ಶೀಘ್ರದಲ್ಲಿ ಉತ್ತರ ಕನ್ನಡ ಮಲೇರಿಯಾ ಮುಕ್ತ ..?

ರಾಷ್ಟ್ರೀಯ ಮಲೇರಿಯಾ ನಿರ್ಮೂಲನಾ ಮೌಲ್ಯಮಾಪನ ತಂಡವು ಕಾರವಾರಕ್ಕೆ ಆಗಮಿಸಿತ್ತು.
ರಾಷ್ಟ್ರೀಯ ಮಲೇರಿಯಾ ನಿರ್ಮೂಲನಾ ಮೌಲ್ಯಮಾಪನ ತಂಡವು ಕಾರವಾರಕ್ಕೆ ಆಗಮಿಸಿತ್ತು.
Published on

ಪ್ರಮುಖ ಮುಖ್ಯಾಂಶಗಳು

  • ರಾಷ್ಟ್ರೀಯ ಮಲೇರಿಯಾ ನಿರ್ಮೂಲನಾ ಮೌಲ್ಯಮಾಪನ ತಂಡ ಉತ್ತರ ಕನ್ನಡಕ್ಕೆ ಭೇಟಿ ನೀಡಿತು
  • ತಂಡದ ವರದಿ ಆಧರಿಸಿ ಉತ್ತರ ಕನ್ನಡ ಮಲೇರಿಯಾ ಮುಕ್ತ ಘೋಷಣೆ ಸಾಧ್ಯತೆ
ಕಾರವಾರ:

ಉತ್ತರ ಕನ್ನಡ ಜಿಲ್ಲೆಯನ್ನು ಮಲೇರಿಯಾ ಮುಕ್ತ ಎಂದು ಘೊಷಿಸುವ ಸಂಬಧ ಜಿಲ್ಲಾ ಆರೋಗ್ಯ ಇಲಾಖೆಯು ಅರ್ಜಿ ಸಲ್ಲಿಸಿದ್ದು, ರಾಷ್ಟ್ರೀಯ ಮಲೇರಿಯಾ ನಿರ್ಮೂಲನಾ ಮೌಲ್ಯಮಾಪನ ತಂಡವು 3 ದಿನಗಳ ಉತ್ತರ ಕನ್ನಡ ಜಿಲ್ಲೆಗೆ ಇತ್ತೀಚಿಗೆ ಭೇಟಿ ನೀಡಿತು.

ಉತ್ತರ ಕನ್ನಡ ಜಿಲ್ಲೆಯಲ್ಲಿ 2014 ರಿಂದ ಯಾವುದೇ ಸ್ಥಳೀಯ ಮಲೇರಿಯಾ ಪ್ರಕರಣಗಳಿಲ್ಲ ಮತ್ತು ಆಮದು ಮಾಡಿಕೊಂಡ ಪ್ರಕರಣಗಳೂ ಕಡಿಮೆ ಇರುವುದರಿಂದ, ಮಲೇರಿಯಾ ನಿರ್ಮೂಲನಾ ಪ್ರಮಾಣೀಕರಣಕ್ಕೆ ಅರ್ಜಿ ಸಲ್ಲಿಸಲಾಗಿದೆ.
ತಂಡದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಸಲಹೆಗಾರ ಡಾ. ತಾರಕ ಸೌರಭ, ದಾದ್ರಾ ಮತ್ತು ನಗರ ಹವೇಲಿ ದಮನ್ ಮತ್ತು ಡಿಯು ರಾಜ್ಯ ಕಾರ್ಯಕ್ರಮ ಅಧಿಕಾರಿ ಡಾ. ಗಣೇಶ ಕಮಲಾಕರ ವೆರ್ಣೇಕರ್, ಆಂಧ್ರಪ್ರದೇಶದ ಜಿಲ್ಲಾ ವೈದ್ಯಾಧಿಕಾರಿ ಡಾ. ಕ್ರಾಂತಿಕುಮಾರ ಮತ್ತು ಪುದುಚೇರಿಯ ವೈದ್ಯಾಧಿಕಾರಿ ಡಾ. ಐಶ್ವರ್ಯ ಪೆರುಮಾಳ್ ಇದ್ದರು.
ಕಾರವಾರ ವೈದ್ಯಕೀಯ ಕಾಲೇಜ್, ಭಾರತೀಯ ನೌಕಾ ಸೇನೆಯ ಪತಂಜಲಿ ಆಸ್ಪತ್ರೆ, ಕಾರವಾರ ಬೈತಖೋಲ್ ಬಂದರು ಪ್ರದೇಶ, ಖಾಸಗಿ ಆಸ್ಪತ್ರೆ ಮತ್ತು ಖಾಸಗಿ ಪ್ರಯೋಗಾಲಯಕ್ಕೆ ತಂಡ ಭೇಟಿ ನೀಡಿ ಪರಿಶೀಲಿಸಿತು. ಅಲ್ಲದೇ, ಕಾರವಾರ ಬೈತಖೋಲ್‌ನ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಕುಮಟಾದ ದೀವಗಿ ಆರೋಗ್ಯ ಉಪ ಕೇಂದ್ರ, ಅಂಕೋಲಾ ತಾಲೂಕು ಆಸ್ಪತ್ರೆ, ಭಟ್ಕಳ ಶಿರಾಲಿಯ ಸಮುದಾಯ ಆರೋಗ್ಯ ಕೇಂದ್ರ, ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ದಿವಗಿ ಗ್ರಾಮದ ಕೊನೆಯ ಸ್ಥಳೀಯ ಪ್ರಕರಣಕ್ಕೆ ಭೇಟಿ ನೀಡಿ ಹಳ್ಳಿಗಳಲ್ಲಿನ ವೆಕ್ಟರ್ ನಿಯಂತ್ರಣ ಕ್ರಮಗಳನ್ನು ಪರಿಶೀಲಿಸಿ, ಆಶಾ ಕಾರ್ಯಕರ್ತರು ಮತ್ತು ಗ್ರಾಮಸ್ಥರನ್ನು ಸಹ ಸಂದರ್ಶಿಸಲಾಯಿತು. ಡಿಎಚ್‌ಒ ಡಾ. ಸಂಜಯ ದೊಡ್ಡಮನಿ, ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ. ರಮೇಶ ರಾವ್ ನೇತೃತ್ವದ ಜಿಲ್ಲಾ ಮಲೇರಿಯಾ ಇಲಾಖೆ ನಡೆಸಿದ ಚಟುವಟಿಕೆಗಳನ್ನು ಮತ್ತು ಆಶಾಗಳು, ಪ್ರಾಥಮಿಕ ಆರೋಗ್ಯ ರಕ್ಷಣಾ ಅಧಿಕಾರಿಗಳು, ಸಮುದಾಯ ಆರೋಗ್ಯ ಅಧಿಕಾರಿಗಳು, ವೈದ್ಯಕೀಯ ಅಧಿಕಾರಿಗಳು ಸೇರಿದಂತೆ ತಳಮಟ್ಟದ ಕಾರ್ಯಕರ್ತರ ಕೆಲಸವನ್ನು ತಂಡವು ಶ್ಲಾಘಿಸಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net