

ಹುಬ್ಬಳ್ಳಿ: ಮಹಾಶರಣೆ ಗಂಗಾಬಿಕಾ ಬಳಗ, ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಬಸವ ಕೇಂದ್ರ ವತಿಯಿಂದ ಆ. 31ರಂದು ಮಧ್ಯಾಹ್ನ 3.30ಕ್ಕೆ ಮಹಾ ಶರಣ ನುಲಿಯ ಚಂದಯ್ಯ ಜಯಂತ್ಯುತ್ಸವ ಹಾಗೂ ಶರಣೆಯರಿಂದ ವಚನ ಸಂಗೀತದ ಭವ್ಯ ಮೆರವಣಿಗೆಯು ನಗರದ ಮೂರು ಸಾವಿರ ಮಠದ ಆವರಣದಿಂದ ಆಯೋಜಿಸಲಾಗಿದೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಳಗದ ಸಂಚಾಲಕಿ ಡಾ. ಸ್ನೇಹಾ ಭೂಸನೂರ, ಮೂರುಸಾವಿರ ಮಠದ ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಮೆರವಣಿಗೆಗೆ ಚಾಲನೆ ನೀಡುವರು.
ಮೆರವಣಿಗೆಯು ಮಠದಿಂದ ಹೊರಟು, ಕೊಪ್ಪಿಕರ ರಸ್ತೆ, ಮಹಾನಗರ ಪಾಲಿಕೆ, ಚನ್ನಮ್ಮ ವೃತ್ತದ ಮೂಲಕ ಇಂದಿರಾಗಾಂಧಿ ಗಾಜಿನ ಮನೆ ತಲುಪಲಿದೆ. ನಂತರ ಅಲ್ಲಿರುವ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಗುವುದು ಎಂದರು.
18 ಮಹಿಳಾ ಮಂಡಳದ 300 ಮಹಿಳಾ ಸದಸ್ಯೆಯರು ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ. ಮೂರುಸಾವಿರ ಮಠದ ಶ್ರೀಗಳು, ರುದ್ರಾಕ್ಷಿಮಠದ ಶ್ರೀ ಬಸವಲಿಂಗ ಸ್ವಾಮೀಜಿ ಸೇರಿ ಇತರ ಸ್ವಾಮೀಜಿಗಳು ಉಪಸ್ಥಿತರಿರುವರು ಎಂದು ವಿವರಿಸಿದರು. ಜಾಗತಿಕ ಲಿಂಗಾಯತ ಮಹಾಸಭಾ ಧಾರವಾಡ ಘಟಕದ ಅಧ್ಯಕ್ಷ ಎಂ.ವಿ. ಗೊಂಗಡಶೆಟ್ಟಿ, ಬಸವ ಕೇಂದ್ರದ ಶಶಿಧರ ಕರವೀರಶೆಟ್ಟರ, ದಾಕ್ಷಾಯಿಣಿ ಕೋಳಿವಾಡ, ಜಯಶ್ರೀ ಹಿರೇಮಠ ಸುದ್ದಿಗೋಷ್ಠಿಯಲ್ಲಿದ್ದರು.