಖ ಮಾಡಿದ್ದಾರೆ.

ಗ್ರಾಮದ ಇತಿಹಾಸ :

ವಡ್ಡರಹಳ್ಳಿಗೆ ಹೊಂದಿಕೊಂಡಂತೆ ಚನ್ನಿಗನದೊಡ್ಡಿ, ಮುದ್ದೇಗೌಡನದೊಡ್ಡಿ, ಗೊಲ್ಲರದೊಡ್ಡಿ, ಸೈದಾಳಿದೊಡ್ಡಿ ಗ್ರಾಮಗಳಿದ್ದವು. ಪ್ರಸ್ತುತ ನಾಲ್ಕು ಗ್ರಾಮಗಳು ಒಟ್ಟಿಗೆ ಇರುವ ಕಾರಣ ವಡ್ಡರಹಳ್ಳಿ ಹೆಸರಿನಿಂದ ಕರೆಯುತ್ತಿದ್ದಾರೆ. ವಡ್ಡರಹಳ್ಳಿ ಹೇಗೆ ಹೆಸರುಬಂದಿದೆ ಎಂಬುದಕ್ಕೆ ಯಾರಿಂದಲೂ ಸ್ಪಷ್ಟ ಉತ್ತರ ಸಿಗುವುದಿಲ್ಲ. ಮೊದಲು ಮುದ್ದೇಗೌಡನದೊಡ್ಡಿ ಎಂದು ಕರೆಯುತ್ತಿದ್ದರಂತೆ. ಹಳೆಯ ಗ್ರಾಮದ ಕಂದಾಯ ದಾಖಲಾತಿಗಳಲ್ಲಿ ಆ ಹೆಸರೇ ಇದೆ ಎನ್ನಲಾಗಿದೆ. ಕಾಲಾಂತರದಲ್ಲಿ ಮುದ್ದೇಗೌಡನದೊಡ್ಡಿ ಹೆಸರು ಹೋಗಿ ವಡ್ಡರಹಳ್ಳಿ ಹೆಸರಿನಿಂದ ಪ್ರಚಲಿತವಾಗಿದೆ. ಗ್ರಾಮ ಪುರಾತನವಾಗಿದ್ದರೂ ಗ್ರಾಮದ ಇತಿಹಾಸ ತಿಳಿಯುವ ಪ್ರಯತ್ನವನ್ನು ಗ್ರಾಮಸ್ಥರು ಮಾಡಿಲ್ಲ.

ಕಾಶಿಯಿಂದ ತಂದ ಲಿಂಗ :

ಗ್ರಾಮದಲ್ಲಿ ಬಸವೇಶ್ವರ ದೇವಾಲಯವಿದ್ದು, ದೇವಾಲಯದಲ್ಲಿರುವ ಲಿಂಗವನ್ನು ಕಾಶಿಯಿಂದ ಗುನ್ನೂರು ಗ್ರಾಮದ ಭಕ್ತರ ಕುಟುಂಬ ನೂರಾರು ವರ್ಷಗಳ ಹಿಂದೆ ಲಿಂಗವನ್ನು ತಲೆಮೇಲೆ ಹೊತ್ತು ಕಾಶಿಯಿಂದ ನಡೆದುಕೊಂಡು ಬಂದು ಪ್ರತಿಷ್ಠಾಪನೆ ಮಾಡಿದೆ ಎನ್ನುವ ಪ್ರತೀತಿ ಇದೆ.

ದೇವಾಲಯಗಳು : ಗ್ರಾಮದಲ್ಲಿ ಬಸವೇಶ್ವರ, ಲಕ್ಷ್ಮೀನಾರಾಯಣ, ಪಾರ್ವತಮ್ಮ, ಮಹದೇಶ್ವರ, ಶನೈಶ್ಚರ ಸ್ವಾಮಿ ದೇವಾಲಯಗಳಿವೆ. ಪ್ರತೀ ವರ್ಷ ಹಬ್ಬಗಳಲ್ಲಿ ವರ್ಷಕ್ಕೆ ಒಂದು ಭಾರಿ ಅಗ್ನಿಕೊಂಡ ನಡೆಯುತ್ತಾ ಬಂದಿದೆ.

ನದಿ ದಾಟುವುದು ತಪ್ಪಿದೆ :

ಅರ್ಕಾವತಿ ನದಿ ದಂಡೆಯಲ್ಲಿಯೇ ಗ್ರಾಮ ಇರುವ ಕಾರಣ ಕನಕಪುರ-ರಾಮನಗರ ರಸ್ತೆ ಸಂಪರ್ಕಕ್ಕೆ ಕೈಲಾಂಚಕ್ಕೆ ಸುತ್ತಿ ಬಳಸಿ ಹೋಗಬೇಕಿತ್ತು. ಪ್ರಸ್ತುತ ನದಿಗೆ ಸೇತುವೆ ನಿರ್ಮಾಣ ಮಾಡಲಾಗಿದ್ದು, ಕೆಲವೇ ಅಂತರದಲ್ಲಿ ಬಸ್ ಸಂಪರ್ಕ ಸಿಗುವಂತಾಗಿದೆ. ಜತೆಗೆ ನದಿ ಮತ್ತೊಂದು ದಂಡೆಯಲ್ಲಿ ರೈತರ ಹೆಚ್ಚಿನ ಜಮೀನಿದ್ದು, ಮೊದಲು ನದಿ ದಾಟಿ ಕೃಷಿ ಕೆಲಸ ನಿರ್ವಹಿಸಬೇಕಿತ್ತು. ಸೇತುವೆ ನಿರ್ಮಾಣವಾಗಿರುವ ಕಾರಣ ಸುಲಭವಾಗಿ ನದಿ ದಾಟಿ ಕೃಷಿ ಕೆಲಸಕ್ಕೆ ಮತ್ತು ರಾಮನಗರ ಕನಕಪುರ ರಸ್ತೆಗೆ ಸಂಪರ್ಕ ಸಾಧಿಸಬಹುದು.

ಸಾರ್ವಜನಿಕ ಸೇವೆ ಸೌಲಭ್ಯ : ಸರ್ಕಾರಿ ಮಾಧ್ಯಮಿಕ ಶಾಲೆ, ಅಂಗನವಾಡಿ, ಹಾಲಿನ ಡೇರಿ ಇದೆ. ಪಶು ಚಿಕಿತ್ಸಾಲಯ, ಪ್ರಾಥಮಿಕ ಆರೋಗ್ಯ ಕೇಂದ್ರ ಗ್ರಾಮಕ್ಕೇ ಬೇಕಾಗಿದೆ.

ಸರ್ವರೂ ಒಗ್ಗಟ್ಟಿನಿಂದ ಸ್ನೇಹ ಮನೋಭಾವದಿಂದ ಗ್ರಾಮದ ಅಭಿವೃದ್ಧಿಯಲ್ಲಿ ಕೈ ಜೋಡಿಸಿದ್ದಾರೆ. ಗ್ರಾಮಸ್ಥರ ಉತ್ತಮ ಸಹಕಾರದಿಂದ ಪ್ರಸ್ತುತ ದಿನಗಳಲ್ಲಿ ವಡ್ಡರಹಳ್ಳಿ ಅಭಿವೃದ್ಧಿಯತ್ತ ಸಾಗಿದೆ. ಗ್ರಾಪಂ ರಸ್ತೆ, ಚರಂಡಿ, ಸಮರ್ಪಕ ಕುಡಿಯುವ ನೀರು ಸೇರಿ ಮೂಲ ಸೌಕರ್ಯ ಒದಗಿಸುತ್ತಾ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ವೆಂಕಟೇಶ್, ಮಾಜಿ ಉಪಾಧ್ಯಕ್ಷ, ಹಾಲಿ ಗ್ರಾಪಂ ಸದಸ್ಯ ವಡ್ಡರಹಳ್ಳಿ.
ವಡ್ಡರಹಳ್ಳಿಯ ಕೃಷಿ ಪ್ರಧಾನ ಗ್ರಾಮವಾಗಿದ್ದು, ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಸದಾ ಮುಂದಿದೆ. ಜತೆಗೆ ಹಂದಿಗೊಂದಿ ಅರಣ್ಯ, ಅರ್ಕಾವತಿ ನದಿ ಮಧ್ಯೆ ಸುಂದರ ಪ್ರಕೃತಿಯ ಸೊಬಗು ಗ್ರಾಮವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದೆ. ಇತಿಹಾಸ ಹೇಳುವ ಬಸವೇಶ್ವರ ದೇವಾಲಯ ಗ್ರಾಮದ ಆರಾಧ್ಯ ದೈವವಾಗಿದೆ. ವಿ.ಎಚ್. ರಾಜು, ಜಿಪಂ ಮಾಜಿ ಸದಸ್ಯ, ವಡ್ಡರಹಳ್ಳಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net