ಹೆದ್ದಾರಿ ಪ್ರಾಧಿಕಾರಕ್ಕೆ ಶ್ರದ್ಧಾಂಜಲಿ! Highway

ಶಿರಸಿ-ಹುಬ್ಬಳ್ಳಿ ರಸ್ತೆ (Highway) ಕಾಮಗಾರಿ ತ್ವರಿತ ಪೂರ್ಣಗೊಳಿಸುವಂತೆ ಆಗ್ರಹಿಸಿ ಸಾರ್ವಜನಿಕರು ಬಿಸಲಕೊಪ್ಪದಲ್ಲಿ ಪ್ರತಿಭಟನೆ ನಡೆಸಿದರು. ಸುನೀಲ ನಾಯ್ಕ, ಪ್ರಶಾಂತ ಗೌಡ, ರಾಘವೇಂದ್ರ ನಾಯ್ಕ ಇತರರಿದ್ದರು.
ಶಿರಸಿ-ಹುಬ್ಬಳ್ಳಿ ರಸ್ತೆ (Highway) ಕಾಮಗಾರಿ ತ್ವರಿತ ಪೂರ್ಣಗೊಳಿಸುವಂತೆ ಆಗ್ರಹಿಸಿ ಸಾರ್ವಜನಿಕರು ಬಿಸಲಕೊಪ್ಪದಲ್ಲಿ ಪ್ರತಿಭಟನೆ ನಡೆಸಿದರು. ಸುನೀಲ ನಾಯ್ಕ, ಪ್ರಶಾಂತ ಗೌಡ, ರಾಘವೇಂದ್ರ ನಾಯ್ಕ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜನರ ಮನಸ್ಥಿತಿ ಕದಡಿದ ರಸ್ತೆ ದುಸ್ಥಿತಿ
  • ಬಿಸಲಕೊಪ್ಪದಲ್ಲಿ ಟ್ರಾೃಕ್ಟರ್ ಅಡ್ಡ ಇಟ್ಟು ರಸ್ತೆ ಸಂಚಾರ ತಡೆ
  • ಆಕ್ರೋಶ ಹೊರಹಾಕಿದ ಸಾವಿರಾರು ಸಾರ್ವಜನಿಕರು
ಶಿರಸಿ: ಶಿರಸಿಯಿಂದ ಬಿಸಲಕೊಪ್ಪದವರೆಗೆ ರಸ್ತೆ (Highway) ದುಸ್ಥಿತಿ, ನಿತ್ಯ ಸಂಚರಿಸುವವರು ಅನುಭವಿಸಿದ ಯಾತನೆ ಮಂಗಳವಾರ ಪ್ರತಿಭಟನೆಯ ಮೂಲಕ ಹೊರ ಹೊಮ್ಮಿದೆ.
ಬಿಸಲಕೊಪ್ಪದಲ್ಲಿ ಸಾವಿರಾರು ಜನ ರಸ್ತೆಗೆ ಟ್ರಾೃಕ್ಟರ್ ಅಡ್ಡ ಇಟ್ಟು ರಸ್ತೆ ಸಂಚಾರ ತಡೆದಿದ್ದಲ್ಲದೆ ಹೆದ್ದಾರಿ ಪ್ರಾಧಿಕಾರಕ್ಕೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಆಕ್ರೋಶ ಹೊರಹಾಕಿದರು.
ಶಿರಸಿ-ಹಾವೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಸ ಆರಂಭಗೊಂಡು ಎರಡು ವರ್ಷ ಕಳೆದಿವೆ.
ಆದರೆ, ಇನ್ನೂ ಆರಂಭಿಕ ಹಂತದಲ್ಲಿಯೇ ಇದೆ. ಶಿರಸಿಯಿಂದ ಬಿಸಲಕೊಪ್ಪದವರೆಗೆ ಸಂಪೂರ್ಣವಾಗಿ ರಸ್ತೆ ಅಗೆದು ಹಾಕಿರುವ ಗುತ್ತಿಗೆದಾರರು ರಸ್ತೆ ನಿರ್ಮಾಣ ಕಾರ್ಯ ಮಾತ್ರ ಆರಂಭಿಸಿರಲಿಲ್ಲ.
ಸಾರ್ವಜನಿಕರ ಅಸಮಾಧಾನದ ಹಿನ್ನೆಲೆಯಲ್ಲಿ ಕಳೆದ ಕೆಲ ದಿನಗಳ ಹಿಂದೆ ಗೌಡಳ್ಳಿ ಭಾಗದಲ್ಲಿ ಒಂದು ಕಡೆ ಮಾತ್ರ ಅರ್ಧ ಕಿಮೀಯಷ್ಟು ರಸ್ತೆ ನಿರ್ಮಿಸಿ ಮತ್ತೆ ಕೆಲಸ ಸ್ಥಗಿತಗೊಳಿಸಿದೆ.
ಇದರಿಂದಾಗಿ ಒಂದು ವಾಹನ ಸಾಗಿತೆಂದರೆ ಬೃಹತ್ ಪ್ರಮಾಣದಲ್ಲಿ ಧೂಳು ಆವರಿಸಿಕೊಳ್ಳುವುದರೊಂದಿಗೆ ಹಿಂಬದಿ ವಾಹನದಾರರಿಗೆ ರಸ್ತೆಯೇ ಕಾಣದ ಸ್ಥಿತಿ ಉಂಟಾಗಿದೆ.
ಇನ್ನೂ ಕೆಲವೆಡೆ ಮಣ್ಣು ತೆಗೆದು ಜಾಗ ತಗ್ಗಿಸಿದ ಸ್ಥಳದಲ್ಲಿ ಮಳೆ ಬಂತೆಂದರೆ ಕೆಸರಾಗಿ ವಾಹನಗಳು ಸಿಲುಕಿಕೊಳ್ಳುತ್ತಿವೆ.
ಇಷ್ಟು ದಿನಗಳ ಕಾಲ ರಸ್ತೆ ಕಾಮಗಾರಿ ನಡೆಸಬಹುದು, ತ್ವರಿತವಾಗಿ ಮುಕ್ತಾಯಗೊಳಿಸಬಹುದು ಎಂಬ ನಿರೀಕ್ಷೆಯಲ್ಲಿ ಜನರಿದ್ದರು. ಆದರೆ, ಮಳೆಗಾಲಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು, ಕಾಮಗಾರಿ ಇನ್ನೂ ಆರಂಭಿಸದಿರುವ ಬಗ್ಗೆ ಸಾರ್ವಜನಿಕರ ಆಕ್ರೋಶ ಒಮ್ಮೆಲೇ ಹೆಚ್ಚಿದೆ.
ಈ ಹಿನ್ನೆಲೆಯಲ್ಲಿ ಬಿಸಲಕೊಪ್ಪದಲ್ಲಿ ಬೃಹತ್ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಜಮಾವಣೆಗೊಂಡು ಅಧಿಕಾರಿಗಳ ವಿರುದ್ಧ ಸಿಟ್ಟು ಹಾಕಿದರು.
ಪ್ರತಿಭಟನಾಕಾರರ ಪರವಾಗಿ ಮಾತನಾಡಿದ ಎಪಿಎಂಸಿ ಮಾಜಿ ಅಧ್ಯಕ್ಷ ಸುನೀಲ ನಾಯ್ಕ, ರಸ್ತೆ ಅವೈಜ್ಞಾನಿಕವಾಗಿ ಅಗೆದು ಇಷ್ಟು ದಿನ ಕಳೆದರೂ ನಿರ್ಮಾಣ ಕಾರ್ಯ ಆರಂಭಗೊಂಡಿಲ್ಲ. ಈ ದಾರಿಯಲ್ಲಿ ನಿತ್ಯವೂ ಅಪಘಾತವಾಗುವಂತಾಗಿದೆ.
ಅಧಿಕಾರಿಗಳು, ಜನಪ್ರತಿನಿಧಿಗಳು ಹವಾ ನಿಯಂತ್ರಿತ ಕಾರಿನಲ್ಲಿ ಸಂಚರಿಸುವ ಕಾರಣ ಅವರಿಗೆ ಜನಸಾಮಾನ್ಯರು ಅನುಭವಿಸುತ್ತಿರುವ ಬವಣೆ ಅರ್ಥವಾಗುತ್ತಿಲ್ಲ.
ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಆಗಮಿಸಬೇಕು ಎಂದು ಪಟ್ಟು ಹಿಡಿದರು.
ರೈತ ಸೇನೆ ಪ್ರಮುಖ ರಾಘವೇಂದ್ರ ನಾಯ್ಕ ಕಿರವತ್ತಿ ಮಾತನಾಡಿ, ಈ ಮಾರ್ಗದಲ್ಲಿ ತೆರಳುವ ವೇಗದೂತ ಬಸ್‌ಗಳನ್ನು ಬೇರೆ ಮಾರ್ಗದಲ್ಲಿ ಬಿಟ್ಟು, ಸ್ಥಳೀಯರಿಗೆ ವಾಹನದ ವ್ಯವಸ್ಥೆ ಮಾಡಬೇಕು.
ರಸ್ತೆ ಕಾಮಗಾರಿ ತ್ವರಿತಗೊಳಿಸದಿದ್ದರೆ ಪ್ರತಿಭಟನೆಯನ್ನು ಇನ್ನೂ ಅಧಿಕಗೊಳಿಸುವುದಾಗಿ ಎಚ್ಚರಿಸಿದರು.
ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ಉಪವಿಭಾಗಾಧಿಕಾರಿ ಚಂದ್ರಶೇಖರ, ಕಾಮಗಾರಿ ವ್ಯತ್ಯಾಸ ಆಗಿದೆ.
ಇದರಿಂದಾಗಿ ಇಲ್ಲಿಯ ಜನ ಜೀವನಕ್ಕೂ ಸಮಸ್ಯೆ ಆಗಿದೆ. ಈ ಕುರಿತಂತೆ ಹೆದ್ದಾರಿ ಪ್ರಾಧಿಕಾರ, ಗುತ್ತಿಗೆದಾರರೊಂದಿಗೆ ಮಾತನಾಡಿ, ರಸ್ತೆ ಕಾಮಗಾರಿ ತ್ವರಿತಗೊಳಿಸಲು ಕ್ರಮ ಕೈಗೊಳ್ಳಲಾಗುವುದು.
ಈ ಹಿಂದೆ ಸಭೆ ನಡೆಸಿದ್ದಾಗ ಗುತ್ತಿಗೆದಾರರು 15 ದಿನ ಸಮಯಾವಕಾಶ ಕೇಳಿ, 8 ಕಿಮೀ ಡಾಂಬರೀಕರಣ ಮಾಡಿಕೊಡುವುದಾಗಿ ಹೇಳಿದ್ದರು. ಆದರೆ, ಆ ಬಳಿಕವೂ ಕಾಮಗಾರಿ ವಿಳಂಬವಾಗಿದ್ದು, ಮುಖ್ಯ ಗುತ್ತಿಗೆದಾರರಿಗೆ ಸೂಚನಾಪತ್ರ ಕಳಿಸಿದ್ದೇವೆ ಎಂದರು.
ಬಳಿಕ ಉಪವಿಭಾಗಾಧಿಕಾರಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜೊತೆ ದೂರವಾಣಿ ಸಂಭಾಷಣೆ ನಡೆಸಿ, ಮುಂದಿನ ಮೂರು ದಿನಗಳ ಒಳಗಾಗಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಬಿಸಲಕೊಪ್ಪದಲ್ಲಿ ಸಭೆ ನಡೆಸಲಿದ್ದಾರೆ. ಸಾರ್ವಜನಿಕರೊಂದಿಗೆ ಚರ್ಚೆ ನಡೆಸಲಿದ್ದಾರೆ ಎಂದರು.
ಪ್ರಶಾಂತ ಗೌಡ, ಗಂಗಾಧರ ಸೇರಿದಂತೆ ಸಾವಿರಕ್ಕೂ ಅಧಿಕ ಜನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಜಿಲ್ಲಾಧಿಕಾರಿಯೇ ಸ್ಥಳಕ್ಕೆ ಬಂದು ಸ್ಪಷ್ಟ ಉತ್ತರ ನೀಡಲಿ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕೆಳ ಹಂತದ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಬಂದಿರುವುದು ಪ್ರತಿಭಟನಾಕಾರರ ಆಕ್ರೋಶ ಇನ್ನಷ್ಟು ಹೆಚ್ಚಲು ಕಾರಣವಾಯಿತು.

ಈ ಮಾರ್ಗದಲ್ಲಿ ಎಷ್ಟು ಸಿ.ಡಿ. ನಿರ್ಮಾಣ ಮಾಡಲಾಗುತ್ತಿದೆ, ಎಷ್ಟು ಈಗಾಗಲೇ ಪೂರ್ಣಗೊಂಡಿದೆ ಎಂಬ ಪ್ರತಿಭಟನಾಕಾರರ ಪ್ರಶ್ನೆಗೆ ಅಧಿಕಾರಿಗಳು ಉತ್ತರಿಸಲು ತಡವರಿಸಿದರು.

ಇದರಿಂದ ಆಕ್ರೋಶಗೊಂಡ ಸುನೀಲ ನಾಯ್ಕ ಏನೂ ಗೊತ್ತಿಲ್ಲದ ಅಧಿಕಾರಿಗಳಿಂದ ನಾವು ಉತ್ತರ ನಿರೀಕ್ಷಿಸುವುದಿಲ್ಲ. ನಮಗೆ ಜಿಲ್ಲಾಧಿಕಾರಿಯೇ ಸ್ಥಳಕ್ಕೆ ಬರಬೇಕು, ಸ್ಪಷ್ಟ ಉತ್ತರ ಬೇಕು ಎಂದು ಪಟ್ಟುಹಿಡಿದರು.

ಮಾರ್ಗ ಬದಲಿಸಿದ ಬಸ್‌ಗಳು

ಶಿಥಿಲ ಅವಸ್ಥೆಯಲ್ಲಿರುವ ಈ ಮಾರ್ಗದಲ್ಲಿಯೇ ಪ್ರತಿ ದಿನ ಹುಬ್ಬಳ್ಳಿಗೆ ಸಂಚರಿಸುತ್ತಿದ್ದ ಬಸ್‌ಗಳು ಪ್ರತಿಭಟನೆಯ ಹಿನ್ನೆಲೆಯಲ್ಲಿ ತಮ್ಮ ಮಾರ್ಗ ಬದಲಿಸಿದ್ದವು.

ಕೆಲ ಬಸ್‌ಗಳು ಯಲ್ಲಾಪುರ ಮೂಲಕ ಹುಬ್ಬಳ್ಳಿಗೆ ಪ್ರಯಾಣ ಬೆಳೆಸಿದರೆ ಇನ್ನು ಕೆಲ ಬಸ್‌ಗಳು ದೊಡ್ನಳ್ಳಿ ಮಾರ್ಗದಲ್ಲಿ ಸಂಚರಿಸಿದವು.

ಶ್ರದ್ಧಾಂಜಲಿ ಅರ್ಪಣೆ

ಹೆದ್ದಾರಿ ಮಧ್ಯದಲ್ಲೇ ರಸ್ತೆಯ ಭಾವಚಿತ್ರಕ್ಕೆ ಹೂಹಾರ ಹಾಕಿ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಪ್ರತಿಭಟನಾಕಾರರು ವಿನೂತನವಾಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದು ಗಮನಸೆಳೆಯಿತು.
ಇನ್ನು ಕೆಲ ಪ್ರತಿಭಟನಾಕಾರರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಶ್ರದ್ಧಾಂಜಲಿ ಎಂಬ ಫಲಕಹಿಡಿದು ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ಪ್ರತಿಭಟನಾಕಾರರಿಂದ ಕೇಳಿಬಂದ ಕೂಗು

  • ಹೊರ ಜಿಲ್ಲೆಗೆ ಸಂಚರಿಸುವ ಬಸ್‌ಗಳನ್ನು ಬದಲಿ ಮಾರ್ಗದಲ್ಲಿ ಬಿಡಿ,
  • ಸ್ಥಳೀಯರಿಗೆ ಅನುಕೂಲವಾಗುವ ಮಾದರಿಯಲ್ಲಿ ಗ್ರಾಮೀಣ ಸಾರಿಗೆ ಬಸ್‌ಗಳ ಸೌಲಭ್ಯವನ್ನು ಈ ಮಾರ್ಗದಲ್ಲಿ ಸಂಚರಿಸುವಂತೆ ಮಾಡಿ.
  • ಧೂಳು ನಿಯಂತ್ರಣಕ್ಕಾಗಿ ದಿನಕ್ಕೆ ಮೂರು ಅಥವಾ ನಾಲ್ಕು ಬಾರಿ ರಸ್ತೆಗೆ ನೀರು ಸಿಂಪಡಿಸಿ.
  • ರಾತ್ರಿ ವೇಳೆಯೂ ಈ ಮಾರ್ಗದಲ್ಲಿ ಸಂಚರಿಸುವ ಬೃಹತ್ ಲಾರಿಗಳಿಗೆ ಕಡಿವಾಣ ಹಾಕಿ.
  • ನಾವು ವಾಹನ ತೆರಿಗೆ ಕಟ್ಟಲು ಒಂದು ದಿನ ತಡವಾದರೂ ತಡೆದು ದಂಡ ಹಾಕುತ್ತೀರಿ. ರಸ್ತೆ ತೆರಿಗೆ ಕಟ್ಟಿಯೂ ಈ ರೀತಿ ರಸ್ತೆಯಿದ್ದರೆ ಹೇಗೆ?
  • ಧೂಳಿನಿಂದ ನಮ್ಮ ಆರೋಗ್ಯ ಹಾಳಾದರೆ ನಮ್ಮ ನೆರವಿಗೆ ಯಾರು ಬರುತ್ತಾರೆ?
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net