ಮಂಗಳೂರಲ್ಲಿ ಹೈಕೋರ್ಟ್‌ ಸಂಚಾರಿ ಪೀಠಕ್ಕೆ ಕಾರವಾರ ವಕೀಲರ ಸಂಘ ವಿರೋಧ

ಕಾರವಾರ ವಕೀಲರ ಸಂಘದ ಪದಾಧಿಕಾರಿಗಳು ಸುದ್ದಿಗೋಷ್ಠಿ ನಡೆಸಿದರು.
ಕಾರವಾರ ವಕೀಲರ ಸಂಘದ ಪದಾಧಿಕಾರಿಗಳು ಸುದ್ದಿಗೋಷ್ಠಿ ನಡೆಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಮಂಗಳೂರಲ್ಲಿ ಹೈಕೋರ್ಟ್‌ ಸಂಚಾರಿ ಪೀಠಕ್ಕೆ ಕಾರವಾರದ ವಕೀಲರ ವಿರೋಧ
  • ಉತ್ತರ ಕನ್ನಡ ಜಿಲ್ಲೆಯಲ್ಲೇ ಸಂಚಾರಿ ಪೀಠವಾಗಲಿ ಎಂದ ನಾಗರಾಜ ನಾಯಕ
  • ಶೀಘ್ರ ಜಿಲ್ಲೆ ಎಲ್ಲ ವಕೀಲರ ಸಂಘ, ಹಾಗೂ ಜನಪ್ರತಿನಿಧಿಗಳನ್ನು ಸೇರಿಸಿ ಸಭೆ

ಕಾರವಾರ: ಹೈಕೋರ್ಟ್ ಸಂಚಾರಿ ಪೀಠವನ್ನು ಮಂಗಳೂರಿನಲ್ಲಿ ಸ್ಥಾಪಿಸಿ, ಅದಕ್ಕೆ ಉತ್ತರ ಕನ್ನಡ ಜಿಲ್ಲೆಯ ವ್ಯಾಜ್ಯಗಳನ್ನು ಸೇರಿಸುವ ಪ್ರಸ್ತಾವಕ್ಕೆ ಕಾರವಾರದ ಜಿಲ್ಲಾ ವಕೀಲರ ಸಂಘ ವಿರೋಧ ವ್ಯಕ್ತಪಡಿಸಿದೆ.

ಬುಧವಾರ ಜಿಲ್ಲಾ ವಕೀಲರ ಸಂಘದ ಸರ್ವ ಸಾಧಾರಣ ಸಭೆಯಲ್ಲಿ ಚರ್ಚಿಸಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಹೋರಾಟದ ರೂಪುರೇಷೆ ರಚಿಸಲಾಗಿದೆ ಎಂದು ಹಿರಿಯ ವಕೀಲ ನಾಗರಾಜ ನಾಯಕ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಇತಿಹಾಸದಲ್ಲಿ ಅವಿಭಜಿತ ಕಾನಡಾ ಜಿಲ್ಲೆಗೆ ಈಗಿನ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಕೇಂದ್ರವಾಗಿತ್ತು. ಹಾಗಾಗಿ ಕೇರಳದ ಗಡಿ ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರಿ ಪೀಠ ಮಾಡುವ ಬದಲು ಉತ್ತರ ಕನ್ನಡ ಜಿಲ್ಲೆಯ ಮಧ್ಯವರ್ತಿ ಸ್ಥಳದಲ್ಲಿ ಸಂಚಾರಿ ಪೀಠ ಸ್ಥಾಪನೆ ಮಾಡಲಿ, ಶಿವಮೊಗ್ಗ ಮಂಗಳೂರು, ಉಡುಪಿ ಜಿಲ್ಲೆಗಳನ್ನು ಅದಕ್ಕೆ ಜೋಡಿಸಲಿ ಎಂಬುದು ಕಾರವಾರ ವಕೀಲರ ಸಂಘದ ಬೇಡಿಕೆಯಾಗಿದೆ.

ಅದಕ್ಕೆ ದೂರದ ಪ್ರಶ್ನೆಯೊಂದೇ ಅಲ್ಲ, ತಾತ್ವಿಕ ಸಮರ್ಥನೆಯೂ ಇದೆ. ಮಂಗಳೂರಿನಲ್ಲಿ 6 ಉಡುಪಿಯಲ್ಲಿ 4 ವಕೀಲರ ಸಂಘಗಳು ಮಾತ್ರ ಇವೆ. ಆದರೆ, ಉತ್ತರ ಕನ್ನಡದಲ್ಲಿ 11 ವಕೀಲರ ಸಂಘಗಳಿವೆ. ಅಲ್ಲದೇ ವ್ಯಾಜ್ಯಗಳೂ ಉತ್ತರ ಕನ್ನಡದಲ್ಲೇ ಜಾಸ್ತಿ ಇವೆ. ಅಲ್ಲದೇ, ದೂರದ ದೃಷ್ಟಿಯಿಂದಲೂ ಪಕ್ಕದ ಶಿವಮೊಗ್ಗ, ಉಡುಪಿ, ಮಂಗಳೂರಿಗೆ ಉತ್ತರ ಕನ್ನಡ ಮಧ್ಯವರ್ತಿ ಸ್ಥಳವಾಗಿದೆ ಎಂದರು ಈ ಎಲ್ಲ ವಿವರಗಳನ್ನು ಶೀಘ್ರ ಹೈಕೋರ್ಟ್ ಹಾಗೂ ಸರ್ಕಾರಕ್ಕೆ ರವಾನಿಸಲಾಗುವುದು.

ಹಾಗೊಮ್ಮೆ ಸಂಚಾರಿ ಪೀಠವನ್ನು ಹೊನ್ನಾವರದಲ್ಲಿ ಮಾಡಲು ಸಾಧ್ಯವಾಗದೇ ಇದ್ದರೆ, ಉತ್ತರ ಕನ್ನಡವನ್ನು ಧಾರವಾಡ ಪೀಠದಿಂದ ಬೇರ್ಪಡಿಸಬಾರದು. ಉತ್ತರ ಕನ್ನಡ ಧಾರವಾಡದಲ್ಲೇ ಮುಂದುವರಿಯಲಿ ಎಂಬುದು ವಕೀಲರ ಸಂಘದ ನಿರ್ಣಯವಾಗಿದೆ. ಶೀಘ್ರದಲ್ಲಿ ಜಿಲ್ಲೆಯ ಎಲ್ಲ ವಕೀಲರ ಸಂಘಗಳ ಪ್ರಮುಖರ ಹಾಗೂ ಜನಪ್ರತಿನಿಽಗಳ ಸಭೆ ಕರೆದು ಸಮಾಲೋಚನೆ ನಡೆಸಿ, ಮುಂದಿನ ಹೋರಾಟದ ಕೈಗೊಳ್ಳಲು ಬುಧವಾರದ ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದರು.

ಹಳಿಯಾಳದ ಜನರು ಧಾರವಾಡ ಹೈಕೋರ್ಟ್ಗೆ ಕೇವಲ 8 ನಿಮಿಷದಲ್ಲಿ ತಲುಪಬಹುದು. ಆದರೆ, ಮಂಗಳೂರಿಗೆ ತೆರಳಲು ಏಳು ತಾಸು ಬೇಕು. ಕಾರವಾರದಿಂದ ಮಂಗಳೂರಿಗೆ 5 ತಾಸು ಬೇಕು. ಅಲ್ಲದೇ, ಕಂದಾಯ ವಿಭಾಗವು ಬೆಳಗಾವಿಯಲ್ಲಿದೆ. ಕೆಎಟಿ ಪೀಠ ಬೆಳಗಾವಿಯಲ್ಲಿದೆ. ಇದರಿಂದ ಉತ್ತರ ಕನ್ನಡ ಧಾರವಾಡ ಹೈಕೋರ್ಟ್ ವ್ಯಾಪ್ತಿಯಲ್ಲಿರುವುದೇ ಸೂಕ್ತ ಎಂದರು.

ಕರಾವಳಿ ಎಂದರೆ ಕೇವಲ ಮಂಗಳೂರು ಮಾತ್ರವಲ್ಲ ಎಲ್ಲವನ್ನೂ ಮಂಗಳೂರಿಗೇ ಕೊಡಬೇಕು ಎಂಬ ಸರ್ಕಾರದ ನಿರ್ಧಾರವೂ ಸರಿಯಲ್ಲ. ಜನರಿಗೆ ಸುಲಭದಲ್ಲಿ ನ್ಯಾಯ ಸಿಗಲಿ ಎಂಬುದು ಸಂಚಾರಿ ಪೀಠದ ಉದ್ದೇಶ. ಆದರೆ, ಉತ್ತರ ಕನ್ನಡವನ್ನು ಮಂಗಳೂರಿಗೆ ಸೇರಿಸಿದರೆ ಜನರಿಗೆ ಇನ್ನಷ್ಟು ಅನನುಕೂಲವೇ ಆಗಲಿದೆ ಎಂದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಸಂತೋಷ ಭಾಗ್ವತ್, ಕಾರ್ಯದರ್ಶಿ ಚರಣೆ ನಾಯ್ಕ, ಹಿರಿಯ ವಕೀಲರಾದ ಡಿ.ಆರ್.ಭಟ್, ಶುಭಾ ಗಾಂವಕರ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net