ಕುಮಟಾ (ಗ್ರಾ): ತಾಲೂಕಿನಲ್ಲಿ ಈಗ ಬತ್ತದ ಕೊಯ್ಲು ಶುರುವಾಗಿದೆ. ಆದರೆ, ಗದ್ದೆಯಲ್ಲಿ ನೀರಿನ ಪ್ರಮಾಣ ಹೆಚ್ಚಿರುವುದರಿಂದ ರೈತರು (Crop Loss) ಸಂಕಷ್ಟ ಎದುರಿಸುವಂತಾಗಿದೆ.
ಈ ಬಾರಿ ಮಳೆ ಪ್ರಮಾಣ ಅಧಿಕವಾಗಿರುವುದರಿಂದ ಭತ್ತದ ಗದ್ದೆಗಳಲ್ಲಿ ನೀರಿನ ಸಂಗ್ರಹ ಹೆಚ್ಚಿದೆ. ನವೆಂಬರ್ ಮೊದಲ ವಾರದವರೆಗೂ ಮಳೆ ಭಾರಿ ಪ್ರಮಾಣದಲ್ಲಿ ಸುರಿದಿರುವುದು ಸಮಸ್ಯೆ ಸೃಷ್ಟಿಸಿದೆ.
ಕೆಲ ರೈತರ ಗದ್ದೆಗಳಲ್ಲಿ ಒಂದು ಅಡಿವರೆಗೂ ನೀರು ನಿಂತುಕೊಂಡಿದೆ. ಹೀಗಾಗಿ ಭತ್ತ ಕೊಯ್ಲಿಗೆ ಬಂದರೂ ಕಟಾವು ಮಾಡಲು ಸಾಧ್ಯವಾಗುತ್ತಿಲ್ಲ.
ರೈತರಿಗೆ ಈಗ ಭತ್ತದ ಪೈರು ಹಾಗೂ ಹುಲ್ಲನ್ನು ನೀರಿನಿಂದ ರಕ್ಷಿಸುವುದೇ ದೊಡ್ಡ ಸವಾಲಾಗಿದೆ. ಗದ್ದೆಗಳಲ್ಲಿ ನೀರಿರುವುದರಿಂದ ರೈತರು ಪೈರನ್ನು ಕೊಯ್ದು ಎತ್ತರದ ಜಾಗಗಳಲ್ಲಿ ಒಣಗಿಸುತ್ತಿದ್ದಾರೆ.
ಭತ್ತದ ತಳಿಗಳಾದ ಸಾವಿರದ ಒಂದು, ಜಯಾ ಇತರ ಬೆಳೆಗಳು ನಿಂತುಕೊಂಡಿದ್ದರೂ ಎತ್ತರವಾಗಿ ಬೆಳೆಯುವ ಇತರ ತಳಿಗಳಾದ ಆರ್ಯ ಮತ್ತಿತರ ಬೆಳೆಗಳು ಗದ್ದೆಗಳಲ್ಲಿ ಹಾಸು ಬಿದ್ದಿವೆ.
ಅವುಗಳನ್ನು ನೀರಿನಿಂದ ಹೆಕ್ಕಿ ಕಟಾವು ಮಾಡುವುದೇ ರೈತರಿಗೆ ಹರಸಾಹಸವಾಗಿದೆ.
ಇನ್ನೊಂದೆಡೆ ಬತ್ತದ ಗದ್ದೆಗಳಿಗೆ ಈಗ ದನಗಳ ಕಾಟವೂ ಶುರುವಾಗಿದ್ದು, ಭತ್ತ ಹಾಗೂ ಹುಲ್ಲನ್ನು ತಿಂದು ಹಾಕುತ್ತಿವೆ. ಒಂದೆಡೆ ಗದ್ದೆಗಳಲ್ಲಿ ನೀರಿನ ಪ್ರಮಾಣದಿಂದ ರೈತರು ಚಿಂತೆಯಲ್ಲಿದ್ದರೆ, ಇತ್ತ ಇದ್ದ ಬೆಳೆಯನ್ನು ದನಕರುಗಳು ತಿಂದು ಹಾಕುತ್ತಿರುವುದು ಮತ್ತಷ್ಟು ಸಮಸ್ಯೆ ಉಂಟು ಮಾಡಿದೆ.
ಇದೀಗ ಎರಡು ದಿನದಿಂದ ಬಿಸಿಲಿನ ಪ್ರಮಾಣ ಅಧಿಕವಾಗಿದ್ದರೂ ಆಗಾಗ ಮೋಡ ಕವಿದ ವಾತಾವರಣ ದಿಂದಾಗಿ ಭತ್ತದ ಪೈರು ಸರಿಯಾಗಿ ಒಣಗುತ್ತಿಲ್ಲ.
ಪರಿಸ್ಥಿತಿ ಹೀಗೆ ಮುಂದುವರಿದರೆ ಅತ್ತ ಭತ್ತವು ಕೈಗೆಟುಕುವುದಿಲ್ಲ ಇತ್ತ ಹುಲ್ಲು ಮುಗ್ಗುವುದರಿಂದ ಜಾನುವಾರುಗಳು ತಿನ್ನುವುದಿಲ್ಲ. ಹೀಗಾಗಿ ಈ ಬಾರಿ ಹುಲ್ಲಿನ ದರವು ಗಗನಕ್ಕೆ ಏರುವ ಸಾಧ್ಯತೆ ಇದೆ.
ರಾಜ್ಯ ಸರ್ಕಾರ ಹಾನಿಗೊಳಗಾದವರಿಗೆ ಸಮರ್ಪಕ ಪರಿಹಾರ ವಿತರಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಭತ್ತದ ಗದ್ದೆಗಳಲ್ಲಿ ನೀರಿನ ಪ್ರಮಾಣ ಹೆಚ್ಚಿರುವುದರಿಂದ ಪೈರನ್ನು ಕಟಾವು ಮಾಡಲು ಸಾಧ್ಯವಾಗುತ್ತಿಲ್ಲ. ರಾಜ್ಯ ಸರ್ಕಾರ ಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸಬೇಕು ಹಾಗೂ ಸೂಕ್ತ ಪರಿಹಾರ ನೀಡಬೇಕು.