ಯೋಗ ಪಟ್ಟಾಭಿಷೇಕ ಸಮಾರಂಭದ ಮೂಲಕ ಸನ್ಯಾಸ ಸ್ವೀಕರಿಸಿದ ಯತಿಗಳಿಗೆ ನೂತನ ನಾಮಕರಣ ಪ್ರದಾನವಾಗಿಸಲಾಗುತ್ತದೆ. ಈ ದಿನದಂದು ಸನ್ಯಾಸ ವೈಭವದ ನಿರೂಪಣೆಯಾಗುತ್ತದೆ. ಇದು ಯೋಗ ಮಾರ್ಗಕ್ಕೆ ಸಂಬಂಧಿಸಿದ ದಿನ. ಹೀಗಾಗಿ ಪ್ರಾಪಂಚಿಕರ ಜೀವನ ವೈಭವಕ್ಕೂ ಸನ್ಯಾಸಿಗಳ ವೈಭವಕ್ಕೂ ವ್ಯತ್ಯಾಸವನ್ನು ನಿರೂಪಿಸುವ ದಿನವೂ ಹೌದು. ಕಾವಿ, ತ್ಯಾಗ, ಅಧ್ಯಾತ್ಮ, ಏಕಾಂತ, ಅಂತರ್ಮುಖಗಳೇ ಸನ್ಯಾಸದ ವೈಭವಗಳಾಗಿವೆ. ಯತಿಗಳಂತೆ ಪ್ರತಿ ವ್ಯಕ್ತಿಗೂ ಯೋಗ ಪಟ್ಟಾಭಿಷೇಕವಿದೆ. ಎಲ್ಲರ ಬದುಕಿನಲ್ಲೂ ಯೋಗ ಪಟ್ಟಾಭಿಷೇಕ ಬರುವಂತಾಗಬೇಕು. ತಮಗೆ ಅತ್ಯಂತ ಇಷ್ಟವಾದುದನ್ನು ಬಿಡುವುದು. ತಾವು ಪ್ರಾಪಂಚಿಕವಾಗಿ ಹೆಚ್ಚು ಬಯಸುವುದನ್ನು ತೊರೆಯುವುದೇ ವೈಯಕ್ತಿಕ ಯೋಗ ಪಟ್ಟಾಭಿಷೇಕವಾಗಿದೆ.