ಸತತ ಪರಿಶ್ರಮದಿಂದ ಯಶಸ್ಸು ಸಾಧ್ಯ

ಹಳಿಯಾಳ ಭಾಗದ ವಿದ್ಯಾರ್ಥಿಗಳಿಗೆ ಉದ್ಯೋಗ ನೀಡಿರುವ ಎಚ್.ಎಸ್. ಹಳ್ಳಿಕೇರಿ ಮತ್ತು ನಾರಾಯಣ ಟೋಸೂರ ಅವರನ್ನು ಮಹಾವಿದ್ಯಾಲಯದ ಪರವಾಗಿ ಗಣ್ಯರು ಸನ್ಮಾನಿಸಿದರು. ಶಾಸಕ ಆರ್.ವಿ. ದೇಶಪಾಂಡೆ ಇತರರಿದ್ದರು.
ಹಳಿಯಾಳ ಭಾಗದ ವಿದ್ಯಾರ್ಥಿಗಳಿಗೆ ಉದ್ಯೋಗ ನೀಡಿರುವ ಎಚ್.ಎಸ್. ಹಳ್ಳಿಕೇರಿ ಮತ್ತು ನಾರಾಯಣ ಟೋಸೂರ ಅವರನ್ನು ಮಹಾವಿದ್ಯಾಲಯದ ಪರವಾಗಿ ಗಣ್ಯರು ಸನ್ಮಾನಿಸಿದರು. ಶಾಸಕ ಆರ್.ವಿ. ದೇಶಪಾಂಡೆ ಇತರರಿದ್ದರು.
Published on
ಹಳಿಯಾಳ: ವಿದ್ಯಾರ್ಥಿಗಳು ಸತತ ಪರಿಶ್ರಮ ಹಾಗೂ ಸಮರ್ಪಣಾ ಭಾವದಿಂದ ವಿದ್ಯಾಭ್ಯಾಸ ಮಾಡಿದರೆ ಜೀವನದಲ್ಲಿ ಯಶಸ್ಸು ಖಂಡಿತವಾಗಿ ದೊರೆಯುತ್ತದೆ ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.
ಪಟ್ಟಣದ ಕೆಎಲ್‌ಎಸ್ ವಿಡಿಐಟಿ ಮಹಾವಿದ್ಯಾಲಯದಲ್ಲಿ ಸೋಮವಾರ ಎನ್‌ಫೀಲ್ಡ್ ತರಬೇತಿ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.
ಆಧುನಿಕ ತಂತ್ರಜ್ಞಾನದ ಅರಿವು ಹೊಂದಿ, ಕೈಗಾರಿಕಾ ಕ್ಷೇತ್ರದ ಸವಾಲುಗಳಿಗೆ ಪರಿಹಾರ ಒದಗಿಸಿ. ವಿಡಿಐಟಿಯು ಈ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಎರಡು ದಶಕದ ಸೇವೆ ಸಲ್ಲಿಸಿರುವುದು ಶ್ಲಾಘನೀಯ ಎಂದರು.
ರಾಯಲ್ ಎನ್‌ಫೀಲ್ಡ್ ದಕ್ಷಿಣ ಭಾರತ ವಿಭಾಗದ ಸೇವಾ ಮುಖ್ಯಸ್ಥ ಅನೂಪ್ ಜಿ.ಪಿ. ಮಾತನಾಡಿ, ವಿಡಿಐಟಿಯಲ್ಲಿ ತಮ್ಮ ಸಂಸ್ಥೆಯು ತರಬೇತಿ ಕೇಂದ್ರ ಸ್ಥಾಪಿಸಿ ಈ ಭಾಗದ ವಿದ್ಯಾರ್ಥಿಗಳ ಕೌಶಲ ಅಭಿವೃದ್ಧಿಗೆ ಮುಂದಾಗಿದೆ ಎಂದರು.
ಕೆಎಲ್ಎಸ್ ಆಡಳಿತ ಮಂಡಳಿ ಚೇರ್ಮನ್ ಎ.ಕೆ. ತಗಾರೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಯಲ್ ಎನ್‌ಫೀಲ್ಡ್ ತರಬೇತಿ ಘಟಕದ ಮುಖ್ಯಸ್ಥ ಕೆ. ರಂಗಸ್ವಾಮಿ, ಕೆಎಲ್‌ಎಸ್ ಆಡಳಿತ ಮಂಡಳಿ ಸದಸ್ಯ ಆರ್.ಎಸ್. ಮುತಾಲಿಕ್, ಎಚ್.ಎಸ್. ಹಳ್ಳಿಕೇರಿ, ಪ್ರಾಕ್ಸಿನ್ ಪ್ರೈ ಲಿ. ಮುಖ್ಯಸ್ಥ ನಾರಾಯಣ ಟೋಸೂರ, ಬಿಕೆಜಿ ಗ್ರೂಪ್ ಮುಖ್ಯಸ್ಥ ಪ್ರಮೋದ್ ಇದ್ದರು.
ವಿಡಿಐಟಿ ಪ್ರಾಚಾರ್ಯ ಡಾ. ವಿ.ಎ. ಕುಲಕರ್ಣಿ ಮಾತನಾಡಿ, ಕರ್ನಾಟಕದಲ್ಲಿ ರಾಯಲ್ ಎನ್‌ಫೀಲ್ಡ್ ತರಬೇತಿ ಕೇಂದ್ರ ಹೊಂದಿರುವ ಮೊಟ್ಟ ಮೊದಲ ವಿದ್ಯಾ ಸಂಸ್ಥೆ ಎಂಬ ಹೆಗ್ಗಳಿಕೆ ವಿಡಿಐಟಿಗೆ ಸಂದಿದೆ. ಉತ್ತರ ಕರ್ನಾಟಕ ಹಾಗೂ ಗೋವಾ ಭಾಗದ ರಾಯಲ್ ಎನ್‌ಫೀಲ್ಡ್ ಸಿಬ್ಬಂದಿ ಅಲ್ಲದೆ, ವಿಡಿಐಟಿ ವಿದ್ಯಾರ್ಥಿಗಳಿಗೆ ಇದೊಂದು ಉತ್ತಮ ವೇದಿಕೆಯಾಗಿದೆ ಎಂದರು.
ಹಳಿಯಾಳ ಭಾಗದ ವಿದ್ಯಾರ್ಥಿಗಳಿಗೆ ಉದ್ಯೋಗ ನೀಡಿರುವ ಎಚ್.ಎಸ್. ಹಳ್ಳಿಕೇರಿ ಮತ್ತು ನಾರಾಯಣ ಟೋಸೂರ ಅವರನ್ನುಮಹಾವಿದ್ಯಾಲಯದ ಪರವಾಗಿ ಸನ್ಮಾನಿಸಲಾಯಿತು. ಕೆಎಲ್ಎಸ್ ಪದವಿ ಕಾಲೇಜಿನ ಪ್ರಾಂಶುಪಾಲ ಶ್ರೀನಿವಾಸ ಪ್ರಭು ವಂದಿಸಿದರು. ಶೈಕ್ಷಣಿಕ, ಸಂಶೋಧನಾ ಹಾಗೂ ಅಭಿವೃದ್ಧಿ ಕ್ಷೇತ್ರದಲ್ಲಿ ಸಾಧನೆಗೈದ ಮಹಾವಿದ್ಯಾಲಯದ ಪ್ರಾಧ್ಯಾಪಕರನ್ನು ಪುರಸ್ಕಾರಿಸಲಾಯಿತು. ಪ್ರೊ. ಲಕ್ಷ್ಮೀ ಎಚ್. ರೋಹಿಣಿ ಕೆ., ಶ್ರೀಗೌರಿ ನಿರೂಪಿಸಿದರು. ಪ್ರೊ. ರಜತ್ ಆಚಾರ್ಯ ಮತ್ತು ಪ್ರೊ. ನವೀನ್ ಹಿರೇಮಠ ಕಾರ್ಯಕ್ರಮ ಸಂಯೋಜಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net