ಬೆಳೆಗಾರರ ಚಿತ್ತ ಮತ್ತೆ ಸಂಸದರತ್ತ!

ಕಳೆದ ಮಳೆಗಾಲದಲ್ಲಿ ಅಡಕೆ ಬೆಳೆ ಕೊಳೆ ರೋಗಕ್ಕೊಳಗಾಗಿ ಹಾನಿಯಾಗಿರುವುದು.
ಕಳೆದ ಮಳೆಗಾಲದಲ್ಲಿ ಅಡಕೆ ಬೆಳೆ ಕೊಳೆ ರೋಗಕ್ಕೊಳಗಾಗಿ ಹಾನಿಯಾಗಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಮಂಜೂರಿಯಾಗದ ಬೆಳೆ ವಿಮೆ ಪರಿಹಾರ
  • ರೈತರ ’ಕ್ಷೇಮ’ ಕಾಪಾಡುವುದು ಸಂಶಯ
ಶಿರಸಿ: ಹವಾಮಾನ ಆಧಾರಿತ ಬೆಳೆ ವಿಮೆಯ ಕಂತು ತುಂಬಿಸಿಕೊಂಡ ಕ್ಷೇಮಾ ಕಂಪನಿ ಈ ವರ್ಷವೂ ಬೆಳೆ ಹಾನಿಯ ಪರಿಹಾರ ಮಂಜೂರು ಮಾಡುವ ಲಕ್ಷಣ ಗೋಚರವಾಗುತ್ತಿಲ್ಲ. ಕಳೆದ ವರ್ಷವೂ ಇಂಥದೇ ಪರಿಸ್ಥಿತಿ ಉಂಟಾದಾಗ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಯತ್ನ ನಡೆಸಿ ರೈತರಿಗೆ ಪರಿಹಾರ ಒದಗಿಸಿದ್ದರು. ಹೀಗಾಗಿ, ಈ ವರ್ಷವೂ ರೈತರೆಲ್ಲ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿವರತ್ತ ಆಶಾ ಭಾವನೆಯಿಂದ ನೋಡುತ್ತಿದ್ದಾರೆ.
ಹೌದು, ಉತ್ತರ ಕನ್ನಡ ಜಿಲ್ಲೆಯ ರೈತರ ದುರದೃಷ್ಟದ ದಿನಗಳು ಮುಗಿಯುವ ಲಕ್ಷಣ ಕಂಡುಬರುತ್ತಿಲ್ಲ. ಕಳೆದೆರಡು ವರ್ಷಗಳಿಂದ ಧಾರಾಕಾರ, ಮಿತಿಮೀರಿದ ಮಳೆಯಿಂದ ಜಿಲ್ಲೆಯ ಪ್ರಧಾನ ಬೆಳೆ ಅಡಕೆಗೆ ಶಿರಸಿ, ಸಿದ್ದಾಪುರ ಮತ್ತು ಯಲ್ಲಾಪುರ ತಾಲೂಕುಗಳಲ್ಲಿ ದೊಡ್ಡ ಪ್ರಮಾಣದ ಹಾನಿ ಉಂಟಾಗಿದೆ. ಈ ಸ್ಥಿತಿಯಲ್ಲಿ ಹವಾಮಾನ ಆಧಾರಿತ ಬೆಳೆ ವಿಮೆಯ ಪರಿಹಾರ ರೈತರ ಪಾಲಿಗೆ ಮಹತ್ತರವಾಗಿದೆ. ಬೆಳೆ ವಿಮೆಯ ಕಂತು ಆಗಸ್ಟ್ 1 ರಿಂದ ಜುಲೈ ಅಂತ್ಯದವರೆಗೆ ಇರುತ್ತದೆ. ಈ ವರ್ಷ ಆಗಸ್ಟ್, ಸೆಪ್ಟೆಂಬರ್ ತಿಂಗಳಿನಲ್ಲಿ ಸರಾಸರಿ ಮಳೆಗಿಂತ ಜಾಸ್ತಿ ಮಳೆಯಾಗಿದ್ದು, ಹವಾಮಾನ ಆಧಾರಿತ ಬೆಳೆ ವಿಮೆಯ ಪರಿಹಾರಕ್ಕೆ ನಿಗದಿಪಡಿಸಲಾದ ಮಾನದಂಡಗಳಿಗೆ ಅನುಗುಣವಾಗಿದೆ. ಹೀಗಾಗಿ, ಬೆಳೆ ವಿಮೆಯ ಪರಿಹಾರ ಪಡೆಯಲು ರೈತರು ಅರ್ಹರಾಗಿದ್ದರೂ ಮಳೆ ಮಾಪನ ಯಂತ್ರಗಳ ದೋಷ ಪರಿಹಾರಕ್ಕೆ ಅಡ್ಡಿಯಾಗಿದೆ.
ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಳೆ ಮಾಪನ ಯಂತ್ರಗಳಿವೆ. ಆದರೆ, 103 ಗ್ರಾಮ ಪಂಚಾಯಿತಿಗಳ ಮಳೆ ಮಾಪನ ಯಂತ್ರ ಕಳೆದ ಎರಡು ವರ್ಷಗಳಿಂದ ದುರಸ್ತಿಗೊಳ್ಳದಿರುವುದರಿಂದ ಮಳೆಯ ದಾಖಲೆಗಳನ್ನು ಸಮರ್ಪಕವಾಗಿ ದಾಖಲಿಸಿಲ್ಲ. ಮಳೆ ಮಾಪನ ಯಂತ್ರಗಳು ನೀಡಿದ ದೋಷಪೂರಿತ ಮಳೆ ಮಾಹಿತಿಯನ್ನೇ ವಿಮಾ ಕಂತು ತುಂಬಿಸಿಕೊಂಡ ಕ್ಷೇಮಾ ಕಂಪನಿ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಳೆದ ವರ್ಷದಂತೆ ಈ ವರ್ಷವೂ ಪರಿಹಾರ ನೀಡಲು ಹಿಂದೇಟು ಹಾಕಿದೆ.
ತೋಟಗಾರಿಕೆ ಇಲಾಖೆ, ಜನಪ್ರತಿನಿಧಿಗಳು ಈ ಕಂಪನಿ ಪ್ರಮುಖರೊಂದಿಗೆ ಈಗಾಗಲೇ ಬೆಂಗಳೂರಿನಲ್ಲಿ ಎರಡು ಸುತ್ತಿನ ಸಭೆ ನಡೆಸಿದ್ದರೂ ಪರಿಹಾರ ಲಭಿಸುವ ಯಾವುದೇ ಆಶಾಭಾವ ಕಂಡುಬರುತ್ತಿಲ್ಲ.

ಹವಾಮಾನ ಆಧಾರಿತ ಬೆಳೆ ಯೋಜನೆಯ ವಿಮೆ ಮೊತ್ತ ರೈತರ ಖಾತೆಗೆ ಜಮಾ ಆಗಿಲ್ಲ. ಮಳೆ ಮಾಪನ ಯಂತ್ರ ಸರಿ ಇಟ್ಟುಕೊಳ್ಳುವುದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ. ಮಳೆ ಅಂಕಿ-ಅಂಶ ಸರಿಯಾದ ದಾಖಲು ಮಾಡಲಾಗಿಲ್ಲ. ಯಾವ ಮಾನದಂಡದಲ್ಲಿ ವಿಮೆ ಪರಿಹಾರ ನೀಡಬೇಕು ಎಂಬುದಾಗಿ ವಿಮೆ ಕಂಪನಿ ಪ್ರಶ್ನಿಸುತ್ತಿದ್ದು, ರೈತರಿಗೆ ಅನ್ಯಾಯವಾಗದ ರೀತಿಯಲ್ಲಿ ವಿಮೆ ಯೋಜನೆ ಮಂಜೂರು ಮಾಡಿಸುವ ಪ್ರಯತ್ನವನ್ನು ಸಂಸದನಾಗಿ ಮಾಡುತ್ತೇನೆ.

ಮತ್ತೆ ಬೇಕಿದೆ ಭಗೀರಥ ಪ್ರಯತ್ನ !

ಪ್ರತಿ ವರ್ಷವೂ ಸೆಪ್ಟೆಂಬರ್ ತಿಂಗಳಲ್ಲಿ ಕಳೆದ ಸಾಲಿನ ಬೆಳೆ ವಿಮೆ ಪರಿಹಾರ ಮಂಜೂರಾಗಿ ಅಕ್ಟೋಬರ್ ವೇಳೆ ಹಾನಿ ಅನುಭವಿಸಿದ ರೈತರ ಖಾತೆಗೆ ಜಮಾ ಆಗುತ್ತಿತ್ತು. ರಾಜ್ಯದ ಬೇರೆ ಜಿಲ್ಲೆಗಳಲ್ಲಿ ರೈತರು ಪರಿಹಾರ ಪಡೆದರೂ ಕಳೆದ ಸಾಲಿನಲ್ಲಿ ಜಿಲ್ಲೆಯ ಜವಾಬ್ದಾರಿ ಹೊತ್ತ ಕ್ಷೇಮಾ ಕಂಪನಿ ಮಳೆ ಮಾಪನ ಯಂತ್ರಗಳ ದೋಷ ಮುಂದಿಟ್ಟು ಪರಿಹಾರ ಮಂಜೂರು ಮಾಡಿರಲಿಲ್ಲ. ಅಂತಿಮವಾಗಿ ಈ ಪರಿಹಾರ ಒದಗಿಸಿಕೊಡುವ ಜವಾಬ್ದಾರಿ ಹೆಗಲಿಗೇರಿಸಿಕೊಂಡ ಸಂಸದ ವಿಶ್ವೇಶ್ವರ ಹೆಗಡೆ ಕೇಂದ್ರ ಕೃಷಿ ಸಚಿವ ಶಿವರಾಜ ಸಿಂಗ್ ಚೌಹಾಣ ಅವರ ಮೂಲಕ ಒತ್ತಡ ತಂದಿದ್ದರು. ಅಂತೂ ಜಿಲ್ಲೆಯ ರೈತರಿಗೆ 83 ಕೋಟಿ ರೂ.ಗಳಷ್ಟು ಪರಿಹಾರ ಬಿಡುಗಡೆಗೊಳಿಸುವಲ್ಲಿ ಸಫಲರಾಗಿದ್ದರು. ಈಗ ಮತ್ತೆ ಅದೇ ಸ್ಥಿತಿ ಬಂದಿದೆ. ಬೆಳೆ ಹಾನಿಗೀಡಾಗಿರುವ ರೈತರ ಪಾಲಿಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಈಗ ಆಸರೆ ಆಗಬೇಕಾಗಿದೆ. ಎಲ್ಲ ರೈತರ ಚಿತ್ತ ಈಗ ಸಂಸದರತ್ತ ನೆಟ್ಟಿದೆ.

ಅಡಕೆ ಬೆಳೆ ವಿಮೆ ಕಂತು ತುಂಬಿದ ರೈತರು

ತಾಲೂಕು ರೈತರು
ಶಿರಸಿ 18738
ಸಿದ್ದಾಪುರ 10544
ಯಲ್ಲಾಪುರ 7304
ಹೊನ್ನಾವರ 4324
ಮುಂಡಗೋಡ 3278
ಅಂಕೋಲಾ 2120
ಕುಮಟಾ 1295
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net