ಕೊಲೆ ಶಂಕೆ ವ್ಯಕ್ತಪಡಿಸಿದ ಮೃತನ ತಂದೆ

ಸುಟ್ಟು ಕರಕಲಾದ ಕಾರು.
ಸುಟ್ಟು ಕರಕಲಾದ ಕಾರು.
Published on
ಯಲ್ಲಾಪುರ: ಅರಬೈಲ್ ಘಟ್ಟದಲ್ಲಿ ಕಾರು ಸುಟ್ಟ ಪ್ರಕರಣಕ್ಕೆ ಹೊಸ ತಿರುವು ದೊರಕಿದೆ. ಅಪಘಾತದಿಂದ ಕಾರು ಸುಟ್ಟಿದ್ದಲ್ಲ ಅದು, ಕೊಲೆಯಾಗಿರಬಹುದು ಎಂದು ಮೃತನ ತಂದೆ ದೂರು ನೀಡಿದ್ದು, ಎ್ಐಆರ್‌ನಲ್ಲಿ ಕೊಲೆ ಪ್ರಕರಣದ ಬಿಎನ್‌ಎಸ್ ಸೆಕ್ಷನ್‌ಗಳನ್ನು ಸೇರಿಸಲಾಗಿದೆ.
ಏ. 8ರಂದು ಬೆಳಗ್ಗೆ 8 ರಿಂದ 7 ಗಂಟೆ ನಡುವಿನ ಅವಧಿಯಲ್ಲಿ ತಾಳೆ ಕುಂಬ್ರಿ ಬಸ್ ಸ್ಟಾಪ್ ಎದುರು ಬಿಳಿ ಬಣ್ಣದ ಕಾರೊಂದು ತಗ್ಗಿಗೆ ಬಿದ್ದು ಸುಟ್ಟು ಕರಕಲಾಗಿತ್ತು. ಅದರಲ್ಲಿದ್ದ ಒಬ್ಬ ವ್ಯಕ್ತಿ ಸಂಪೂರ್ಣ ಸುಟ್ಟು ಹೋಗಿದ್ದರು. ಯಲ್ಲಾಪುರ ಠಾಣೆ ಪೊಲೀಸರು ಅಪಘಾತ ಪ್ರಕರಣ ದಾಖಲಿಸಿಕೊಂಡಿದ್ದರು. ಒಂದು ದಿನದ ನಂತರ ಬೆಳಗಾವಿಯ ಕನಬರಗಿ ರಸ್ತೆಯ ಚಂದ್ರಮೌಳಿ ಕಾಲನಿಯ ಜಗನ್ನಾಥ ರಾಹು ಧಾಪಳೆ ಅವರು ಬಂದು ಕಾರು ಗುರುತಿಸಿ ತಮ್ಮ ಮಗನೇ ಸುಟ್ಟು ಹೋಗಿರಬಹುದು ಎಂದಿದ್ದರು.
ಅವರಿಂದ ಹೇಳಿಕೆ ಪಡೆದುಕೊಂಡಿದ್ದು, ಮೃತನ ಹೆಸರು ನಿತೇಶ ಜಗನ್ನಾಥ ಧಾಪಳೆ (35) ಎಂದು ಅಂದಾಜಿಸಲಾಗಿದ್ದು, ಖಚಿತ ಮಾಡಿಕೊಳ್ಳಲು ಸುಟ್ಟಿರುವ ದೇಹದ ಅವಶೇಷಗಳನ್ನು ಸಂಗ್ರಹಿಸಿ ಡಿಎನ್‌ಎ ಪರೀಕ್ಷೆಗೆ ಕಳಿಸಲಾಗಿದೆ.
ಮೃತ ದೇಹ ಹಿಂದಿನ ಸೀಟಿನಲ್ಲಿತ್ತು. ಅಲ್ಲದೆ, ನಿತೇಶ ತನ್ನ ಪತ್ನಿಗೆ ವಾಟ್ಸ್ ಆ್ಯಪ್ ಕರೆ ಮಾಡಿ, ತಾನು ನಯೀಮ್ ಎಂಬುವವರ ಜತೆಗೆ ಗೋವಾಕ್ಕೆ ಹೋಗುತ್ತಿರುವುದಾಗಿ ತಿಳಿಸಿದ್ದ. ಇದರಿಂದ ನಯೀಮ್ ಮತ್ತು ಆತನ ಸ್ನೇಹಿತರು ಸೇರಿಕೊಂಡು ನನ್ನ ಮಗನನ್ನು ಕೊಲೆ ಮಾಡಿ, ಇಲ್ಲಿಗೆ ತಂದು ಕಮರಿಗೆ ತಂದು ದೂಡಿ, ವಾಹನವನ್ನು ಸುಟ್ಟು ಹಾಕಿರುವ ಶಂಕೆ ಇದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಬಿಎನ್‌ಎಸ್ ಕಾಯ್ದೆಯಂತೆ ಕೊಲೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಹೊನ್ನಾವರ ಪ್ರಕರಣದ ನೆರಳು:

ಸಿದ್ದಾಪುರದ ಸಹೋದರರಿಬ್ಬರನ್ನು ಅದೇ ಊರಿನ ವ್ಯಕ್ತಿ ವಿಷ ಕುಡಿಸಿ, ಕೊಲೆ ಮಾಡಿ, ಅವರನ್ನು ಕಾರಿನಲ್ಲಿ ಕೂರಿಸಿಕೊಂಡು ಬಂದು ಹೊನ್ನಾವರ ಸುಳಿಮುರ್ಕಿ ಬಳಿ ತಗ್ಗಿಗೆ ದೂಡಿ ಕೊಲೆ ಮಾಡಿದ್ದ. ಮೊದಲು ಅಪಘಾತ ಎಂದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಂತರ ತನಿಖೆ ನಡೆಸಿ, ಪ್ರಕರಣವನ್ನು ಬಯಲು ಮಾಡಿದ್ದರು. ಹಲವರನ್ನು ಬಂಧಿಸಿ, ತನಿಖೆ ನಡೆಸುತ್ತಿದ್ದಾರೆ. ಈಗ ಅದೇ ಮಾದರಿಯ ಮತ್ತೊಂದು ಅಪರಾಧ ಪ್ರಕರಣ ನಡೆಯಿತೇ ಎಂಬ ಅನುಮಾನ ಮೂಡಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net