gods-darshan ದೇವರ ದರ್ಶನಕ್ಕೆ ಹೊರಟವರು ಮಸಣಕ್ಕೆ

ಧಾರವಾಡದಿಂದ ಹೊರಡುವಾಗ ಗೆಳೆಯರೆಲ್ಲ ಸೇರಿ ಕ್ಲಿಕ್ಕಿಸಿಕೊಂಡ ಕೊನೆಯ ಸೆಲ್ಫಿ.
ಧಾರವಾಡದಿಂದ ಹೊರಡುವಾಗ ಗೆಳೆಯರೆಲ್ಲ ಸೇರಿ ಕ್ಲಿಕ್ಕಿಸಿಕೊಂಡ ಕೊನೆಯ ಸೆಲ್ಫಿ.
Published on

ಪ್ರಮುಖ ಮುಖ್ಯಾಂಶಗಳು

  • ಯಲ್ಲಾಪುರ ಬಳಿ ಭೀಕರ ಅಪಘಾತ
  • ಏಳು ಮಂದಿ ದುರ್ಮರಣ
  • ಇಬ್ಬರಿಗೆ ಗಂಭೀರ ಗಾಯ
ಯಲ್ಲಾಪುರ: ಧರ್ಮಸ್ಥಳ, ಕೊಲ್ಲೂರು ದೇವಸ್ಥಾನಗಳಿಗೆ ದೇವರ ದರ್ಶನಕ್ಕೆಂದು ಹೊರಟ ಧಾರವಾಡದ ಏಳು ಜನ ಯುವಕರು ತಾಲೂಕಿನ ಆರತಿಬೈಲ್ ಘಟ್ಟದಲ್ಲಿ ನಡೆದ ಭೀಕರ ಅಪಘಾತದಲ್ಲಿ ಸಾವಿನ ಮನೆ ಸೇರಿದ್ದಾರೆ.
ದೇಗುಲಗಳಲ್ಲಿ ಮಳೆಗಾಲದ ವೇಳೆ ಭಕ್ತರ ಸಂಖ್ಯೆ ಕಡಿಮೆ ಇರುತ್ತದೆ. ಈ ಸಂದರ್ಭದಲ್ಲಿ ಹೋದರೆ ನೂಕುನುಗ್ಗಲು, ಒತ್ತಡ ಇಲ್ಲದೇ ನಿರಾಳವಾಗಿ ದರ್ಶನ ಪಡೆಯಬಹುದೆಂಬ ಉದ್ದೇಶದಿಂದ ಹೊರಟಿದ್ದ ಗೆಳೆಯರ ತಂಡಕ್ಕೆ, ಕ್ರೂಸರ್ ಚಾಲಕನಿಗೆ ಆವರಿಸಿದ ಸಣ್ಣ ನಿದ್ದೆಯೇ ಸಾವನ್ನು ತಂದೊಡ್ಡಿದೆ. ಎದುರಿನಿಂದ ಬರುತ್ತಿದ್ದ ಲಾರಿಗೆ ಹೋಗಿ ಕ್ರೂಸರ್ ಡಿಕ್ಕಿ ಹೊಡೆದಿದೆ. ಲಾರಿ ಚಾಲಕ ಅಪಘಾತ ತಪ್ಪಿಸಲು ರಸ್ತೆಯ ಬದಿಗೆ ಲಾರಿಯನ್ನು ಚಲಾಯಿಸಲು ಯತ್ನಿಸಿದರೂ ಸಾಧ್ಯವಾಗಿಲ್ಲ.
ಮೃತಪಟ್ಟವರೆಲ್ಲರೂ ಯುವಕರಾಗಿದ್ದು, ಬೇರೆ ಬೇರೆ ಉದ್ಯೋಗ ನಡೆಸುತ್ತ ಜೀವನ ಕಟ್ಟಿಕೊಳ್ಳುತ್ತಿದ್ದರು. ಮೃತರಲ್ಲಿ ಅಕ್ಷಯ್‌ಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ದೊರಕಿದ್ದು, ಮುಂದಿನ ವಾರ ಕೆಲಸಕ್ಕೆ ಹಾಜರಾಗಲಿದ್ದರು. ಅಭಿಷೇಕ, ಈಶ್ವರ ಸ್ವಿಗ್ಗಿಯಲ್ಲಿ ಕೆಲಸ ನಿರ್ವಹಿಸುತ್ತ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿ ನಡೆಸಿದ್ದರು.
ಸಾವಿನ ವಿಷಯ ತಿಳಿಯುತ್ತಿದ್ದಂತೆ ಮೃತರ ಕುಟುಂಬದವರು, ಸಂಬಂಧಿಕರು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಧಾವಿಸಿ ಬಂದರು. ಮಡುಗಟ್ಟಿದ ದುಃಖದ ನಡುವೆ ಮೃತದೇಹಗಳನ್ನು ಊರಿಗೆ ಸಾಗಿಸಿದರು.
ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ, ಎಸ್ಪಿ ದೀಪನ್ ಎಂ.ಎನ್., ಡಿವೈಎಸ್ಪಿ ಗೀತಾ ಪಾಟೀಲ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಮತ್ತು ಮರಣೋತ್ತರ ಪರೀಕ್ಷೆ ಕುರಿತು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಭೇಟಿ ನೀಡಿದ ಶಾಸಕ ಶಿವರಾಮ ಹೆಬ್ಬಾರ ಅಂತಿಮ ದರ್ಶನ ಪಡೆದು, ಕುಟುಂಬದವರಿಗೆ ಸಾಂತ್ವನ ಹೇಳಿದರು. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಬಾಳಿ ಬದುಕಬೇಕಾದ ಯುವಕರು, ರಸ್ತೆ ಅಪಘಾತದಲ್ಲಿ ಮೃತರಾಗಿರುವುದು ಖೇದಕರ’ ಎಂದು ಶೋಕ ವ್ಯಕ್ತಪಡಿಸಿದರ. ಬಯಲುಸೀಮೆಯ ಪ್ರದೇಶದವರು ಮಲೆನಾಡು ಭಾಗದಲ್ಲಿ ಜೋರಾದ ಮಳೆಯ ವಾತಾವರಣದಲ್ಲಿ ವಾಹನ ಚಾಲನೆ ಮಾಡುವಾಗ ಬಹಳ ಎಚ್ಚರಿಕೆಯಿಂದಿರಬೇಕು ಎಂದು ಅವರು ಮನವಿ ಮಾಡಿದರು.

ಚಿತ್ರಾನ್ನ ತಿಂದು ಹೊರಟಿದ್ದ

ಅಕ್ಷಯ್ ಮೃತದೇಹದ ಮುಂದೆ ತಾಯಿ ರೋಧಿಸುವ ದೃಶ್ಯ ಮನ ಕಲಕುವಂತಿತ್ತು. ‘ಬುಧವಾರ ಸಂಜೆ ಹೊರಡುವ ವೇಳೆ ಅಡುಗೆ ಮಾಡುತ್ತೇನೆ ಊಟ ಮಾಡಿ ಹೋಗು ’ ಎಂದಾಗ, ಏನೂ ಬೇಡಮ್ಮ, ಕೇವಲ ಚಿತ್ರಾನ್ನ ಮಾಡಿಕೊಡು ಎಂದಿದ್ದ. ಸಂತೋಷದಿಂದ ಚಿತ್ರಾನ್ನ ತಿಂದು ದೇವರ ದರ್ಶನಕ್ಕೆ ಹೊರಟಿದ್ದ, ಈಗ ನನ್ನನ್ನು ಅನಾಥಳನ್ನಾಗಿಸಿ ಹೊರಟು ಹೋದ’ ಎಂದು ಮರುಗಿದರು.
ಪ್ರಧಾನಿ ಮೋದಿ ಸಂತಾಪ
ಯಲ್ಲಾಪುರ ಸಮೀಪ ನಡೆದ ಅಪಘಾತ ಪ್ರಕರಣದ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ಪಿಎಂಒ ಇಂಡಿಯಾ ಎಕ್ಸ್ ಖಾತೆಯಲ್ಲಿ ಕನ್ನಡದಲ್ಲಿ ಶೋಕ ಸಂದೇಶವನ್ನು ಹಾಕಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಸಂಭವಿಸಿದ ದುರ್ಘಟನೆ ತೀವ್ರ ನೋವು ತಂದಿದೆ. ಈ ಕಠಿಣ ಸಂದರ್ಭದಲ್ಲಿ ನನ್ನ ಸಹಾನುಭೂತಿ ಶೋಕತಪ್ತ ಕುಟುಂಬಗಳೊಂದಿಗಿದೆ. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಬರೆಯಲಾಗಿದೆ.
ೆಟೋ 9 ವಾಯೆಲ್ಪಿ 02 ಎ
ೆಟೋ 9 ವಾಯೆಲ್ಪಿ 02ಬಿ
ಯಲ್ಲಾಪುರದ ಆರತಿಬೈಲ್ ಘಟ್ಟದಲ್ಲಿ ಅಪಘಾತ ನಡೆದ ಸ್ಥಳಕ್ಕೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ, ಎಸ್‌ಪಿ ದೀಪನ್ ಎಂ.ಎನ್., ಡಿವೈಎಸ್‌ಪಿ ಗೀತಾ ಪಾಟೀಲ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ೆಟೋ 9 ವಾಯೆಲ್ಪಿ 02ಸಿ
ಯಲ್ಲಾಪುರದ ಸರ್ಕಾರಿ ಆಸ್ಪತ್ರೆಗೆ ಶಾಸಕ ಶಿವರಾಮ ಹೆಬ್ಬಾರ ಭೇಟಿ ನೀಡಿ, ಅಪಘಾತದಲ್ಲಿ ಮೃತಪಟ್ಟವರ ಅಂತಿಮ ದರ್ಶನ ಪಡೆದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net