

ಪಾಂಡವಪುರ: ರಾಸುಗಳಿಗೆ ಕಾಲುಬಾಯಿ ಜ್ವರದ ಲಸಿಕೆ ಹಾಕಿಸುವ ಮೂಲಕ ರೈತರು ರಾಸುಗಳ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
ತಾಲೂಕಿನ ಕ್ಯಾತನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಪಶು ಸಂಗೋಪನಾ ಇಲಾಖೆ ವತಿಯಿಂದ ಮಂಗಳವಾರ ಆಯೋಜಿಸಿದ್ದ ರಾಸುಗಳಿಗೆ ಕಾಲುಬಾಯಿ ಜ್ವರದ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ರಾಸುಗಳ ಆರೋಗ್ಯ ದೃಷ್ಟಿಯಿಂದ ಜಾರಿಗೆ ತಂದಿರುವ ಲಸಿಕಾ ಕಾರ್ಯಕ್ರಮದಲ್ಲಿ ರೈತರು ಭಾಗವಹಿಸಿ ತಮ್ಮ ರಾಸುಗಳಿಗೆ ಲಸಿಕೆ ಕೊಡಿಸಬೇಕು. ಸರ್ಕಾರದ ಜತೆಗೆ ಮನ್‌ಮುಲ್ ವತಿಯಿಂದಲೂ ರಾಸುಗಳ ಆರೋಗ್ಯದ ವಿಚಾರವಾಗಿ ಆಯೋಜಿಸುವ ಅರಿವು ಕಾರ್ಯಕ್ರಮಗಳಲ್ಲಿ ರೈತರು ತಪ್ಪದೆ ಭಾಗವಹಿಸಬೇಕು ಎಂದು ತಿಳಿಸಿದರು.
ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಹಿಮಾಚಲ್ ಮಾತನಾಡಿ, ಕಾಲುಬಾಯಿ ಜ್ವರದ ವಿರುದ್ಧದ ಲಸಿಕಾ ಅಭಿಯಾನವು ಇಂದಿನಿಂದ ಅ.25ರವರೆಗೆ ನಡೆಯಲಿದೆ. ತಾಲೂಕಿನಲ್ಲಿ 39 ಸಾವಿರ ರಾಸುಗಳು ಹಾಗೂ 5700 ಎಮ್ಮೆಗಳು ಸೇರಿದಂತೆ ಒಟ್ಟು 44,700 ರಾಸುಗಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಈ ಅಭಿಯಾನದ ಯಶಸ್ಸಿಗಾಗಿ 32 ಲಸಿಕೆದಾರರು, 17 ಪಶು ಸಖಿಗಳು ಹಾಗೂ 7 ಮೇಲ್ವಿಚಾರಕರನ್ನು ನೇಮಿಸಲಾಗಿದೆ ಎಂದರು.
ಡೇರಿ ಅಧ್ಯಕ್ಷ ಎಂ.ದೇವೇಂದ್ರ, ಮಾಜಿ ಅಧ್ಯಕ್ಷ ಕೆ.ಜೆ.ಗಿರೀಶ್, ಉಪಾಧ್ಯಕ್ಷ ಸತೀಶ್, ಕಾರ್ಯದರ್ಶಿ ವಿಶ್ವನಾಥ್, ಗ್ರಾಪಂ ಉಪಾಧ್ಯಕ್ಷೆ ನಯನಾ, ಪಶು ವೈದ್ಯಾಧಿಕಾರಿಗಳಾದ ಡಾ.ದರ್ಶನ್, ಡಾ.ಕಾವ್ಯಾ, ಡಾ.ಪಾಟೀಲ್, ಇಲಾಖೆ ಸಿಬ್ಬಂದಿ ಶ್ರೀನಿವಾಸ್, ಲೋಕೇಶ್, ಅನಿತಾಕುಮಾರಿ ಇತರರು ಇದ್ದರು.