ಸ್ಮಾರ್ಟ್‌ ಫೋನ್‌ ಕೊಂಡವರು ಬೇಸ್ತು

ಸೋಲಾರ್ ಅಳವಡಿಸಿದ ಮೊಬೈಲ್‌ ಟವರ್
ಸೋಲಾರ್ ಅಳವಡಿಸಿದ ಮೊಬೈಲ್‌ ಟವರ್
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲೆಯ 100 ಟವರ್‌ಗಳಲ್ಲಿ ಸಮಸ್ಯೆ
  • ಮಳೆಗಾಲದಲ್ಲಿ ಚಾರ್ಜ್‌ ಆಗದ ಟವರ್‌ಗಳು
ಕಾರವಾರ: `ಗಂಡ ಪಟ್ಟೆ ಸೀರೆ ತರುತ್ತಾನೆಂದು ಇದ್ದ ಬಟ್ಟೆ ಸುಟ್ಟಳಂತೆ' ಎಂಬ ಕನ್ನಡ ಗಾಧೆಯಂತಾಗಿದೆ ಉತ್ತರ ಕನ್ನಡದ ಗ್ರಾಮೀಣ ಭಾಗದ ಜನರ ಪರಿಸ್ಥಿತಿ. ಹೊಸ ಬಿಎಸ್‌ಎನ್‌ಎಲ್ ಟವರ್ ಆಗಿದೆ ಎಂದು ಹತ್ತಾರು ಸಾವಿರ ರೂ. ಕೊಟ್ಟು ಹೊಸ ಮೊಬೈಲ್ ಖರೀದಿಸಿದ ಗ್ರಾಹಕರು ಈಗ ಬೇಸ್ತು ಬಿದ್ದಿದ್ದಾರೆ.
ಘೋಷಣೆಯಾಗಿ ಐದಾರು ವರ್ಷಗಳ ಬಳಿಕ ಜಿಲ್ಲೆಯ ವಿವಿಧ ಗ್ರಾಮೀಣ ಪ್ರದೇಶಗಳಲ್ಲಿ ಬಿಎಸ್‌ಎನ್‌ಎಲ್ ಹೊಸ ಟವರ್‌ಗಳನ್ನು ನಿರ್ಮಾಣ ಮಾಡಿ 4ಜಿ ನೆಟ್ವರ್ಕ್ ಬಿಡಲಾಗಿದೆ. ನಮ್ಮೂರಿಗೆ ನೆಟ್ವರ್ಕ್ ಬಂತು ಎಂದು ನಂಬಿದ ಗ್ರಾಮೀಣ ಭಾಗದ ಜನ ಹಳೆಯ ಕೀ ಪ್ಯಾಡ್ ಹ್ಯಾಂಡ್ ಸೆಟ್‌ಗಳನ್ನು ಬಿಟ್ಟು ಹೊಸ ಸ್ಮಾರ್ಟ್ ಫೋನ್ ಖರೀದಿ ಮಾಡಿದ್ದಾರೆ. ಎಲ್ಲ ಟವರ್‌ಗಳಿಗೆ ಸೋಲಾರ್ ಮೂಲಕ ವಿದ್ಯುತ್ ಸಂಪರ್ಕ ನೀಡಲಾಗಿದೆ. ಆದರೆ, ಮಳೆಗಾಲ ಬರುತ್ತಿದ್ದಂತೆ ಜಿಲ್ಲೆಯಲ್ಲಿ ಎರಡು ಮೂರು ದಿನ ಬಿಸಿಲು ಕಾಣಿಸುವುದಿಲ್ಲ. ಇದರಿಂದ ಸೋಲಾರ್ ವಿದ್ಯುತ್ ಟವರ್‌ಗೆ ಸಾಲದೇ ಟವರ್‌ಗಳು ಬಂದಾಗುತ್ತಿವೆ. ಹತ್ತಾರು ಸಾವಿರ ಕೊಟ್ಟು ಸ್ಮಾರ್ಟ್ ಫೋನ್ ಖರೀದಿಸಿದವರಿಗೆ ರಾತ್ರಿ ಮೊಬೈಲ್ ಸಂಪರ್ಕ ಇಲ್ಲದೇ ಬೇಸ್ತು ಬಿದ್ದಿದ್ದಾರೆ.

ಸಾಕಷ್ಟು ಬಿಳಂಬ:

ಜಿಲ್ಲೆಗೆ 243 ರಷ್ಟು ಹೊಸ ಬಿಎಸ್‌ಎನ್‌ಎಲ್ ಟವರ್‌ಗಳು ಮಂಜೂರಾಗಿದ್ದವು. ಆದರೆ, ಅರಣ್ಯ ಇಲಾಖೆಯ ಜಾಗದಲ್ಲಿ ಟವರ್‌ಗಳನ್ನು ನಿರ್ಮಾಣ ಮಾಡಬೇಕಿರುವುದರಿಂದ, ಕೇಬಲ್‌ಗಳನ್ನು ಎಳೆಯಬೇಕಿರುವುದರಿಂದ ಅರಣ್ಯ ಅನುಮತಿ ಪಡೆಯಲು ವಿಳಂಬವಾಯಿತು. ಅಂತೂ 200 ಟವರ್‌ಗಳ ಕೆಲಸ ಮುಗಿಸಿದರೂ ಅದಕ್ಕೆ ಸಂಪರ್ಕ ನೀಡಲು ತಾಂತ್ರಿಕ ತೊಂದರೆಗಳು ಎದುರಾದವು. ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿ ಟವರ್‌ಗಳಿಗೆ ಸಿಗ್ನಲ್ ನೀಡಲಾಗಿದ್ದರೂ ಈಗ ಮಳೆಗಾಲದಲ್ಲಿ ಜನರ ಗೋಳು ತಪ್ಪಿಲ್ಲ. ಸದ್ಯ 100 ಟವರ್‌ಗಳಿಗೆ ನೇರ ವಿದ್ಯುತ್ ಸಂಪರ್ಕ ನೀಡಲಾಗಿದೆ. ಅಲ್ಲಿ ಸಮಸ್ಯೆ ಇಲ್ಲ. ಉಳಿದೆಡೆ ಮೊಬೈಲ್ ಸಂಪರ್ಕ ಸಿಗುತ್ತಿಲ್ಲ.

ಇನ್ನೂ 43 ಟರ್‌ರ್‌ಗಳ ಬಾಕಿ

ಒಟ್ಟು 243 ಟವರ್‌ಗಳು ಜಿಲ್ಲೆಗೆ ಮಂಜೂರಾಗಿದ್ದವು. ಈಗ 200 ಅವರ್‌ಗಳ ಕಾರ್ಯ ಮುಗಿದಿದೆ. ಇನ್ನೂ 43 ಮೊಬೈಲ್ ಟವರ್‌ಗಳಿಗೆ ಇದುವರೆಗೂ ಅರಣ್ಯ ಅನುಮತಿ ಸಿಕ್ಕಿಲ್ಲ ಎನ್ನುತ್ತಾರೆ ಬಿಎಸ್‌ಎನ್‌ಎಲ್ ಅಽಕಾರಿಗಳು.

ಸರ್ಕಾರಿ ಕೆಲಸಗಳಿಗೂ ತೊಂದರೆ

ಜಿಲ್ಲೆಯ ಮಲೆನಾಡು ಹಾಗೂ ಕರಾವಳಿಯ ಹಲವು ಗ್ರಾಮೀಣ ಭಾಗಗಳಲ್ಲಿ ಬಿಎಸ್‌ಎನ್‌ಎಲ್ ನೆಟ್ವರ್ಕ್ ಮಾತ್ರವಿದೆ. ಬೇರೆ ಖಾಸಗಿ ನೆಟ್ವರ್ಕ್ಗಳಿಲ್ಲ. ಆದರೆ, ಬಿಎಸ್‌ಎನ್‌ಎಲ್ ನೆಟ್ವರ್ಕ್ ಸಮಸ್ಯೆಯಿಂದ ಸಾಮಾನ್ಯ ಗ್ರಾಹಕರಿಗೆ ಮಾತ್ರವಲ್ಲ ಸರ್ಕಾರಿ ಕಾರ್ಯಗಳಿಗೂ ಸಮಸ್ಯೆ ಉಂಟಾಗುತ್ತಿದೆ. ಎಸ್‌ಐಆರ್ ಪ್ರಕ್ರಿಯೆ, ಪಡಿತರ ವಿತರಣೆ, ಅಂಗನವಾಡಿಗಳ ಮೊಬೈಲ್ ಆಧಾರಿತ ಸೇವೆಗಳಿಗೂ ತೊಂದರೆ ಉಂಟಾಗುತ್ತಿದೆ. ನೆಟ್ವರ್ಕ್ ಸಮಸ್ಯೆಯ ಕಾರಣಕ್ಕೆ ಮೊಬೈಲ್‌ನಲ್ಲೇ ಸಲ್ಲಿಸಬಹುದಾದ ಅರ್ಜಿಗಳನ್ನು ಭರ್ತಿ ಮಾಡಲು ಗ್ರಾಮೀಣ ಭಾಗದ ಜನ ಶಹರಕ್ಕೆ ಬರಬೇಕಾಗಿದೆ.

ವಾರಗಳಿಂದ ವಿದ್ಯುತ್ ಸಂಪರ್ಕವಿಲ್ಲ

ಕಳೆದ ವಾರ ಜಿಲ್ಲೆಯಲ್ಲಿ ಭಾರಿ ಗಾಳಿ ಮಳೆಯಾಯಿತು. ಇದರಿಂದ ವಿವಿಧೆಡೆ ವಿದ್ಯುತ್ ತಂತಿಗಳ ಮೇಲೆ ಮರ ಬಿದ್ದು ವಿದ್ಯುತ್ ಸಂಪರ್ಕ ಎರಡು, ಮೂರು ದಿನ ಕಡಿತ ಉಂಟಾಗಿತ್ತು. ಇದರಿಂದ ವಿದ್ಯುತ್ ಸಂಪರ್ಕ ಹೊಂದಿದ ಮೊಬೈಲ್ ಟವರ್‌ಗಳೂ ಬಂದ್ ಆಗಿದ್ದವು. ಶಿರಸಿ ತಾಲೂಕಿನ ಸೋಂದಾ ಮೊಬೈಲ್ ಟವರ್ ಹಾಳಾಗಿ ಇಡೀ ಉರಿನ ಸಂಪರ್ಕ ಇಲ್ಲದೇ ಎರಡು ವಾರವಾಗುತ್ತ ಬಂದಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net