ವಸತಿ ಶಾಲೆ ವಿದ್ಯಾರ್ಥಿ ಅನುಮಾನಾಸ್ಪದ ಸಾವು ಶಿಕ್ಷಕನ ಬಂಧನ

ಶಿಕ್ಷಕ ಅಬ್ಬು ತಲಾ
ಶಿಕ್ಷಕ ಅಬ್ಬು ತಲಾ
Published on

ಪ್ರಮುಖ ಮುಖ್ಯಾಂಶಗಳು

  • ಮೃತನ ತಾಯಿಯಿಂದ ಕೊಲೆ ಪ್ರಕರಣ ದಾಖಲು
  • ಶಾಲೆಯ ಹಿಂದಿ ಶಿಕ್ಷಕನ ಬಂಧನ
  • ವಿದ್ಯಾರ್ಥಿನಿಯೊಂದಿಗೆ ದುರ್ವ್ಯವಹಾರ ಆರೋಪ
ಸಿದ್ದಾಪುರ: ಕಾನಸೂರು ಇಂದಿರಾಗಾಂಧಿ ವಸತಿ ಶಾಲೆಯ 10 ನೇ ತರಗತಿ ವಿದ್ಯಾರ್ಥಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷಕ ಅಬ್ಬು ತಲಾ ಎಂಬುವವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಹುತ್ತಗಾರ ಗ್ರಾಮದ ವಿದ್ಯಾರ್ಥಿ ಗೋಕುಲ ಗೌಡ ವಸತಿ ಶಾಲೆಯಲ್ಲಿ 10 ನೇ ತರಗತಿ ಓದುತ್ತಿದ್ದ. ಜೂನ್ 9 ರಂದು ಆತ ಬಾತ್ ರೂಂನಲ್ಲಿ ನೇಣು ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ, ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ಆತ ಮೃತಪಟ್ಟಿದ್ದ. ಮೊದಲು ಬಾಲಕನ ತಂದೆ ನೀಡಿದ ದೂರಿನ ಮೇರೆಗೆ ಅನುಮಾನಾಸ್ಪದ ಸಾವಿನ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ಜೂನ್ 23 ರಂದು ಮೃತನ ತಾಯಿ ಜಯಶ್ರೀ ಗೌಡ ಪ್ರತ್ಯೇಕ ದೂರು ನೀಡಿ, ತನ್ನ ಮಗನದ್ದು ಆತ್ಮಹತ್ಯೆಯಲ್ಲ. ಕೊಲೆಯಾಗಿರುವ ಅನುಮಾನವಿದೆ ಎಂದು ಶಿಕ್ಷಕ ಹಾಗೂ ಪ್ರಭಾರ ನಿಲಯ ಪಾಲಕ ಅಬ್ಬು ತಲಾ ವಿರುದ್ಧ ಆರೋಪ ಮಾಡಿದ್ದರು.

ಹಿನ್ನೆಲೆ

ಜೂನ್ 9 ರಂದು ಶಾಲೆಯ 10 ನೇ ತರಗತಿ ವಿದ್ಯಾರ್ಥಿ ಹುತ್ತಗಾರಿನ ಗೋಕುಲ ಕೃಷ್ಣ ಗೌಡ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ. ಆತ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅನುಮಾನವಿದ್ದು, ತನಿಖೆ ಕೈಗೊಳ್ಳುವಂತೆ ಸಾಕಷ್ಟು ಪ್ರತಿಭಟನೆಗಳು ನಡೆಸಿದ್ದವು. ನಂತರ ಪ್ರಭಾರ ಪ್ರಾಂಶುಪಾಲ ಜಾವೇದ್ ಹಾಗೂ ನಿಲಯ ಪಾಲಕ ಅಬ್ಬು ತಲಾ ಅವರನ್ನು ಅಮಾನತು ಮಾಡಿ, ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಎಂಡಿ ಆದೇಶ ಹೊರಡಿಸಿದ್ದರು. ಶಿರಸಿ ಬದಲು ಕಾರವಾರ ಡಿವೈಎಸ್‌ಪಿ ಗಿರೀಶ ಎಸ್.ವಿ.ಅವರನ್ನು ತನಿಖಾಧಿಕಾರಿಯನ್ನಾಗಿ ನೇಮಿಸಲಾಗಿತ್ತು.
ತನಿಖೆ ಮುಂದುವರಿದಿದ್ದು, ಮಂಗಳವಾರ ಮೃತ ವಿದ್ಯಾರ್ಥಿಯ ತಾಯಿ ಜಯಶ್ರೀ ಕೃಷ್ಣ ಗೌಡ ಅವರಿಂದ ದೂರು ಪಡೆದು ಎಫ್‌ಐಆರ್‌ನಲ್ಲಿ ಹಿಂದಿ ಶಿಕ್ಷಕ ಹಾಗೂ ಪ್ರಭಾರ ನಿಲಯ ಪಾಲಕ ಅಬ್ಬು ತಲಾ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ. ಕೊಲೆ (ಬಿಎನ್‌ಎಸ್‌ಎಸ್-103) ಹಾಗೂ ಅಪ್ರಾಪ್ತರ ಮೇಲೆ ಕ್ರೂರತೆ (ಜೆಜೆ ಆ್ಯಕ್ಟ್ ಸೆಕ್ಷನ್ 75 ನ್ನು )ಸೆಕ್ಷನ್‌ಗಳನ್ನು ಸೇರಿಸಲಾಗಿದೆ.

ಎಫ್‌ಐಆರ್‌ನಲ್ಲಿ ಏನಿದೆ..?

ಗೋಕುಲ್ 2 ವರ್ಷದಿಂದ ಶಾಲೆಯಲ್ಲಿ ಓದುತ್ತಿದ್ದ. ಒಂದು ದಿನ ಭೇಟಿಯಾಗಲು ಶಾಲೆಗೆ ಹೋದಾಗ ಆತನ ಕುತ್ತಿಗೆ ಬಳಿ ಊದಿಕೊಂಡಿತ್ತು. ಏಕೆಂದು ಕೇಳಿದರೆ ಹುಡುಗ ಏನೂ ಹೇಳಿರಲಿಲ್ಲ. ನಂತರ ಬೇಸಿಗೆ ರಜೆಗೆ ಮನೆಗೆ ಬಂದಾಗ ಕೇಳಿದಾಗ. `ಅಬ್ಬು ಸರ್ ಬಾತ್‌ರೂಂ ಬಳಿ 9 ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳ ಜೊತೆ ಅಸಭ್ಯವಾಗಿ ವರ್ತಿಸುತ್ತಿರುವುದನ್ನು ನಾನು ನೋಡಿದ್ದೆ. ಸರ್ ಅದನ್ನು ಗಮನಿಸಿ, ನನ್ನ ಕುತ್ತಿಗೆ ಒತ್ತಿ ಹಿಡಿದಿದ್ದರು. ನೀನು ಯಾರಿಗಾದರೂ ಈ ವಿಷಯವನ್ನು ಹೇಳಿದರೆ, ನಿನ್ನನ್ನು ಸಾಯಿಸಿಬಿಡುತ್ತೇನೆ ಎಂದು ಬೆದರಿಕೆ ಹಾಕಿದ್ದರು.' ಎಂದು ಗೋಕುಲ್ ತಿಳಿಸಿದ್ದ ಎಂದು ತಾಯಿ ದೂರಿನಲ್ಲಿ ತಿಳಿಸಿದ್ದಾರೆ.
ಅಬ್ಬು ಸರ್ ಈ ಹಿಂದೆ ಹಾರ್ಸಿಕಟ್ಟಾ ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿಯ ಜೊತೆ ಅಸಭ್ಯವಾಗಿ ವರ್ತಿಸಿ ವರ್ಗಾವಣೆಯಾಗಿದ್ದಾರೆ ಎಂದು ನನ್ನ ಹಿರಿಯ ಮಗ ತಿಳಿಸಿದ್ದ. ಗೋಕುಲ್ ಸಾಯುವ ಸಮಯಕ್ಕೆ ಇಡೀ ಊರಿನಲ್ಲಿ ಕರೆಂಟ್ ಇದ್ದರೂ ಹಾಸ್ಟೆಲ್‌ನಲ್ಲಿ ಮಾತ್ರ ಕರೆಂಟ್ ಇರಲಿಲ್ಲ. ಅವರ ಅಸಭ್ಯ ವರ್ತನೆಯನ್ನು ನನ್ನ ಮಗ ಮತ್ತೆ ನೋಡಿರಬಹುದು. ಯಾರಿಗಾದರೂ ಹೇಳಿದರೆ ಎಂಬ ಭಯದಿಂದ ಅವರು ನನ್ನ ಮಗನ ಸಾವಿಗೆ ಕಾರಣರಾಗಿರಬಹುದು ಎಂದು ತಾಯಿ ಅನುಮಾನ ವ್ಯಕ್ತಪಡಿಸಿದ್ದು, ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net