

ಹಾವೇರಿ: ಕೋವಿಡ್ 2ನೇ ಅಲೆಯ ತೀವ್ರತೆಯಿಂದ ನಮ್ಮನ್ನು ಹಾಗೂ ಪರಿವಾರವನ್ನು ರಕ್ಷಿಸಿಕೊಳ್ಳಲು ಲಸಿಕೆ ಪಡೆಯಬೇಕು. 45 ವರ್ಷ ತುಂಬಿದ ಎಲ್ಲರೂ ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕು. ಅಕ್ಕಪಕ್ಕದ ಮನೆಯವರಿಗೂ ಲಸಿಕೆ ಬಗ್ಗೆ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಹೇಳಿದರು.
ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಶ್ರಯದಲ್ಲಿ ತಾಲೂಕಿನ ದೇವಗಿರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಭಾನುವಾರ ಆಯೋಜಿಸಿದ್ದ ಕೋವಿಡ್ ಲಸಿಕಾ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಏ. 11ರಿಂದ 14ರವರೆಗೆ ಜಿಲ್ಲೆಯಲ್ಲಿ ಲಸಿಕಾ ಉತ್ಸವ ನಡೆಸಲಾಗುತ್ತದೆ. ಜಿಲ್ಲೆಯ 96 ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ಮಹಿಳೆಯರಿಗಾಗಿ ದೇವಗಿರಿ ಪ್ರಾಥಮಿಕ ಆರೋಗ್ಯ ಕೇಂದ್ರ, ಗುತ್ತಲ ಸಮುದಾಯ ಆರೋಗ್ಯ, ಹಾನಗಲ್ಲ ತಾಲೂಕು ಆರೋಗ್ಯ ಕೇಂದ್ರ, ರಾಣೆಬೆನ್ನೂರ ಎಂಸಿಎಚ್ ಕೇಂದ್ರಗಳಲ್ಲಿ ಪಿಂಕ್ಬೂತ್ಗಳನ್ನು ತೆರೆಯಲಾಗಿದೆ ಎಂದು ವಿವರಿಸಿದರು.
ಅಂಗನವಾಡಿ, ಆಶಾ ಕಾರ್ಯಕರ್ತೆಯರು ನಗರ ಹಾಗೂ ಹಳ್ಳಿಗಳಲ್ಲಿ ಸಂಚರಿಸಿ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಬಗ್ಗೆ ತಿಳಿವಳಿಕೆ ನೀಡಿ ಅವರನ್ನು ಲಸಿಕಾ ಕೇಂದ್ರದತ್ತ ಕರೆ ತರಬೇಕು. ಮೊದಲನೇ ಹಂತದ ಲಸಿಕೆ ಪಡೆದವರು 42 ದಿನದಿಂದ 64 ದಿನದ ಮಧ್ಯದಲ್ಲಿ ಎರಡನೇ ಹಂತದ ಲಸಿಕೆ ಪಡೆಯಬೇಕು ಎಂದರು.
ಜಿಲ್ಲಾ ಆರ್ಸಿಎಚ್ ಅಧಿಕಾರಿ ಡಾ. ಎಂ. ಜಯಾನಂದ ಮಾತನಾಡಿ, ಲಸಿಕಾ ಉತ್ಸವವನ್ನು ನೋಡಲ್ ಅಧಿಕಾರಿಗಳು, ಆಡಳಿತ ವೈದ್ಯಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿ 45 ವರ್ಷ ಮೇಲ್ಪಟ್ಟವರಿಗೆ ನಿಗದಿತ ಗುರಿಯಂತೆ ಕೋವಿಡ್ ಲಸಿಕೆ ಕೊಡಿಸಬೇಕು ಎಂದು ಸೂಚಿಸಿದರು. ಡಿಎಚ್ಒ ಡಾ. ಎಚ್.ಎಸ್. ರಾಘವೇಂದ್ರಸ್ವಾಮಿ ಇತರರಿದ್ದರು.
ಮಹಿಳೆಯರಿಗಾಗಿ ಪಿಂಕ್ ಕೇಂದ್ರ
ಗುತ್ತಲ: ಕೋವಿಡ್ ಲಸಿಕೆ ಪಡೆಯುವಲ್ಲಿ ಮಹಿಳೆಯರಿಗೆ ಪ್ರೋತ್ಸಾಹ ನೀಡಲು ಪಿಂಕ್ ಕೇಂದ್ರ ಸ್ಥಾಪಿಸಿ ಕೋವಿಡ್ ಲಸಿಕಾ ಉತ್ಸವವನ್ನು ಆರಂಭಿಸಲಾಗಿದೆ ಎಂದು ಡಾ. ಅಭಿನಂದನಕುಮಾರ ಸಾಹುಕಾರ ಹೇಳಿದರು.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಲಸಿಕಾ ಉತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕರೊನಾ ಹಾವಳಿ ದಿನೇದಿನೆ ಹೆಚ್ಚಾಗುತ್ತಿದ್ದು, ಈ ಬಗ್ಗೆ ಎಲ್ಲರೂ ಜಾಗೃತರಾಗಬೇಕು ಎಂದರು. ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಹಸ್ಮತ್ಬಿ ರಿತ್ತಿ ಕಾರ್ಯಕ್ರಮ ಉದ್ಘಾಟಿಸಿದರು. ಉಪಾಧ್ಯಕ್ಷೆ ಅನ್ನಪೂರ್ಣ ಬಂಡಿವಡ್ಡರ, ಡಾ. ದೀಪ್ತಿ ಮಮದಾಪುರ, ಡಾ. ವಿನಯ ಕವಳಾಸ್ತ್ರಹಿರೇಮಠ, ಡಾ. ಪ್ರೀತಿ, ಆರೋಗ್ಯ ಸಹಾಯಕ ಮಾಲತೇಶ, ಎಕ್ಸರೇ ತಜ್ಞ ರವಿಶಂಕರ ಹರಗಿ, ಪ್ರದಸ ಸುರೇಶ ಮೈಲಾಳ, ಆಪ್ತ ಸಮಾಲೋಚಕ ನಾಗರಾಜ ಈಳಗೇರ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಇದ್ದರು.
ನಿಯಮ ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ
ಸವಣೂರ: ಕೋವಿಡ್-19 ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದೆ. ಅದನ್ನು ತಡೆಗಟ್ಟಲು ಮಾಸ್ಕ್ ಧರಿಸುವುದು, ಪರಸ್ಪರ ಅಂತರ ಕಾಯ್ದುಕೊಳ್ಳಬೇಕು ಎಂದು ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ ಹೇಳಿದರು.
ಇಲ್ಲಿನ ಕಂದಾಯ ಇಲಾಖೆ ಕಚೇರಿ ಆವರಣದಲ್ಲಿ ಪುರಸಭೆ, ತಾಲೂಕಾಡಳಿತ, ತಾಪಂ, ಆರೋಗ್ಯ ಸೇರಿದಂತೆ ವಿವಿಧ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ಕೋವಿಡ್-19, ಮಾಸ್ಕ್ ಧರಿಸುವ ಕುರಿತು ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕರೊನಾ ವೈರಸ್ ಹಾವಳಿ ಮತ್ತೆ ಪ್ರಾರಂಭವಾಗಿದೆ. ಸಾರ್ವಜನಿಕರು ಸಭೆ, ಸಮಾರಂಭ, ಮದುವೆ, ಜಾತ್ರೆ ಸೇರಿದಂತೆ ಹೆಚ್ಚು ಜನರು ಸೇರುವ ಕಾರ್ಯಕ್ರಮ ಆಯೋಜಿಸಬಾರದು. ಹಬ್ಬಗಳನ್ನು ಮನೆಗೆ ಸೀಮಿತಗೊಳಿಸಿ ಆಚರಿಸಬೇಕು. ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪಟ್ಟಣದ ಅಂಗಡಿ-ಮುಂಗಟ್ಟುಗಳಲ್ಲಿ ಮಾಸ್ಕ್ ಧರಿಸದೆ ವ್ಯಾಪಾರ ಮಾಡುತ್ತಿರುವ ಸ್ಥಳಕ್ಕೆ ತೆರಳಿದ ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ, ಅಧಿಕಾರಿಗಳು ಹಲವರಿಗೆ ದಂಡ ವಿಧಿಸಿದರು. ವಿವಿಧ ಅಂಗಡಿಗಳ ಮೇಲೆ ದಾಳಿ ನಡೆಸಿ 20 ಕೆಜಿ ಪ್ಲಾಸ್ಟಿಕ್ ವಶ ಪಡಿಸಿಕೊಂಡು, 1200 ರೂ. ದಂಡ ವಿಧಿಸಿದರು.
ತಹಸೀಲ್ದಾರ್ ಸಿ.ಎಸ್. ಭಂಗಿ, ಉಪ ತಹಸೀಲ್ದಾರ್ ನಾಗರತ್ನಾ, ಶಿರಸ್ತೇದಾರ್ ತ್ರಿವೇಣಿ ನೀರಲಕಟ್ಟಿ, ತಾಪಂ ಇಒ ಮುನಿಯಪ್ಪ ಪಿ, ಸಿಡಿಪಿಒ ಅಣ್ಣಪ್ಪ ಹೆಗಡೆ, ಆರೋಗ್ಯ ಇಲಾಖೆ ಹಿರಿಯ ಶಿಕ್ಷಣಾಧಿಕಾರಿ ಎಚ್.ಎಫ್. ಹನಕನಹಳ್ಳಿ, ಪುರಸಭೆ ಮುಖ್ಯಾಧಿಕಾರಿ ಕೃಷ್ಣ ಕಟ್ಟಿಮನಿ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ವಿನೋದ ಬಗಾಡೆ, ಬಿಸಿಎಂ ಅಧಿಕಾರಿ ಸುಲೋಚನಾ ಕಟ್ನೂರ, ಆರ್ಐ ರವಿ ಮಾಚಕನೂರ ಇತರರಿದ್ದರು.
ಕರೊನಾ ಸುರಕ್ಷತಾ ಕ್ರಮ ಅನುಸರಿಸಲು ಸೂಚನೆ
ಹಾವೇರಿ: ಕೋವಿಡ್ ಸೋಂಕು ಹರಡದಂತೆ ನಿಯಂತ್ರಿಸುವ ನಿಟ್ಟಿನಲ್ಲಿ ಸಾರ್ವಜನಿಕರ ಸುರಕ್ಷತೆಗಾಗಿ ಜಾಗೃತಿ ಮೂಡಿಸಲು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ನಗರದ ಗಾಂಧಿ ವೃತ್ತದಿಂದ ಹೊಸಮನಿ ಸಿದ್ದಪ್ಪ ವೃತ್ತದವರೆಗೆ ಪಾದಯಾತ್ರೆ ನಡೆಸಿ ಸಾರ್ವಜನಿಕರಲ್ಲಿ ಮಾಸ್ಕ್ ಧರಿಸುವ ಕುರಿತು ಜಾಗೃತಿ ಮೂಡಿಸಿದರು.
ನಗರದ ಗಾಂಧಿ ವೃತ್ತದಲ್ಲಿ ಪೊಲೀಸ್ ಇಲಾಖೆಯಿಂದ ಕರೊನಾ ಜಾಗೃತಿಗಾಗಿ ಹಮ್ಮಿಕೊಂಡಿದ್ದ ಜಾಥಾಕ್ಕೆ ಚಾಲನೆ ನೀಡಿದ ಅವರು, ಗಾಂಧಿ ವೃತ್ತದಿಂದ ಮೈಲಾರ ಮಹದೇವ ವೃತ್ತವರೆಗೆ ಬೀದಿಬದಿಯ ವ್ಯಾಪಾರಸ್ಥರು, ಸಾರ್ವಜನಿಕರಿಗೆ ಮಾಸ್ಕ್ ಧರಿಸುವ ಕುರಿತು ಜಾಗೃತಿ ಮೂಡಿಸಿದರು. ಇದೇ ಸಂದರ್ಭದಲ್ಲಿ ಬೀದಿಬದಿಯ ಅಂಗವಿಕಲ ವ್ಯಾಪಾರಿಯೊಬ್ಬರ ಯೋಗಕ್ಷೇಮ ವಿಚಾರಿಸಿದ ಜಿಲ್ಲಾಧಿಕಾರಿ, ಅವನ ಆರ್ಥಿಕ ಸ್ಥಿತಿಗತಿಗಳು, ಕೌಟುಂಬಿಕ ಹಿನ್ನೆಲೆಯ ಮಾಹಿತಿ ಪಡೆದು ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯಡಿ ಸೌಲಭ್ಯ ಒದಗಿಸುವಂತೆ ನಗರಸಭೆ ಪೌರಾಯುಕ್ತರಿಗೆ ಸೂಚಿಸಿದರು. ಎಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಪೌರಾಯುಕ್ತ ಪರಶುರಾಮ ಚಲವಾದಿ, ಡಿವೈಎಸ್ಪಿಗಳಾದ ಶಂಕರ ಮಾರಿಹಾಳ, ವಿಜಯಕುಮಾರ ಸಂತೋಷ, ಸಿಪಿಐ ಸಂತೋಷ ಪವಾರ, ನಾಗಮ್ಮ ಇತರರಿದ್ದರು.