ಗೋಕರ್ಣದ ಅಶೋಕೆಯಲ್ಲಿನ ಸಾರ್ವಭೌಮ ಗುರುಕುಲದ ವಾರ್ಷಿಕೋತ್ಸವದ ಸಾನ್ನಿಧ್ಯ ವಹಿಸಿ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಗಳು ಆಶೀರ್ವಚನ ನೀಡಿದರು.
Published on:
Copied
Follow Us
ಗೋಕರ್ಣ:ನಮ್ಮ ಅಂತರಂಗವನ್ನು ಅಸಂಖ್ಯ ಬೆಳಕಿನ ಪುಂಜದ ಸಪ್ತಚಕ್ರಗಳು ಆವರಿಸಿಕೊಂಡಿವೆ. ಈ ಚಕ್ರಗಳು ಕೇವಲ ಆಧ್ಯಾತ್ಮ ಸೂಚಕಗಳು ಮಾತ್ರವಲ್ಲದೆ ಲೌಕಿಕ ಬದುಕಿನ ಬಂಡಿ ಸಾಗಿಸಲು ಅವು ಸಹಕಾರಿಗಳಾಗಿವೆ ಎಂದು ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ಅಶೋಕೆಯಲ್ಲಿರುವ ಸಾರ್ವಭೌಮ ಗುರುಕುಲದ ವಾರ್ಷಿಕೋತ್ಸವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಸಾಧಕರಾಗುವವರಿಗೆ ಈ ಚಕ್ರಗಳು ಅತಿ ಪ್ರಮುಖವಾದವುಗಳಾಗಿವೆ.
ಆಂತರ್ಯದ ಮಹಾಯಾನದಲ್ಲಿ ಒಂದೊಂದು ಚಕ್ರವೂ ಒಂದೊಂದು ನಿಲ್ದಾಣಗಳಾಗಿವೆ. ಇವುಗಳನ್ನು ದಾಟುವ ಮೂಲಕ ಪರಂಜ್ಯೋತಿಯನ್ನು ಸಾಕ್ಷಾತ್ಕರಿಸಿಕೊಳ್ಳವುದೇ ಸಾಧಕನ ಗುರಿಯಾಗಬೇಕು.
ಇಂತಹ ಸಪ್ತಚಕ್ರದ ಮಾದರಿಯ ಸ್ಥಾಪನೆಯಲ್ಲಿ ಗುರುಕುಲದ ಪರಮ ಸಾರ್ಥಕತೆಯಿದೆ. ಇಲ್ಲಿನ ಶಿಕ್ಷಣವನ್ನು ಸಂತೋಷದಿಂದ ಪಡೆಯಿರಿ. ಅದರಲ್ಲಿ ಜೀವನಕ್ಕೆ ಅಗತ್ಯವಿರುವ ಸಂದೇಶವಿರಲಿ. ಸಂದೇಶ ರಹಿತ ಶಿಕ್ಷಣ ಅನಾಹುತಕ್ಕೆ ದಾರಿ ಎಂದರು.
ನಂತರ ಶ್ರೀಗಳು ಕಾರ್ಯಕ್ರಮದಲ್ಲಿ ವಿನೂತನವಾದ ಸಪ್ತಚಕ್ರ ಮಾದರಿಯನ್ನು ಉದ್ಘಾಟಿಸಿದರು.
ಮುಖ್ಯ ಅಭ್ಯಾಗತರಾಗಿ ಡಾ.ಜಿ.ಜಿ.ಸಭಾಹಿತ ಮಾತನಾಡಿ, ದೇಶವನ್ನು ಸುಸ್ಥಿರವಾಗಿ ಕಟ್ಟಬಲ್ಲ ಶಿಕ್ಷಣ ವರ್ತಮಾನದ ಅಗತ್ಯವಾಗಿದ್ದು ಆ ಮಹಾಕಾರ್ಯ ಶ್ರೀಗಳ ಮಾರ್ಗದರ್ಶನದಲ್ಲಿ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಮತ್ತು ಗುರುಕುಲದಿಂದ ಸಾಂಗವಾಗಿ ನಡೆಯುತ್ತಿದೆ.
ಈ ಕಾರ್ಯಕ್ಕೆ ನಮ್ಮ ಟ್ರಸ್ಟ್ ನಿಮ್ಮೊಂದಿಗಿದೆ ಎಂದು ಭರವಸೆಯಿತ್ತರು.
ಚಿಂತಕ ಡಾ.ಪ್ರಕಾಶ ಭಟ್ಟ ಜೀವನದ ಸಾರ್ಥಕತೆಯ ಬಗ್ಗೆ ಮೌಲಿಕ ಸಂದೇಶವಿತ್ತರು. ವಿದ್ಯಾಪರಿಷತ್ ಅಧ್ಯಕ್ಷ ಡಾ.ಜಿ.ಎಲ್.ಹೆಗಡೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಶೋಕಲೋಕದ ಮಂಜುನಾಥ ಭಟ್ಟ ಸುವರ್ಣಗದ್ದೆ ಮತ್ತು ಗುರುಕುಲದ ಪ್ರಾಚಾರ್ಯರು,ಪದಾಧಿಕಾರಿಗಳು ಉಪಸ್ಥಿತರಿದ್ದರು. ಪ್ರಾಚಾರ್ಯೆ ಶಶಿಕಲಾ ಕೂರ್ಸೆ ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ಸೌಭಾಗ್ಯಾ ಭಟ್ಟ ಪ್ರಸ್ತಾಪಿಸಿದರು. ಕಿರಣ ವರದಿ ವಾಚಿಸಿದರು. ಮಂಜುನಾಥ ಭಟ್ಟ ವಂದಿಸಿದರು.