

ತುಮಕೂರು: ವಚನ ಪಿತಾಮಹ ಫ.ಗು.ಹಳಕಟ್ಟಿ ಅವರನ್ನು ವಿದ್ಯಾರ್ಥಿಗಳು, ಯುವಜನತೆಗೆ ಪರಿಚಯಿಸಲು ಮುಂದಿನ ವರ್ಷದಿಂದ ವಚನ ಸಾಹಿತ್ಯ ಸಂರಕ್ಷಣಾ ದಿನವನ್ನು ಸಾಹಿತ್ಯ ಪರಿಷತ್ತಿನ ವತಿಯಿಂದ ಶಾಲಾ, ಕಾಲೇಜುಗಳಲ್ಲಿ ಆಚರಿಸಲಾಗುವುದು ಎಂದು ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಹೇಳಿದರು.
ನಗರದ ಕನ್ನಡ ಭವನದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕತಿ ಇಲಾಖೆ, ಕಸಾಪ, ಅಖಿಲ ಭಾರತ ವೀರಶೈವ ಮಹಾಸಭಾ, ನಗರ ವೀರಶೈವ ಸೇವಾ ಸಮಾಜ, ಜಿಲ್ಲಾ ಶರಣ ಸಾಹಿತ್ಯ ಪರಿಷತ್, ಬಸವ ಕೇಂದ್ರ ತುಮಕೂರು ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಚನ ಪಿತಾಮಹ ಫಕೀರಪ್ಪ ಗುರುವಪ್ಪ ಹಳಕಟ್ಟಿ ಅವರ ಜನ್ಮ ದಿನ ಹಾಗೂ ವಚನ ಸಾಹಿತ್ಯ ಸಂರಕ್ಷಣಾ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತಿದ್ದ ಅವರು, ಹರಿದು ಹಂಚಿ ಹೋಗಿದ್ದ ವಚನದ ತಾಳೆಗರಿಗಳನ್ನು ಒಗ್ಗೂಡಿಸಿ, ಸಮಗ್ರ ವಚನ ಸಾಹಿತ್ಯವನ್ನು ಜನರಿಗೆ ನೀಡಿದ ಫ.ಗು.ಹಳಕಟ್ಟಿ ಅವರ ಪರಿಶ್ರಮ ಯುವಜನತೆಗೆ ತಿಳಿಯಬೇಕಿದೆ ಎಂದರು.
ವಚನ ಸಾಹಿತ್ಯದ ಸಂಗ್ರಹಕ್ಕಾಗಿ ಇಡೀ ಜೀವನವನ್ನೇ ಮುಡಿಪಾಗಿಟ್ಟವರು .ಗು.ಹಳಕಟ್ಟಿ. ಇದ್ದ ಮನೆಯನ್ನು ಮಾರಿ, ವಚನ ಶಾಸ್ತ್ರ ಸಾರ ಪುಸ್ತಕ ಮುದ್ರಿಸಲು ಮುದ್ರಣ ಯಂತ್ರವನ್ನು ಖರೀದಿಸಿ,ಜೀವಿತದ ಕೊನೆಯವರೆಗೂ ಬಡವರಾಗಿಯೇ ಬದುಕಿ, ವಚನ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ವ್ಯಕ್ತಿ ಹಳಕಟ್ಟಿ ಎಂದು ಬಣ್ಣಿಸಿದರು.
ವಕೀಲ ವೃತ್ತಿಯಲ್ಲಿ ಸಹಸ್ರಾರು ರೂಪಾಯಿಗಳಿಸಬಹುದಾಗಿದ್ದ ಫ.ಗು.ಹಳಕಟ್ಟಿ ಅವರು,ವಕೀಲ ವೃತ್ತಿ ಬಿಟ್ಟು, ವಚನ ಸಾಹಿತ್ಯ ಸಂಗ್ರಹದಲ್ಲಿ ತೊಡಗಿದವರು. ಇವರು ತಮ್ಮಲ್ಲಿ ಸಂಗ್ರಹವಾಗಿದ್ದ ಸುಮಾರು 958 ವಚನಗಳನ್ನು ಇಂಗ್ಲೀಷ್ಗೆ ತರ್ಜುಮೆ ಮಾಡಿ, ಮೊದಲು ಮುದ್ರಣಕ್ಕೆ ವ್ಯವಸ್ಥೆ ಮಾಡಿದರು.1923ರಲ್ಲಿ ಬೆಳಗಾವಿಯ ಮಹಾವೀರ ಪ್ರಿಂಟರ್ಸ್ನಲ್ಲಿ ವಚನಶಾಸ್ತ್ರ ಸಾರ ಎಂಬ ಪುಸ್ತಕವನ್ನು ಹೊರತಂದ್ದಿದ್ದು ಇಂದಿಗೆ ನೂರು ವರ್ಷ ತುಂಬಿದೆ ಎಂದು ಸಂಶೋಧಕ ಡಾ.ನಂಜುಂಡಸ್ವಾಮಿ ತಿಳಿಸಿದರು.
ಹಾನಗಲ್ಕುಮಾರಸ್ವಾಮಿಗಳ ಸಹಕಾರದಿಂದ ಮುದ್ರಣಗೊಂಡ ವಚನಶಾಸ್ತ್ರ ಸಾರ ಪುಸ್ತಕದಿಂದ ಹೊರಜಗತ್ತಿಗೆ ಹೆಚ್ಚಿನ ಮಟ್ಟದಲ್ಲಿ ವಚನಕಾರರ ಪರಿಚಯವಾಗಲು ಸಾಧ್ಯವಾಯಿತು. ಇವರು ಹೊರತರುತಿದ್ದು ಶಿವಾನುಭ ಮಾಸ ಪತ್ರಿಕೆ ಸಹ ಹೆಚ್ಚು ಜನಪ್ರಿಯತೆ ಪಡೆದುಕೊಂಡಿತ್ತು.ಸುಮಾರು 6 ಸಂಪುಟಗಳಲ್ಲಿ ಮುದ್ರಿತವಾದ ವಚನ ಸಾಹಿತ್ಯ ಹಾಗೂ ಹರಿಹರನ ರಗಳೆ ಸಹ ಮುದ್ರಣಗೊಂಡಿದೆ.ತುಮಕೂರು ಜಿಲ್ಲೆಗೆ ಎರಡು ಬಾರಿ ಭೇಟಿ ನೀಡಿದ್ದ ಹಳಕಟ್ಟಿ ಅವರು ತಿಪಟೂರು ಮತ್ತು ಗೋಡೆಕೆರೆಯಲ್ಲಿ ಭಾಷಣ ಮಾಡಿದ ಉಲ್ಲೇಖಗಳಿವೆ ಎಂದರು.
ಕುಣಿಗಲ್ ಪ್ರಥಮದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ಗೋವಿಂದರಾಯ, ಶರಣ ಸಾಹಿತ್ಯ ಪರಿಷತ್ತಿನ ಎಂಜಿ.ಸಿದ್ದರಾಮಯ್ಯ, ನಿವೃತ್ತ ಮುಖ್ಯಶಿಕ್ಷಕ ಉಮಾಮಹೇಶ್, ಮಹದೇವಪ್ಪ, ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್, ಸುರೇಶಕುಮಾರ್, ಚಿಕ್ಕಬೆಳ್ಳಾವಿ ಶಿವಕುಮಾರ್, ರುದ್ರಮೂರ್ತಿ, ನಟರಾಜು, ವಿಶ್ವೇಶ್ವರಯ್ಯ,ಶಶಿಕುಮಾರ್ , ಅಮೃತ ವೀರಭದ್ರಯ್ಯ, ಶಿವಲಿಂಗಮ್ಮ ಮತ್ತಿತರರು ಉಪಸ್ಥಿತರಿದ್ದರು.