ಜೀವನದಲ್ಲಿ ವಚನಗಳ ಮೌಲ್ಯ ಅಳವಡಿಸಿಕೊಳ್ಳಿ: ಡಾ. ವೂಡೇ ಪಿ. ಕೃಷ್ಣ ಸಲಹೆ

Vchana
Published on

ಬೆಂಗಳೂರು: ಕನ್ನಡದ ಸಾಂಸ್ಕೃತಿಕ ಸಂಪತ್ತಾದ ವಚನಗಳ ಮೌಲ್ಯವನ್ನು ಅರಿತುಕೊಂಡರೆ ಬದುಕಿನಲ್ಲಿ ಸಂತೋಷ ಕಾಣಬಹುದು ಎಂದು ನಾಡೋಜ ಡಾ. ವೂಡೇ ಪಿ. ಕೃಷ್ಣ ಹೇಳಿದರು.

ವಚನಜ್ಯೋತಿ ಬಳಗ ನಾಗರಬಾವಿಯ ಆರ್ಯನ್ ಪ್ರೆಸಿಡೆನ್ಸಿ ಶಾಲೆಯಲ್ಲಿ ಆಯೋಜಿಸಿದ್ದ ‘ವಚನ ಕಲಿ ನಲಿ - ತರಗತಿಗಳಲ್ಲಿ ವಚನ ಬಿತ್ತನೆ’ ಸಾಂಸ್ಕೃತಿಕ ಪಯಣವನ್ನು ಉದ್ಘಾಟಿಸಿ ಮಾತನಾಡಿದರು. 25 ವರ್ಷಗಳಿಂದ ಕನ್ನಡ ಚಟುವಟಿಕೆಗಳನ್ನು ನಡೆಸುತ್ತಿರುವ ವಚನಜ್ಯೋತಿ ಬಳಗ, ಇದೀಗ ತರಗತಿ ನಡೆಸಿ ವಚನ ಬೋಧಿಸುತ್ತಿರುವ ಶ್ಲಾಘನೀಯ. ಇದರಿಂದ ಉತ್ತಮ ಸಮಾಜ ನಿರ್ಮಾಣ ನಿರೀಕ್ಷಿಸಬಹುದು ಎಂದು ಅಭಿಪ್ರಾಯಪಟ್ಟರು.

ವಚನಜ್ಯೋತಿ ಬಳಗದ ಅಧ್ಯಕ್ಷ ಎಸ್. ಪಿನಾಕಪಾಣಿ ಮಾತನಾಡಿ, ವಚನ ಚಳುವಳಿಯ ಆಧುನಿಕ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ತರಗತಿಗಳಲ್ಲಿ ವಚನಗಳನ್ನು ಪಠ್ಯ ಕ್ರಮದಲ್ಲಿ ಬೋಧಿಸುವ ಕಾರ್ಯ ಆರಂಭ ಮಾಡಿದ್ದೇವೆ. ಇದಕ್ಕಾಗಿ ಕನ್ನಡ ಪಠ್ಯಪುಸ್ತಕ ಮಾದರಿಯಲ್ಲಿ ವಚನಗಳನ್ನು ಮುದ್ರಿಸಿ ಅಭ್ಯಾಸ ಪುಸ್ತಕವಾಗಿ ಸಿದ್ದಗೊಳಿಸಲಾಗಿದೆ. ಈಗಾಗಲೇ ಹಲವಾರು ಶಾಲೆಗಳು ವಚನ ಬೋಧನೆಗೆ ಆಹ್ವಾನಿಸಿದ್ದು, ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಅಭಿಯಾನ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಚನಜ್ಯೋತಿ ಬಳಗದ ಪದಾಧಿಕಾರಿಗಳಾದ ಮಹೇಶ ಬೆಲ್ಲದ, ಗುರುಪ್ರಸಾದ ಕುಚ್ಚಂಗಿ, ಪ್ರಭು ಇಸುವನಹಳ್ಳಿ, ರಾಜಾ ಗುರುಪ್ರಸಾದ್ ರುದ್ರಪ್ಪ ದೇಸಾಯಿ, ಅನೀಲ ಹಾರಕೂಡೆ, ಗುಂಡೀಗೆರೆ ವಿಶ್ವನಾಥ್, ಶಕುಂತಲ ಬಾಗಲಕೋಟ, ರತ್ನಾ ದೇಸಾಯಿ, ವಿದ್ಯಾಶ್ರೀ ಹಾರಕೂಡೆ, ಗಂಗಾಧರ್, ಶಾಲೆಯ ಪ್ರಾಂಶುಪಾಲೆ ಗುಲ್ಜಾರ್ ಬೇಗಮ್, ನಿರ್ದೇಶಕ ರಾಣಾ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net