ಮುಖ್ಯಮಂತ್ರಿ Chief Minister ಖುರ್ಚಿ ಖಾಲಿ ಇಲ್ಲ

ಶಿರಸಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಲುವಾಗಿ ನಗರಕ್ಕೆ ಸೋಮವಾರ ಆಗಮಿಸಿದ ಅವರು ಮಾಧ್ಯಮದೊಂದಿಗೆ ಮಾತನಾಡಿದರು,
ಶಿರಸಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಲುವಾಗಿ ನಗರಕ್ಕೆ ಸೋಮವಾರ ಆಗಮಿಸಿದ ಅವರು ಮಾಧ್ಯಮದೊಂದಿಗೆ ಮಾತನಾಡಿದರು,
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಆರ್. ವಿ. ದೇಶಪಾಂಡೆ ಹೇಳಿಕೆ
  • ನಾಯಕತ್ವ ಬದಲಾವಣೆಗೆ ಬಿದ್ದಿದೆ ಪೂರ್ಣ ವಿರಾಮ
  • ಹೈ ಕಮಾಂಡ್ ನಿರ್ಧಾರ ಅಂತಿಮ
ಶಿರಸಿ: ಮುಖ್ಯಮಂತ್ರಿ (Chief Minister) ಬದಲಾವಣೆ ವಿಷಯ ಈಗ ಮುಗಿದ ಪರ್ವ. ಉಪಮುಖ್ಯಮಂತ್ರಿ ಮತ್ತು ಮುಖ್ಯಮಂತ್ರಿಗಳು ಕುಳಿತು ಬ್ರೆಕ್ ಫಾಸ್ಟ್ ಮೀಟಿಂಗ್ ಮೂಲಕ ಒಂದು ನಿರ್ಣಯಕ್ಕೆ ಬಂದಿದ್ದಾರೆ. ನಾಯಕತ್ವ ಬದಲಾವಣೆ ಬಗ್ಗೆ ಪೂರ್ಣ ವಿರಾಮ ಈಗಾಗಲೇ ಬಿದ್ದಿದೆ. ಹೀಗಾಗಿ, ಈ ಬಗ್ಗೆ ಪದೇಪದೆ ಮಾತನಾಡುವುದು ಸರಿಯಲ್ಲ ಎಂದು ಸಂಸದೀಯ ಸುಧಾರಣಾ ಆಯೋಗದ ಅಧ್ಯಕ್ಷ ಆರ್. ವಿ. ದೇಶಪಾಂಡೆ ಹೇಳಿದರು.
ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಲುವಾಗಿ ನಗರಕ್ಕೆ ಸೋಮವಾರ ಆಗಮಿಸಿದ ಅವರು ಮಾಧ್ಯಮದೊಂದಿಗೆ ಮಾತನಾಡಿ, ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ ಎಂದು ಹೇಳುವುದು ಸತ್ಯಕ್ಕೆ ದೂರದ ವಿಚಾರ. ಅಭಿವೃದ್ಧಿಯ ಬಗ್ಗೆ ಜನರ ಅಪೇಕ್ಷೆ ಜಾಸ್ತಿ ಇರಬಹುದು, ಆದರೆ, ಎಲ್ಲ ಶಾಸಕರಿಗೂ ಅನುದಾನ ನೀಡುತ್ತಿದ್ದಾರೆ. ಸಿದ್ದರಾಮಯ್ಯ ನಾಯಕತ್ವದಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡಿದ್ದು ಬಡವರು, ಮಹಿಳೆಯರ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಿತಿ ಹೆಚ್ಚಳಕ್ಕೆ ಕಾರಣವಾಗಿದೆ ಎಂದರು.
ಡಿಕೆಶಿ, ಸಿದ್ದರಾಮಯ್ಯ ಬ್ರೆಕ್ ಫಾಸ್ಟ್ ಮಾತುಕತೆ ಮೂಲಕ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಯಾರು ಮುಖ್ಯಮಂತ್ರಿ ಆಗಬೇಕು ಎಂಬುದನ್ನು ಹೈ ಕಮಾಂಡ್ ನಿರ್ಧಾರ ಮಾಡುತ್ತದೆ. ಇಂದು ಮುಖ್ಯಮಂತ್ರಿ ಖುರ್ಚಿ ಖಾಲಿ ಇಲ್ಲ. ಹೀಗಾಗಿ, ಮುಖ್ಯಮಂತ್ರಿ ನಾನಾಗುತ್ತೇನೆ, ಅವನಾಗಲಿ ಎಂಬಂಥ ಮಾತುಗಳು ಎಂಬುದು ಸರಿ ಅಲ್ಲ ಎಂದರು.
ಸೋನಿಯಾಗಾಂಧಿ ವಿರುದ್ಧ ಮತ್ತು ರಾಹಲ್ ವಿರುದ್ಧ ಪುನಃ ನ್ಯಾಶನಲ್ ಹೆರಾಲ್ಡ್ ಕೇಸ್‌ನಲ್ಲಿ ಇಡಿಯವರು ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಯಾವ ಹುರುಳಿಲ್ಲ. 2 ಸಾವಿರ ಕೋಟಿ ರೂ. ಹಣ ದುರುಪಯೋಗವಾಗಿದೆ ಎಂದು ಈ ನಾಯಕರ ವಿರುದ್ಧ ಎಫ್‌ಐಆರ್ ಮಾಡಲಾಗಿದೆ. ಇಷ್ಟು ಕೆಳಮಟ್ಟಕ್ಕೆ ಇಡಿ ಇಳಿಯುತ್ತದೆ ಎಂದು ಎಣಿಸಿರಲಿಲ್ಲ, ಇದು ಖಂಡನಾರ್ಹ.
ಪುನಃ ಪುನಃ ಇಡಿಯವರು ಏಕೆ ಈ ವಿಷಯ ಪ್ರಸ್ತಾಪ ಮಾಡುತ್ತಾರೆ ಎಂಬುದೂ ಅರ್ಥವಾಗುತ್ತಿಲ್ಲ. ರಾಹುಲ್ ಗಾಂಧಿ ದೇಶಾದ್ಯಂತ ಸಂಚರಿಸಿ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬಲು ಯತ್ನಿಸುತ್ತಿರುವುದೂ ಇದಕ್ಕೆ ಕಾರಣವಾಗಿರಬಹುದು ಎಂದರು.
ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಸಮಸ್ಯೆ ಕರಾವಳಿ ಸಮಸ್ಯೆ ಬಗ್ಗೆ ಪ್ರಾಧಾನ್ಯತೆ ನೀಡಬೇಕಿದೆ. ಈ ವಿಷಯದಲ್ಲಿ ನಾನೂ ಚರ್ಚೆ ಮಾಡುತ್ತೇನೆ. ಜಿಪಂ, ತಾಪಂ, ಗ್ರಾಪಂ, ಪುರಸಭೆಗಳ ಚುನಾವಣೆ ಆದಷ್ಟು ಬೇಕು ಎಂಬುದು ಸರ್ಕಾರದ ಇಚ್ಛೆ ಆಗಿದೆ. ಜನ ಪ್ರತಿನಿಧಿಗಳ ಆಡಳಿತದ ಸಂಸ್ಥೆ ಖಾಲಿ ಇರಬಾರದು. ಇದರಿಂದಾಗಿ ಸಮರ್ಪಕ ಆಡಳಿತ ಸಹ ಸಾಧ್ಯವಿಲ್ಲ. ಸರ್ಕಾರ ಆದಷ್ಟು ಬೇಗ ಚುನಾವಣೆ ಮಾಡುತ್ತದೆ ಎಂಬ ಭರವಸೆ ಇದೆ ಎಂದರು.
ನದಿ ತಿರುವು ಯೋಜನೆ ವಿರೋಧಿಸಿ ಸ್ವಾಮೀಜಿಯವರು ಹೋರಾಟ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೂ ತಂದಿದ್ದೇನೆ. ಯೋಜನೆಯ ಲಾಭ ಹಾನಿಯ ಬಗ್ಗೆ ಮೊದಲು ತಿಳಿದುಕೊಳ್ಳಬೇಕು, ಆ ಬಳಿಕವೇ ಮುಂದಿನ ಹೆಜ್ಜೆ ಇಡಬೇಕು.
ಜಿಲ್ಲೆಯಲ್ಲಿ ಈಗಾಗಲೇ ಕಾಳಿ ಯೋಜನೆಗಳು, ಕೈಗಾ ಅಣುಸ್ಥಾವರ ಸೇರಿದಂತೆ ಹಲವಾರು ಯೋಜನೆಗಳು ಬಂದಿವೆ. ನಿಸರ್ಗದ ಜೊತೆ ಎಂದಿಗೂ ಜಗಳವಾಡಬಾರದು. ನಾವು ಈಗಾಗಲೇ ದಾಂಡೇಲಿಯಿಂದ ಹಳಿಯಾಳದ ಗ್ರಾಮಾಂತರ ಪ್ರದೇಶಕ್ಕೆ ನೀರು ಒಯ್ದಿದ್ದೇವೆ.
ಈ ಯೋಜನೆಯಲ್ಲಿ ಯಾವುದೇ ರೈತರಿಗೆ ತೊಂದರೆ ಆಗಿಲ್ಲ. ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ಆದರೆ, ದೊಡ್ಡ ದೊಡ್ಡ ಯೋಜನೆಗಳನ್ನು ಅನುಷ್ಠಾನಗೊಳಿಸುವಾಗ ದುಷ್ಪರಿಣಾಮಗಳ ಬಗ್ಗೆಯೂ ಯೋಚಿಸಬೇಕಾಗುತ್ತದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net