ರಕ್ತ ಕೊಟ್ಟೇವು.. ನೀರು ಕೊಡಲ್ಲ...

ಸಿದ್ದಾಪುರ ತಾಲೂಕಿನ ಬಿಳಗಿ ಮಾರಿಕಾಂಬಾ ದೇವಾಲಯದಿಂದ ಸಿದ್ದಾಪುರದವರೆಗೆ ನದಿ ಜೋಡಣೆ ವಿರೋಧಿಸಿ ನಡೆದ ಪಾದಯಾತ್ರೆಯಲ್ಲಿ ಪಾಲ್ಗೊಂಡ ಜನ ಸಮೂಹ.
ಸಿದ್ದಾಪುರ ತಾಲೂಕಿನ ಬಿಳಗಿ ಮಾರಿಕಾಂಬಾ ದೇವಾಲಯದಿಂದ ಸಿದ್ದಾಪುರದವರೆಗೆ ನದಿ ಜೋಡಣೆ ವಿರೋಧಿಸಿ ನಡೆದ ಪಾದಯಾತ್ರೆಯಲ್ಲಿ ಪಾಲ್ಗೊಂಡ ಜನ ಸಮೂಹ.
Published on

ಪ್ರಮುಖ ಮುಖ್ಯಾಂಶಗಳು

  • ಅಘನಾಶಿನಿ-ವೇದಾವತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪಾದಯಾತ್ರೆ
  • ಬಹಿರಂಗ ಸಭೆಯಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಜನ ಭಾಗಿ
  • ನದಿ ಜೋಡಣೆ ವಿರುದ್ಧ ಮೊಳಗಿದ ಘೋಷಣೆ
ಸಿದ್ದಾಪುರ: ಅಘನಾಶಿನಿ-ವೇದಾವತಿ ನದಿ ಜೋಡಣೆ ವಿರೋಧಿಸಿ ನಡೆದ ಬೃಹತ್ ಪಾದಯಾತ್ರೆ ಹಾಗೂ ಬಹಿರಂಗ ಸಭೆಯಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಜನತೆ ಪಾಲ್ಗೊಂಡು ಯೋಜನೆಯನ್ನು ಕೂಡಲೇ ಕೈ ಬಿಡುವಂತೆ ಒಕ್ಕೊರಲಿನಿಂದ ಆಗ್ರಹಿಸಿ ರಕ್ತವನ್ನಾದರೂ ಕೊಟ್ಟೇವು ಆದರೆ ನೀರನ್ನು ಯಾವುದೇ ಕಾರಣಕ್ಕೂ ನೀಡುವುದಿಲ್ಲ ಎಂದು ಘೊಷಣೆ ಮೊಳಗಿಸಿದರು.
ಅರಣ್ಯ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ಬುಧವಾರ ಏರ್ಪಡಿಸಿದ್ದ ಸಭೆ ಇದಕ್ಕೆ ಸಾಕ್ಷಿ ಆಗಿತ್ತು.
ಕೇಂದ್ರ ಸರ್ಕಾರದ ಅರಣ್ಯ ಮತ್ತು ಪರಿಸರ ಸಚಿವರಿಗೆ ಅಘನಾಶಿನಿ ನದಿ ಜೋಡಣೆ ಸ್ಥಗಿತಗೊಳಿಸಲು ಆಗ್ರಹಿಸಿ ಮತ್ತು ಜಿಲ್ಲೆಯಲ್ಲಿ ಅರಣ್ಯವನ್ನು ನಾಶಪಡಿಸಿ ಯೋಜನೆಗೆ ಅವಕಾಶ ನೀಡಬಾರದೆಂದು ಆಗ್ರಹಿಸಿ ಒಂದು ದಿನದಲ್ಲಿ 25 ಸಾವಿರಕ್ಕೂ ಹೆಚ್ಚು ಆಕ್ಷೇಪ ಪತ್ರ ಸಲ್ಲಿಸಿರುವುದು ವಿಶೇಷವಾಗಿತ್ತು. ಇದು ಯೋಜನೆಯ ವಿರುದ್ಧ ಹಮ್ಮಿಕೊಳ್ಳಲಾದ ಕಾನೂನು ಹೋರಾಟದ ಮುನ್ಸೂಚನೆಯಾಗಿ ಪರಿಣಮಿಸಿದೆ.
ಬೃಹತ್ ಸಭೆಯಲ್ಲಿ ಮಾತನಾಡಿದ ರವೀಂದ್ರ ನಾಯ್ಕ, ಈಗಾಗಲೇ ಜಿಲ್ಲೆಯ ಹಲವು ಯೋಜನೆಗಳಿಗೆ ಭೂಮಿಯನ್ನು ನೀಡಲಾಗಿದೆ. ಅದರಂತೆ ಅರಣ್ಯವಾಸಿಗಳಿಗೂ ಭೂಮಿ ನೀಡಬೇಕು. ಯಾವುದೇ ಕಾರಣಕ್ಕೂ ಜಿಲ್ಲೆಗೆ ಯೋಜನೆಗಳು ಬೇಡ. ನದಿ ಜೋಡಣೆ ಯೋಜನೆಯನ್ನು ಕೈ ಬಿಡಬೇಕು ಎಂದು ಹೇಳಿ ರಾಷ್ಟ್ರೀಯ ಜಲಾಭಿವೃದ್ದಿ ಸಂಸ್ಥೆಯ ಯೋಜನಾ ಪೂರ್ವ ಕಾರ್ಯ ಸಾಧ್ಯತ ಕರಡು ವರದಿ ಅವೈಜ್ಞಾನಿಕ ಮತ್ತು ಪರಿಸರ ವಿರೋಧಿ ಎಂದು ಖಂಡಿಸಿದರು.
ಇಂದಿನ ಹೋರಾಟ ಇದೊಂದು ಎಚ್ಚರಿಕೆ ಆಗಿದೆ. ಮುಂದಿನ ದಿನದಲ್ಲಿ ಎಲ್ಲರೂ ಸೇರಿ ವಿಧಾನ ಸೌಧವನ್ನು ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.
ನಮ್ಮ ಹೋರಾಟಕ್ಕೆ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ, ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ, ಬಂಗಾರಮಕ್ಕಿಯ ಶ್ರೀ ಮಾರುತಿ ಗುರೂಜಿ ಅವರು ಬೆಂಬಲ ನೀಡಿ ಸಂದೇಶ ನೀಡಿರುವುದು ನಮಗೆ ಮತ್ತಷ್ಟು ಬಲ ಬಂದಿದೆ ಎಂದರು.
ಜಿಪಂ ಮಾಜಿ ಸದಸ್ಯ ಎನ್.ವಿ. ಹೆಗಡೆ ಮುತ್ತಿಗೆ ಮಾತನಾಡಿ, ನಮ್ಮ ಸಂಘಟನೆ ಭದ್ರವಾಗಿದ್ದು, ಈ ಸಂಘಟನೆಯ ಮೂಲಕ ನಾವು ಗೆಲುವು ಸಾಧಿಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲಾ ಸಂಚಾಲಕ ಮಾಬ್ಲೇಶ್ವರ ನಾಯ್ಕ ಬೇಡ್ಕಣಿ, ನಾಗಪತಿ ಗೌಡ ಹುಕ್ಕಳ್ಳಿ, ಜಿ.ಎನ್. ಹೆಗಡೆ, ಮಂಜು ಮರಾಠಿ ಕುಮಟಾ, ಸುರೇಶ್ ಮೇಸ್ತಾ, ಶಾಮಲ ಗೌಡ, ರಾಜೇಶ್ ವಿ. ಭಟ್ ಮಕ್ಕಿಗದ್ದೆ, ಮಂಜುನಾಥ, ಮಹೇಶ ಭಟ್, ವಸಂತ ಹೆಗಡೆ, ಗಣಪತಿ ಗುಂಜಗೋಡ, ರಾಜು ನಾಯ್ಕ ಕಿರೆಕೋಡ, ರಾಮಕೃಷ್ಣ ನಾಯ್ಕ ಶಿರೂರು ಇತರರು ಮಾತನಾಡಿದರು.
ತಾಲೂಕಿನ ವಿವಿಧ ಗ್ರಾಪಂ ಜನಪ್ರತಿನಿಧಿಗಳು, ಸಂಘ ಸಂಸ್ಥೆಯ ಪದಾಧಿಕಾರಿಗಳು, ಮಹಿಳೆಯರು, ವೃದ್ಧರು ಸೇರಿದಂತೆ , ಕುಮಟಾ, ಹೊನ್ನಾವರ, ಶಿರಸಿ, ಅಂಕೋಲಾ ತಾಲೂಕಿನ ಜನತೆ ಸೇರಿದಂತೆ ಹತ್ತು ಸಾವಿರಕ್ಕೂ ಅಧಿಕ ಜನರು ಪಾಲ್ಗೊಂಡಿದ್ದರು.

ಪಾದಯಾತ್ರೆ ಮೂಲಕ ಹರಿದು ಬಂದ ಜನಸಾಗರ

ತಾಲೂಕಿನ ಬಿಳಗಿ ಮಾರಿಕಾಂಬಾ ದೇವಾಲಯದಿಂದ ಯೋಜನೆ ವಿರುದ್ಧ ಘೋಷಣೆ ಕೂಗುತ್ತ ಮೆರವಣಿಗೆಯು ಬೇಡ್ಕಣಿ- ಹೊಸೂರು ಸರ್ಕಲ್ ಮತ್ತು ತಿಮ್ಮಪ್ಪ ನಾಯ್ಕ ವೃತ್ತದ ಮೂಲಕ ಸಿದ್ದಾಪುರದ ನೆಹರು ಮೈದಾನದಲ್ಲಿ ಸಂಪನ್ನಗೊಂಡಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net