ಅರಣ್ಯ ಇಲಾಖೆ ನೆಡುತೋಪು ಕಾಮಗಾರಿ ಬಗ್ಗೆ ರವೀಂದ್ರನಾಥ ನಾಯ್ಕ ಆಕ್ಷೇಪ
ಪರಿಶೀಲನಾ ವರದಿ ನೀಡಲು ಆಗ್ರಹ
ಅಕೇಶಿಯಾ ಸಸಿ ನೆಡುವುದಕ್ಕೆ ಆಕ್ಷೇಪ
ಶಿರಸಿ: ಪರಿಸರ ಸಾಂದ್ರತೆ ಮತ್ತು ಅರಣ್ಯ ಪ್ರದೇಶ ಹೆಚ್ಚಿಸುವಿಕೆ ದೃಷ್ಟಿಯಿಂದ ಅರಣ್ಯ ಇಲಾಖೆಯ ನೆಡುತೋಪು (Plantation) ಕಾಮಗಾರಿ ಸಾಕಷ್ಟು ಟೀಕೆ ಮತ್ತು ಸಂಶಯಕ್ಕೆ ಕಾರಣವಾಗಿದೆ ಎಂದು ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಅರಣ್ಯ ಅತಿಕ್ರಮಣದಾರರಿಗೆ ಕಾನೂನು ಪಾಠ ಮಾಡುವ ಅರಣ್ಯ ಇಲಾಖೆ, ಕೋಟಿ ಹೊಂಡ ಎಲ್ಲಿ ತೋಡಿದೆ, ನೆಟ್ಟ ಗಿಡಗಳೆಷ್ಟು? ಬದುಕಿದ್ದು ಎಷ್ಟು ಎಂದು ಅರಣ್ಯವಾಸಿಗಳು ಕೇಳುತ್ತಿದ್ದಾರೆ.
ನೆಡು ತೋಪಿನಲ್ಲಿ, ಬದುಕಿರುವ ಗಿಡಕ್ಕಿಂತ, ಸತ್ತಿರುವ ಸಂಖ್ಯೆ ಹೆಚ್ಚಾಗಿ ಕಾಣಸಿಗುತ್ತದೆ.
ನೆಟ್ಟ ಗಿಡಗಳ ಪ್ಲಾಸ್ಟಿಕ್ ಕವರ್ ರಾಶಿ, ರಾಶಿಯಾಗಿ ಇಂದಿಗೂ ಅರಣ್ಯ ಪ್ರದೇಶದಲ್ಲಿ ಬಿದ್ದಿರುವುದು ನೋಡಿದರೆ, ಇಲಾಖೆಗೆ ಪರಿಸರ ರಕ್ಷಣೆ, ಸಂರಕ್ಷಣೆ ಬಗ್ಗೆ ಇರುವ ಜವಾಬ್ದಾರಿ ಅರಿವಾಗುತ್ತದೆ ಎಂದು ವ್ಯಂಗವಾಡಿದ್ದಾರೆ.
ನೆಟ್ಟ ಗಿಡ ಹುಟ್ಟಿದ್ದಕ್ಕಿಂತ ಹೆಚ್ಚಾಗಿ ಬೀಜ ಪ್ರಸರಣದಿಂದ ಹುಟ್ಟಿರುವ ಗಿಡಗಳೇ ಜಾಸ್ತಿ ಎಂದು ಅರಣ್ಯ ಸಮೀಪ ವಾಸಿಸುವ ಜನತೆ ಹೇಳುತ್ತಿದ್ದಾರೆ.
ಪರಿಸರ ವಿರೋಧಿ ಹಾಗೂ ಮರ ಕಡಿಯುವ ಉದ್ದೇಶದಿಂದ ಪದೇಪದೆ ಅಕೆಶಿಯಾ ಗಿಡ ನೆಡುವ ಅರಣ್ಯ ಇಲಾಖೆಯ ನೀತಿ ಸಮಂಜಸವಲ್ಲ.
ಈ ಹಿನ್ನೆಲೆಯಲ್ಲಿ ಸರ್ಕಾರದ ಗಮನಕ್ಕೆ ತರಲು ಒತ್ತಡ ಕೇಳಿ ಬರುತ್ತಿವೆ ಎಂದು ಅವರು ತಿಳಿಸಿದ್ದಾರೆ.
ಅರಣ್ಯವಾಸಿಗಳು ಬಿದ್ದಂತ ಮನೆ ನಿರ್ಮಾಣ ಹಾಗೂ ವಾರ್ಷಿಕ ರಿಪೇರಿ ಮಾಡುವಾಗ ತೊಂದರೆ ನೀಡುವ ಅರಣ್ಯ ಇಲಾಖೆಯವರು, ಅರಣ್ಯ ಪ್ರದೇಶದಲ್ಲಿ ವಾಣಿಜ್ಯ ಕಟ್ಟಡ ಕಟ್ಟುವಾಗ ಯಾವ ಕಾನೂನು ಮಾನದಂಡ ಅನುಸರಿಸುತ್ತಾರೆ?
ಹಳೆಯ ಗಿಡಗಳ ತೋಪಿನ ಮುಂದೆ, ಹೊಸ ವರ್ಷದ ಕಾಮಗಾರಿಯ ನಾಮಫಲಕ ಕಾಣುವುದು ಸಂಶಯಕ್ಕೆ ಕಾರಣವಾಗಿದೆ.
ಅಲ್ಲದೆ, ನೆಡುತೋಪು ಮಾಡಿದ್ದಾರೆ ಎನ್ನುವ ಪ್ರದೇಶದಲ್ಲಿ, ಸುತ್ತುವರೆದು ಮುತ್ತಿಕೊಂಡು ಲಾಂಟೆನಾ ಗಿಡಗಳ ಮಟ್ಟಿ ಪರಿಶೀಲಿಸಿದರೆ ಅದರಲ್ಲಿ ಗುಂಡಿಯಾಗಲಿ, ಗಿಡವನ್ನಾಗಲಿ ಕಾಣ ಸಿಗುವುದಿಲ್ಲ ಎಂದಿದ್ದಾರೆ.
ವರ್ಷದಿಂದ ವರ್ಷ, ಹಿಂದಿನ ವರ್ಷ ನೆಟ್ಟಿದ ಗಿಡಗಳಲ್ಲಿ ಬದುಕಿದ ಗಿಡಗಳನ್ನ ಪರಿಶೀಲಿಸಿ ಪರಿಶೀಲನಾ ವರದಿ ಮಾಡುವ ಕಟ್ಟು ನಿಟ್ಟಿನ ನೀತಿ ಇಲಾಖೆಯಲ್ಲಿ ಇರುತ್ತದೆ.
ಆದ್ದರಿಂದ ನೆಟ್ಟ ಗಿಡಗಳೆಷ್ಟು ಬದುಕಿದ ಗಿಡಗಳೆಷ್ಟೋ ಎಂದು ಪ್ರತಿವರ್ಷ ಬದುಕಿದ ಗಿಡಗಳ ಪರಿಶೀಲನಾ ವರದಿ ಸಾರ್ವಜನಿಕವಾಗಿ ಪ್ರಕಟಿಸಿ ಇಲಾಖೆಯ ದಕ್ಷತೆಯನ್ನು ಬಿಂಬಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.