disaster-in-the-barn ಕೊಟ್ಟಿಗೆಗಿಲ್ಲ ವಿಕೋಪದ ಪರಿಹಾರ

ಮೂರೂರಿನಲ್ಲಿ ಹುಳಸೆಮಕ್ಕಿ ಲತಾ ನಾಯ್ಕರ ಕೊಟ್ಟಿಗೆ ಮೇಲೆ ಮರ ಬಿದ್ದು ಹಾನಿಯಾಗಿದೆ.
ಮೂರೂರಿನಲ್ಲಿ ಹುಳಸೆಮಕ್ಕಿ ಲತಾ ನಾಯ್ಕರ ಕೊಟ್ಟಿಗೆ ಮೇಲೆ ಮರ ಬಿದ್ದು ಹಾನಿಯಾಗಿದೆ.
Published on

ಪ್ರಮುಖ ಮುಖ್ಯಾಂಶಗಳು

  • ಮನೆ, ಬೆಳೆ ಹಾನಿಗಷ್ಟೇ ಸೀಮಿತವಾದ ಸರ್ಕಾರದ ನೀತಿಗಳು
  • ಯಾರಿಗೂ ಅರ್ಥವಾಗದ ಸ್ಥಿತಿ
ಕುಮಟಾ: ಪ್ರಕೃತಿ ವಿಕೋಪದಡಿ ಹಾನಿಗೊಳಗಾಗುವ ಬಹುತೇಕ ಎಲ್ಲ ಕಟ್ಟಡಗಳಿಗೂ ಪರಿಹಾರದ ಸೌಲಭ್ಯ ಒದಗಿಸಿರುವ ಸರ್ಕಾರಗಳು ದೇಶದ ಬೆನ್ನೆಲುಬಾದ ರೈತನ ಪೂರಕ ವ್ಯವಸ್ಥೆಯಾದ ಕೊಟ್ಟಿಗೆಯನ್ನು ಮಾತ್ರ ಹಾನಿ ಪರಿಹಾರದಿಂದ ಹೊರಗಿಟ್ಟಿರುವುದು ಯಾರಿಗೂ ಅರ್ಥವಾಗದಂಥ ವಿಷಯವಾಗಿದೆ.
ಮಲೆನಾಡು, ಕರಾವಳಿ ಮಾತ್ರವಲ್ಲದೆ, ಬಹುತೇಕ ಎಲ್ಲೆಡೆಗಳಲ್ಲಿ ಪ್ರತಿವರ್ಷ ಮಳೆಗಾಲದಲ್ಲಿ ಜನರ ಮನೆ ಹಾಗೂ ಇತರ ಕಟ್ಟಡಗಳ ಮೇಲೆ ಮರಮಟ್ಟು ಮುರಿದು ಬಿದ್ದು ಅಥವಾ ಗಾಳಿಗೆ ಛಾವಣಿಯೇ ಹಾರಿಹೋಗಿ ಹಾನಿಯಾಗುವ ಘಟನೆಗಳು ಎಲ್ಲೆಡೆ ಕಂಡುಬರುತ್ತದೆ. ಬಹುತೇಕ ಎಲ್ಲೆಡೆ ರೈತರ ಕೊಟ್ಟಿಗೆಗಳು ಕಲ್ಲು-ಮಣ್ಣಿನ ರಚನೆಗಳೇ ಆಗಿದ್ದು, ಕಾಂಕ್ರೀಟ್ ಛಾವಣಿಯೂ ತೀರಾ ವಿರಳ. ಹೈನುಗಾರಿಕೆಯನ್ನು ವೃತ್ತಿಯಾಗಿ ಮಾಡುವವರು ಮಾತ್ರ ಸುಸಜ್ಜಿತ ಕೊಟ್ಟಿಗೆಗಳನ್ನು ಹೊಂದಿರುತ್ತಾರೆ. ಹೀಗಾಗಿ ಬಡಬಗ್ಗರ ಕೊಟ್ಟಿಗೆಗಳು ಒಂದು ಅಡಕೆ ಮರ ಬಿದ್ದರೂ ಭಾಗಶಃ ಹಾನಿಗೊಳಗಾಗುತ್ತವೆ. ಅದರೆ, ಕೊಟ್ಟಿಗೆಗೆ ಉಂಟಾದ ಹಾನಿಗೆ ಕಂದಾಯ ಇಲಾಖೆ ಅಥವಾ ಪಶುಸಂಗೋಪನಾ ಇಲಾಖೆಯಿಂದ ಪಂಚನಾಮೆಯೂ ನಡೆಯುವುದಿಲ್ಲ. ಸಾಲಸೋಲ ಮಾಡಿ ಅಥವಾ ಸರ್ಕಾರದ ಸೌಲಭ್ಯ ಪಡೆದು ದನ, ಎಮ್ಮೆ ಸಾಕಿದವರಿಗೂ ಕೊಟ್ಟಿಗೆ ರಿಪೇರಿಗೆ ಯಾವ ಪರಿಹಾರವೂ ಸಿಗುತ್ತಿಲ್ಲ. ಒಂದೆಡೆ ಗೋಸಾಕಣೆಗೆ, ಹೈನುಗಾರಿಕೆಗೆ ಪ್ರೋತ್ಸಾಹ ನೀಡುವ ಸರ್ಕಾರಗಳು ಅವುಗಳ ಕೊಟ್ಟಿಗೆಗಳನ್ನು ಮಾತ್ರ ಹಾನಿ ಪರಿಹಾರದಿಂದ ಹೊರಗಿಟ್ಟಿರುವುದು ದುರದೃಷ್ಟದ ಸಂಗತಿ ಎಂಬುದು ರೈತ ಸಮುದಾಯದ ಅಳಲಾಗಿದೆ.
ಪ್ರಕೃತಿ ವಿಕೋಪದಡಿ ಕೊಟ್ಟಿಗೆಗೆ ಹಾನಿಯಾದರೆ ಪರಿಹಾರ ಸಿಗದಿರಲು ಸರ್ಕಾರದ ಪರಿಹಾರ ಮಾರ್ಗಸೂಚಿಗಳು ಮುಖ್ಯ ಕಾರಣವಾಗಿದೆ. ಸರ್ಕಾರದ ನಿಯಮಾವಳಿಯು ಜಾನುವಾರು ಕೊಟ್ಟಿಗೆಯನ್ನು ವಾಸದ ಮನೆ ಎಂದು ಪರಿಗಣಿಸುವುದಿಲ್ಲ. ಪರಿಹಾರ ನಿಧಿಯು ಕೇವಲ ಮನುಷ್ಯರ ವಾಸದ ಮನೆ ಮತ್ತು ಬೆಳೆ ಹಾನಿಗೆ ಮಾತ್ರ ಸೀಮಿತವಾಗಿರುತ್ತದೆ. ಸರ್ಕಾರದ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ನಿಯಮಗಳ ಪ್ರಕಾರ, ಕೊಟ್ಟಿಗೆಗಳು ಆಸ್ತಿ ನಷ್ಟದ ವ್ಯಾಪ್ತಿಗೆ ಬರುವುದಿಲ್ಲ. ಪ್ರಕೃತಿ ವಿಕೋಪದಲ್ಲಿ ಜಾನುವಾರುಗಳಿಗೆ ಸಾವು-ನೋವು ಸಂಭವಿಸಿದರೆ ಮಾತ್ರ ಪಶುಪಾಲನಾ ಇಲಾಖೆಯಿಂದ ಪರಿಹಾರ ಲಭ್ಯವಿದೆ. ಕೊಟ್ಟಿಗೆ ಹಾನಿಯನ್ನು ನೇರವಾಗಿ ಸರ್ಕಾರಿ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ಭರಿಸಲು ಪ್ರಸ್ತುತ ಅವಕಾಶವಿಲ್ಲದಿರುವುದರಿಂದ, ರೈತರು ರಾಷ್ಟ್ರೀಯ ಕೃಷಿ ವಿಮಾ ಯೋಜನೆ ಅಥವಾ ಇತರೆ ವಿಮೆಗಳನ್ನು ಆಶ್ರಯಿಸಬೇಕಾಗುತ್ತದೆ.
ಹೀಗಾಗಿ ಸರ್ಕಾರದ ಮಟ್ಟದಲ್ಲಿ ಜನರ ವಸತಿಯಂತೆಯೇ ಜಾನುವಾರು ವಸತಿ ಕಟ್ಟಡಕ್ಕೂ ಪ್ರಕೃತಿ ವಿಕೋಪದ ಪರಿಹಾರದ ಸವಲತ್ತು ಸಿಗುವಂತೆ ಪರಿಹಾರ ಮಾರ್ಗಸೂಚಿಗಳಲ್ಲಿ ಸುಧಾರಣೆ ತರಬೇಕಾದ ಅಗತ್ಯವಿದೆ. ಈ ಬಗ್ಗೆ ನಮ್ಮನ್ನಾಳುವವರು ಮುತುವರ್ಜಿ ವಹಿಸಬೇಕು ಎಂಬುದು ರೈತ ಸಮುದಾಯ ಹಾಗೂ ಹೈನುಗಾರರ ಬೇಡಿಕೆಯಾಗಿದೆ.

ಮೂರೂರಿನಲ್ಲಿ ಇತ್ತೀಚೆಗೆ ಹುಳಸೆಮಕ್ಕಿ ಯ ಲತಾ ನಾಯ್ಕರ ದನದ ಕೊಟ್ಟಿಗೆಯ ಮೇಲೆ ಮರಬಿದ್ದು ಮೇಲ್ಛಾವಣಿ ಹಾಗೂ ಮೇವಿನ ಹುಲ್ಲು ಹಾನಿಯಾಗಿದೆ. ಈ ಬಗ್ಗೆ ಪಶು ಇಲಾಖೆ ಹಾಗೂ ಕಂದಾಯ ಇಲಾಖೆಯನ್ನು ಸಂಪರ್ಕಿಸಿದಾಗ ದನದ ಕೊಟ್ಟಿಗೆ ಪ್ರಕೃತಿ ವಿಕೋಪದಲ್ಲಿ ಹಾನಿಯಾದಲ್ಲಿ ಸರ್ಕಾರದಿಂದ ಯಾವುದೇ ಪರಿಹಾರವಿಲ್ಲ ಎನ್ನುತ್ತಾರೆ. ನೈಸರ್ಗಿಕ ಕೃಷಿಗೆ ಹಚ್ಚಿನ ಒತ್ತು ನೀಡುವ ಸರ್ಕಾರ, ಅದಕ್ಕೆ ಪೂರಕವಾಗಿರುವ ಪಶುಪಾಲನಾ ಆಶ್ರಯಕ್ಕೆ (ಕೊಟ್ಟಿಗೆ) ಪ್ರಕೃತಿ ವಿಕೋಪದಡಿ ಹಾನಿಗೊಳಗಾದಲ್ಲಿ ಸಹಾಯವಾಗಿ ಪರಿಹಾರ ನೀಡಿ ಪ್ರೋತ್ಸಾಹಿಸುವ ಯೋಜನೆ ಜಾರಿಯಾಗಬೇಕಿರುವುದು ಅತ್ಯಗತ್ಯವಿದೆ.

— ಗಣಪತಿ ಎಸ್. ನಾಯ್ಕ ಅಧ್ಯಕ್ಷ, ಎವಿಪಿ ರೈತ ಉತ್ಪಾದಕ ಸಂಸ್ಥೆ, ಕುಮಟಾ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net