ತಾಲೂಕಿನಲ್ಲಿ ಈ ಬಾರಿ ಮಳೆ (monsoon) ಕೊರತೆಯಿಂದ ಕೃಷಿ ಚಟುವಟಿಕೆಗೆ ತೀವ್ರ ಹಿನ್ನೆಡೆಯಾಗಿದೆ. ಜೂನ್ ತಿಂಗಳಲ್ಲೇ 133 ಮಿಮೀ ಮಳೆ ಕೊರತೆಯಾಗಿದೆ. ಇದೇ ರೀತಿ ಮುಂದುವರಿದಲ್ಲಿ ಬಿತ್ತನೆ ಕ್ಷೇತ್ರ ಸಂಪೂರ್ಣ ನಷ್ಟವಾಗುವ ಆತಂಕ ಎದುರಾಗಿದೆ.
ವಿವಿಧ ಕಾರಣಗಳಿಂದ ಕೃಷಿ ಕ್ಷೇತ್ರ ಸೊರಗುತ್ತಿದೆ. ತಾಲೂಕಿನಲ್ಲಿ ಪ್ರಸ್ತುತ ಕೃಷಿ ಭೂಮಿ ಕಡಿಮೆಯಾಗಿದ್ದು, ಕಬ್ಬಿನಕ್ಷೇತ್ರ ಹೆಚ್ಚಿದೆ. ಕೃಷಿ ಕ್ಷೇತ್ರದಲ್ಲಿ ತೋಟಗಾರಿಕೆಗೆ ಹೆಚ್ಚು ಒತ್ತು ನೀಡಿದ್ದಾರೆ.
ತಾಲೂಕಿನ ಪೂರ್ವ ಭಾಗವಾದ ಕಿರವತ್ತಿ, ಮದನೂರು, ಕಣ್ಣಿಗೇರಿ ಗ್ರಾಪಂಗಳಲ್ಲಿ 2600 ಎಕರೆಗಳಷ್ಟು ಅತಿಕ್ರಮಣ ಕ್ಷೇತ್ರವಿದೆ.
ಈ ಪೈಕಿ ಶೇ. 80ರಷ್ಟು ಕ್ಷೇತ್ರದಲ್ಲಿ ವಾಣಿಜ್ಯ ಬೆಳೆಗಳಾದ ಕಬ್ಬು, ಮುಸುಕಿನಜೋಳ ಹಾಗೂ ಭತ್ತವನ್ನು ಬೆಳೆಯಲಾಗುತ್ತಿದೆ. ಭತ್ತ ಹಾಗೂ ಮುಸುಕಿನಜೋಳ ಬಿತ್ತನೆಕಾರ್ಯ ಪ್ರಗತಿಯಲ್ಲಿದೆ.
ತಾಲೂಕಿನಲ್ಲಿ ಕೂರಿಗೆ ಹಾಗೂ ನಾಟಿ ಸೇರಿ ಒಟ್ಟು 1943 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬಿತ್ತನೆಯ ಗುರಿ ಇದೆ. ಆದರೆ ಈವರೆಗೆ ಆದದ್ದು ಕೇವಲ 218 ಹೆಕ್ಟೇರ್ ಮಾತ್ರ.
ಅದರಲ್ಲಿ ನಾಟಿ ಮಾಡುವ ಕ್ಷೇತ್ರದಲ್ಲಿ ಬಿತ್ತನೆಯೇ ಆಗಿಲ್ಲ. 20 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬಿತ್ತನೆಯ ಗುರಿ ಇದ್ದು, ಇನ್ನೂ ಆರಂಭವಾಗಿಲ್ಲ.
ಮೆಕ್ಕೆಜೋಳ 86 ಹೆಕ್ಟೇರ್, ಕಬ್ಬು 295 ಹೆಕ್ಟೇರ್, ಕುಳೆ 152 ಹೆಕ್ಟೆರ್ ಸೇರಿದಂತೆ 2535 ಹೆಕ್ಟೇರ್ ಗುರಿಯಲ್ಲಿ ಒಟ್ಟು 751 ಹೆಕ್ಟೇರ್ ಭಾಗದಲ್ಲಿ ಅಂದರೆ ಶೇ. 30ರಷ್ಟು ಮಾತ್ರ ಸಾಗುವಳಿಯಾಗಿದೆ.
ಕೃಷಿ ಇಲಾಖೆಯಲ್ಲಿ ಬೀಜದ ಕೊರತೆ ಇಲ್ಲ. ಭತ್ತದ ಬೀಜ 168 ಕ್ವಿಂಟಾಲ್ ದಾಸ್ತಾನಿದ್ದು, ಈವರೆಗೆ ವಿತರಣೆಯಾದದ್ದು ಕೇವಲ 24 ಕ್ವಿಂಟಾಲ್ ಮಾತ್ರ.
ಮುಸುಕಿನ ಜೋಳ 121.20 ಕ್ವಿಂಟಾಲ್ ದಾಸ್ತಾನು ಇದ್ದು, ಅದರಲ್ಲಿ 77.66 ಕ್ವಿಂಟಾಲ್ ವಿತರಣೆಯಾಗಿದೆ. ರಸಗೊಬ್ಬರ ಒಟ್ಟು1185.82 ಕ್ವಿಂಟಾಲ್ ದಾಸ್ತಾನು ಇದ್ದು 689.16 ಕ್ವಿಂಟಾಲ್ ವಿತರಿಸಲಾಗಿದೆ.
ಅಧಿಕೃತ ಜಮೀನಿಗೆ ಯೂರಿಯಾ ಗೊಬ್ಬರ ನೀಡಲಾಗುತ್ತಿದೆ. ಕಿರವತ್ತಿ, ಮದನೂರು, ಕಣ್ಣಿಗೇರಿ 2600 ಎಕರೆ ಜಿಪಿಎಸ್ ಆದ ಅತಿಕ್ರಮಣ ಜಮೀನಿದ್ದು, ಅವರಿಗೆ ಅಗತ್ಯ ದಾಖಲೆ ಪಡೆದುಕೊಂಡು ಎಕರೆಗೆ ಒಂದು ಚೀಲ ಯೂರಿಯಾ ಗೊಬ್ಬರ ಕೊಡಲಾಗುತ್ತಿದೆ.
ಹೆಚ್ಚಿಗೆ ಬೇಕಾದವರು ಸಾರಜನಕ ಯುಕ್ತ ನ್ಯಾನೋ ಗೊಬ್ಬರ ಪಡೆದುಕೊಳ್ಳಲು ಅವಕಾಶವಿದೆ. ರೈತರು ಕೃಷಿ ಚಟುವಟಿಕೆಗಳಿಗಾಗಿ ಸಿದ್ಧರಾಗಿದ್ದರೂ, ಮಳೆಗಾಗಿ ಕಾಯುವುದು ಅನಿವಾರ್ಯವಾಗಿದೆ.
"
ಮಳೆ ಇಲ್ಲವೆಂದು ರೈತರು ತಕ್ಷಣ ಪರ್ಯಾಯ ಬೆಳೆಯಲು ಸಾಧ್ಯವಿಲ್ಲ. ಮಳೆ ಇಲ್ಲದೆ ರೈತರಿಗೆ ಸಂಕಷ್ಟವಾಗಿದೆ. ಮುಂದೆ ಮಳೆ ಉತ್ತಮವಾದರೆ, ಮೂರು ತಿಂಗಳ ಬೆಳೆ ಬರುವ ಭತ್ತದ ಬೆಳೆ ಬೆಳೆಯಬಹುದು.