ಸಿದ್ದಾಪುರ ತಾಲೂಕಿನ ಹಲಗೇರಿಯಲ್ಲಿ ಆಯೋಜಿಸಿದ್ದ ಹಿಂದೂ (Hinduism) ಸಮಾವೇಶವನ್ನು ಶ್ರೀ ಬ್ರಹ್ಮಾನಂದ ಭಾರತಿ ಸ್ವಾಮೀಜಿ ಉದ್ಘಾಟಿಸಿದರು.
Published on:
Copied
Follow Us
ಸಿದ್ದಾಪುರ: ಸನಾತನ ಧರ್ಮವನ್ನು ಯಾರೂ ಹುಟ್ಟುಹಾಕಿಲ್ಲ. ಅದರಂತೆ ಸನಾತನ ಧರ್ಮಕ್ಕೆ ಸಾವಿಲ್ಲ. ಸನಾತನ ಧರ್ಮ Hinduism ಸತ್ಯವನ್ನು ಹೇಳುತ್ತದೆ. ಶಾಂತಿ, ನೆಮ್ಮದಿ ಸಿಗುವುದು ಸನಾತನ ಧರ್ಮದಲ್ಲಿ. ನಮ್ಮ ಸಂತರು ದೇವರನ್ನು ಕಂಡುಕೊಂಡವರಲ್ಲ. ಸಾಕ್ಷಾತ್ಕರಿಸಿಕೊಂಡವರು ಎಂದು ಶಿರಳಗಿಯ ಚೈತನ್ಯ ರಾಜಾರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಭಾರತಿ ಸ್ವಾಮೀಜಿ ಹೇಳಿದರು.
ತಾಲೂಕಿನ ಹಲಗೇರಿ ದೇವಾಲಯದಲ್ಲಿ ಆಯೋಜಿಸಿದ್ದ ಹಿಂದೂ ಸಮಾವೇಶದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಜಗತ್ತು ಧರ್ಮದ ಆಧಾರದ ಮೇಲೆ ನಡೆಯುತ್ತಿದೆ. ಪ್ರತಿಯೊಂದು ಪ್ರಾಣಿಗಳಿಗೂ ಅದರದೇ ಧರ್ಮ ಇದೆ. ಉದ್ದೇಶಪೂರ್ವಕವಾಗಿ ಸನಾತನ ಶಿಕ್ಷಣ ಬದಿಗಿಡಲಾಗಿದೆ. ಆದರೆ, ಶಾಲೆಗಳಲ್ಲಿ ಸನಾತನ ಶಿಕ್ಷಣ ಇಲ್ಲ. ನಾವೇ ನಮ್ಮ ಮಕ್ಕಳಿಗೆ ಸನಾತನ ಧರ್ಮದ ಶಿಕ್ಷಣ, ಸಂಸ್ಕೃತಿ ಹಾಗೂ ಸಂಸ್ಕಾರದ ಬಗ್ಗೆ ತಿಳಿಸಬೇಕು. ಯಾರು ಸನಾತನ ಧರ್ಮ, ದೇಶವನ್ನು ಗೌರವಿಸುತ್ತಾನೋ ಯಾರಿಗೆ ವಂದೇ ಮಾತರಂ ಹೇಳಲು ಹೆಮ್ಮೆ ಇದೆಯೋ ಅಂಥವರನ್ನು ಗೌರವಿಸೋಣ ಎಂದರು.
ದಿಕ್ಸೂಚಿ ಭಾಷಣ ಮಾಡಿದ ರಾಷ್ಟ್ರಗೋರಕ್ಷಣಾ ಪಡೆಯ ಸಂಸ್ಥಾಪಕ ಪುನೀತ ಕೆರೆಹಳ್ಳಿ , ರಾಷ್ಟ್ರದ ಹೊರತು ಬೇರೆ ಧರ್ಮ ಇಲ್ಲ. ಎನ್ನುವ ಸಿದ್ಧಾಂತವನ್ನು ಹೊಂದಿರುವುದು ನಮ್ಮ ಸನಾತನ ಧರ್ಮ. ನಮ್ಮ ಧರ್ಮ ನಮ್ಮ ಹೆಮ್ಮೆ ಎನ್ನುವುದನ್ನು ನಾವು ನಮ್ಮ ಮಕ್ಕಳಿಗೆ ತಿಳಿಸಿಕೊಡುವ ಜವಾಬ್ದಾರಿ ನಮ್ಮ ಮೇಲಿದೆ. ನಮ್ಮ ಸಂಸ್ಕೃತಿ, ಪರಂಪರೆಯ ಬಗ್ಗೆ ಜಾಗೃತಿ ಮೂಡಿಸುವ ಶಿಕ್ಷಣ ನೀಡಬೇಕಾಗಿದೆ ಎಂದರು.
ಹಿಂದೂ ಸಮಾವೇಶ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ವೀರಭದ್ರ ಹುಚ್ಚ ನಾಯ್ಕ ಸುಂಕತ್ತಿ ಹಾಗೂ ಅಮೃತ ಎಸ್. ಹೆಗಡೆ ಕಿಲಾರ ಉಪಸ್ಥಿತರಿದ್ದರು. ಚಂದ್ರಶೇಖರ ಕೊಡಿಯಾ, ಶ್ರೀಧರ ನಾಯ್ಕ, ರವಿ ನಾಯ್ಕ, ಮಂಜುನಾಥ ನಾಯ್ಕ, ನಾಗರಾಜ ನಾಯ್ಕ ಇತರರು ಕಾರ್ಯಕ್ರಮ ನಿರ್ವಹಿಸಿದರು.
ಕಾರ್ಯಕ್ರಮದ ಪೂರ್ವದಲ್ಲಿ ಸುಂಕತ್ತಿ ಶಾಲಾ ಮೈದಾನದಿಂದ ಹಲಗೇರಿ ದೇವಾಲಯದವರೆಗೆ ಶೋಭಾಯಾತ್ರೆ ನಡೆಯಿತು.