ಮೊದಲ ದಿನವೇ ಶಿಕ್ಷಕರಿಗೆ ಶಾಕ್‌ ಕೊಟ್ಟ ಇಲಾಖೆ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಕಾರವಾರ: ಮೊಬೈಲ್ ಅಪ್ಲಿಕೇಶನ್ ಮೂಲಕ ಹಾಜರಾತಿ ದಾಖಲಿಸದ ಧಾರವಾಡ ಆಯುಕ್ತಾಲಯದ 3,837 ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿಗೆ ಮೊದಲ ದಿನವೇ ಶಾಲಾ ಶಿಕ್ಷಣ ಇಲಾಖೆ ಅಪರ ಆಯುಕ್ತ ಈಶ್ವರ ಉಳ್ಳಾಗಡ್ಡಿ ಅವರು ಖಡಕ್ ಕ್ರಮ ವಹಿಸಿದ್ದು, ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.
ಶಾಲೆಗಳಲ್ಲಿ ಶಿಕ್ಷಕರ ಹಾಜರಾತಿ ಖಚಿತ ಮಾಡಿಕೊಳ್ಳುವ ಸಲುವಾಗಿ ಶಾಲಾ ಶಿಕ್ಷಣ ಇಲಾಖೆ ಕರ್ನಾಟಕ ಅಡ್ವಾನ್ಸ್ಡ್ ಅಟೆಂಡೆಂನ್ಸ್ ಮ್ಯಾನೇಜ್‌ಮೆಂಟ್ ಸಿಸ್ಟಂ (ಕರ್ತವ್ಯ-ಕೆಎಎಎಂಎಸ್)ಎಂಬ ಮೊಬೈಲ್ ಆ್ಯಪ್ ಆಧಾರಿತ ಹಾಜರಾತಿ ವ್ಯವಸ್ಥೆಯನ್ನು ಜಾರಿಗೊಳಿಸಿದೆ.
ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಗಳ ಕಾಯಂ ಶಿಕ್ಷಕರು ತತ್ಸಮಾನ ಸಿಬ್ಬಂದಿ, ಎಲ್ಲ ಕಚೇರಿಗಳಲ್ಲಿನ ಕಾಯಂ ಬೋಧಕೇತರ ಸಿಬ್ಬಂದಿ, ತಮ್ಮ ಕರ್ತವ್ಯದ ಸ್ಥಳ, ತರಬೇತಿ ಕೇಂದ್ರ ಹಾಗೂ ಮೌಲ್ಯಮಾಪನದ ಸ್ಥಳಗಳಲ್ಲಿ ಕಡ್ಡಾಯವಾಗಿ ದಿನಕ್ಕೆ 2 ಬಾರಿ ಹಾಜರಾತಿ ಹಾಕಬೇಕು ಎಂದು ಆದೇಶ ಹೊರಡಿಸಲಾಗಿತ್ತು. ಈ ಹಾಜರಾತಿಯನ್ನೇ ಹಾಜರಾತಿ ಸಂಬAಽತ ಎಲ್ಲ ಸೌಲಭ್ಯಗಳಿಗೆ ಪರಿಗಣಿಸಲಾಗುವುದು ಎಂದು ಎಚ್ಚರಿಸಲಾಗಿತ್ತು.
ಈ ಕುರಿತು ಡಿಡಿಪಿಐಗಳ ಸಭೆಯಲ್ಲಿಯೂ ಎಚ್ಚರಿಸಲಾಗಿತ್ತು. ಈ ಕುರಿತು ಕೈಗೊಂಡ ಕ್ರಮಗಳನ್ನು ಸಭೆಗ ತಿಳಿಸಲು ಸೂಚಿಸಲಾಗಿತ್ತು.
ಧಾರವಾಡ ಆಯುಕ್ತಾಲಯದ ವ್ಯಾಪ್ತಿಯ 9 ಶೈಕ್ಷಣಿಕ ಜಿಲ್ಲೆಗಳಲ್ಲಿ 53416 ನೌಕರರು ಅಪ್ಲಿಕೇಶನ್ ಮೂಲಕ ಹಾಜರಾತಿ ದಾಖಲಿಸಬೇಕಿತ್ತು. 49579 (ಶೇ.93.92)ನೌಕರರು ಮೊಬೈಲ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ ನೋಂದಣಿ ಮಾಡಿಕೊಂಡಿದ್ದಾರೆ. ಜೂನ್ 1 ರಂದು 35731(ಶೇ.71.11) ನೌಕರರು ಅದೇ ವ್ಯವಸ್ಥೆಯಲ್ಲಿ ಹಾಜರಾತಿ ಹಾಕಿದ್ದಾರೆ. ಆದರೆ, ಇನ್ನೂ 3837 ಜನ ನೋಂದಣಿಯನ್ನೂ ಮಾಡಿಕೊಂಡಿಲ್ಲ ಎನ್ನಲಾಗಿದೆ.
ಹೀಗಾಗಿ ಶಾಲಾ ಶಿಕ್ಷಣ ಇಲಾಖೆಯ ಧಾರವಾಡದ ಅಪರ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಅವರು ಎಲ್ಲರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿ, ಸರ್ಕಾರದ ಹಾಗೂ ಇಲಾಖೆಯ ಆದೇಶವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಉದಾಸೀನ ತೋರುತ್ತಿರುವುದು ಕಂಡುಬಂದಿದೆ. ಇದು ಕರ್ತವ್ಯ ಲೋಪವಾಗಿದ್ದು, ನಿಮ್ಮ ಮೇಲೆ ಶಿಸ್ತು ಕ್ರಮಕ್ಕೆ ಏಕೆ ಶಿಫಾರಸು ಮಾಡಬಾರದು ಎಂದು ಪ್ರಶ್ನಿಸಿದ್ದಾರೆ. ನೋಟಿಸ್ ತಲುಪಿದ ಐದು ದಿನದಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಂಡು ಲಿಖಿತ ದಾಖಲೆಗಳನ್ನು ತಲುಪಿಸದಿದ್ದರೆ ಕ್ರಮ ವಹಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ವಿವಿಧ ಸಮಸ್ಯೆ
ನೆಟ್ವರ್ಕ್ ಇಲ್ಲದೇ ಇದ್ದರೂ ಆ್ಯಪ್ ಕಾರ್ಯ ನಿರ್ವಹಿಸುತ್ತದೆ ಎಂದು ಇಲಾಖೆ ಹೇಳುತ್ತದೆ. ಆದರೆ, ವಾಸ್ತವವಾಗಿ ನೆಟ್ವರ್ಕ್ ಇಲ್ಲದ ಕಡೆ ಕಾರ್ಯ ನಿರ್ವಹಿಸುತ್ತಿಲ್ಲ. ಆ್ಯಪ್ ಡೌನ್‌ಲೋಡ್ ಆಗಿದ್ದರೂ ಫೇಸ್ ರೆಕಗ್ನಐಸ್ ಆಗುವುದಿಲ್ಲ ಎಂದು ಆ್ಯಪ್ ಹೇಳುತ್ತದೆ. ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ನೆಟ್ವರ್ಕ್ ಸಮಸ್ಯೆ ಇದೆ. ಅಂಥಲ್ಲಿ ಹಾಜರಾತಿ ಹಾಕುವುದೇ ಶಿಕ್ಷಕರಿಗೆ ದೊಡ್ಡ ಕಾರ್ಯವಾಗಿದೆ ಎಂದು ಶಿಕ್ಷಕರು ಗೋಳು ತೋಡಿಕೊಳ್ಳುತ್ತಿದ್ದಾರೆ.

ಜಿಲ್ಲಾ ವಾರು ಆ್ಯಪ್ ನೋಂದಣಿ ಮಾಡಿಕೊಂಡ ನೌಕರರ ಸಂಖ್ಯೆ

ಜಿಲ್ಲೆ ನೌಕರರ ಸಂಖ್ಯೆ ಆ್ಯಪ್‌ನಲ್ಲಿ ನೋಂದಣಿ ಮಾಡಿಕೊಂಡವರು ನೋಂದಣಿ ಮಾಡಿಕೊಳ್ಳದವರು

  • ಬಾಗಲಕೋಟೆ 7380 6976 404
  • ಬೆಳಗಾವಿ, ಚಿಕ್ಕೋಡಿ 15382 13911 1471
  • ಧಾರವಾಡ 5323 4903 420
  • ಗದಗ 3917 3892 25
  • ಹಾವೇರಿ 5969 5669 300
  • ಉತ್ತರ ಕನ್ನಡ, ಶಿರಸಿ 6158 5996 162
  • ವಿಜಯಪುರ 9287 8232 1055
"

ಆ್ಯಪ್ ಹಾಜರಾತಿಯಿಂದ ತೀವ್ರ ಸಮಸ್ಯೆ ಇರುವ ಬಗ್ಗೆ ನಾವು ರಾಜ್ಯ ಸಂಘಕ್ಕೆ ಲಿಖಿತವಾಗಿಯೇ ಪತ್ರ ಬರೆದು ತಿಳಿಸಿದ್ದೇವೆ. ಎಲ್ಲವನ್ನು ಸರಿ ಮಾಡಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.

ಎಂ.ಜಿ.ನಾಯ್ಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ



ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net