900 ವರ್ಷಗಳ ಹಳೆಯ ವೀರಗಲ್ಲಿನ ಅಧ್ಯಯನ

ವೀರಗಲ್ಲನ್ನು ಶ್ಯಾಮಸುಂದರ ಗೌಡ ಹಾಗೂ ತಂಡದವರು ಪರಿಶೀಲಿಸಿದರು.
ವೀರಗಲ್ಲನ್ನು ಶ್ಯಾಮಸುಂದರ ಗೌಡ ಹಾಗೂ ತಂಡದವರು ಪರಿಶೀಲಿಸಿದರು.
Published on
ಕಾರವಾರ: ಅಂಕೋಲಾದ ಅಗಸೂರು ಗ್ರಾಮ ಪಂಚಾಯಿತಿಯ ಸಂದ್ಕಣಿ ಗ್ರಾಮದ ಕಾಡಿನ ನಡುವೆ ಇರುವ ಹನ್ನೆರಡನೇ ಶತಮಾನದ ವೀರಗಲ್ಲೊಂದನ್ನು ಇತಿಹಾಸ ಸಂಶೋಧಕ ಶ್ಯಾಮಸುಂದರ ಗೌಡ ಗುರುತಿಸಿ ದಾಖಲಿಸಿದ್ದಾರೆ.
ಸಾಮಾನ್ಯ ಶಕ 1,070 ರಿಂದ 1,113 ರವರೆಗೆ ಸುಮಾರು 43 ವರ್ಷಗಳವರೆಗೆ ಅಂಕೋಲಾ, ಕುಮಟಾ, ಹೊನ್ನಾವರ, ಸಿದ್ದಾಪುರ ತಾಲೂಕಿನ ಭಾಗಗಳನ್ನು ಆಳಿದ ನಾಗವರ್ಮರಸನ ಕಾಲದ ಶಾಸನ ಇದಾಗಿದೆ ಎಂದು ಶ್ಯಾಮಸುಂದರ ಗೌಡ ಅವರು ಇದನ್ನು ಗುರುತಿಸಿ ವಿಶ್ಲೇಷಿಸಿದ್ದಾರೆ. ಮಾರುಗದ್ದೆ ಶಾಲೆಯ ಶಿಕ್ಷಕರಾದ ದಿವಾಕರ ದೇವನ್ಮನೆ, ನೀಲಕಂಠ ಗೌಡ ಹಾಗೂ ಸ್ಥಳೀಯರಾದ ಕೇಶವ ಭಂಡಾರಿ ಅವರುಗಳು ಶ್ಯಾಮಸುಂದರ ಗೌಡ ಅವರೊಂದಿಗೆ ಕ್ಷೇತ್ರ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ವೀರಗಲ್ಲಿನಲ್ಲೇನಿದೆ..?

ಈಗ ದೊರೆತಿರುವ ವೀರಗಲ್ಲಿನಲ್ಲಿ ಯಾವುದೇ ಶಾಸನವಿಲ್ಲ. ವೀರಗಲ್ಲು ಐದು ಅಡಿ ಎತ್ತರವಿದ್ದು 22 ಅಂಗುಲ ಅಗಲವಾಗಿದೆ. ಒಟ್ಟು ಏಳು ಪಟ್ಟಿಕೆಗಳಲ್ಲಿ ಇದನ್ನು ಚಿತ್ರಿಸಲಾಗಿದೆ. ನೆಲದ ಕಡೆಯಿಂದ ಮೊದಲನೇ ಪಟ್ಟಿಕೆಯಲ್ಲಿ ಖಡ್ಗಯುದ್ಧದ ಚಿತ್ರವನ್ನು, ಎರಡನೇ ಪಟ್ಟಿಕೆಯಲ್ಲಿ ತಾಳ, ಜಾಗಟೆ ಮೃದಂಗ ಇತ್ಯಾದಿಗಳನ್ನು ಬಾರಿಸುತ್ತಿರುವ ವಾದ್ಯವೃಂದದವರನ್ನು, ಮೂರನೇ ಪಟ್ಟಿಕೆಯಲ್ಲಿ ಬಿಲ್ಯುದ್ಧದ ಚಿತ್ರವನ್ನು ತೋರಿಸಲಾಗಿದೆ. ನಾಲ್ಕನೇ ಪಟ್ಟಿಕೆಯಲ್ಲಿ ವಾನರ ಮತ್ತು ದಾನವರ ನಡುವೆ ಯುದ್ಧ ನಡೆಯುತ್ತಿರುವಂತೆ ಚಿತ್ರಿಸಲಾಗಿದೆ. ಐದನೆಯ ಪಟ್ಟಿಯ ಅರ್ಧಭಾಗದಲ್ಲಿ ರತಿಕ್ರೀಡಾ ನಿರತ ದಂಪತಿ ಶಿಲ್ಪವನ್ನು ಇನ್ನರ್ಧ ಭಾಗದಲ್ಲಿ ಮಂಟಪ ಒಂದರಲ್ಲಿ ವಾನರ ದಂಪತಿಗಳಿಬ್ಬರು ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಿರುವಂತೆಯು ಚಿತ್ರಿಸಲಾಗಿದೆ. ವೀರಗಲ್ಲೊಂದರಲ್ಲಿ ವಾನರರು ಶಿವಲಿಂಗಕ್ಕೆ ಅಭಿಷೇಕ ಮಾಡುವ ಶಿಲ್ಪ ಈ ಹಿಂದೆ ಬೇರೆಲ್ಲಿಯೂ ದೊರೆತ ಉದಾಹರಣೆಗಳಿಲ್ಲ. ಇದೊಂದು ಅಪರೂಪದ ಶಿಲ್ಪವಾಗಿದೆ. ಅದರ ಮೇಲಿನ ಆರನೆಯ ಪಟ್ಟಿಯಲ್ಲಿ ವೀರನೊಬ್ಬ ಕುದುರೆ ಸವಾರರು ಮತ್ತು ಕಾಲಾಳುಗಳೊಂದಿಗೆ ಏಕಕಾಲದಲ್ಲಿ ಹೋರಾಡುತ್ತಿದ್ದು ವೀರನ ಕಾಲ ಕೆಳಗೆ ಒಂದಿಷ್ಟು ಜನ ಸೈನಿಕರು ಸತ್ತು ಬಿದ್ದಂತೆ ಚಿತ್ರಿಸಲಾಗಿದೆ. ಮೇಲಿನ 7ನೇ ಪಟ್ಟಿಕೆಯಲ್ಲಿ ಆನೆಗಳಿಂದ ಅಭಿಷೇಕಗೊಳ್ಳುತ್ತಿರುವ ಲಕ್ಷ್ಮಿಯ ಉಬ್ಬು ಚಿತ್ರವಿದೆ. ಅಭಿಷೇಕ ಲಕ್ಷಿ÷್ಮಯ ಮೇಲ್ಭಾಗದಲ್ಲಿ ಕೀರ್ತಿ ಮುಖವನ್ನು ಚಿತ್ರಿಸಲಾಗಿದೆ. ಮಕರ ಪಟ್ಟಿಕೆಗಳಿಂದ ಅಲಂಕೃತವಾದ ಲಲಾಟದ ಪ್ರಭಾವಳಿಯಲ್ಲಿ ಕದಂಬರ ಲಾಂಛನದ ಮಾದರಿಯ ಸಿಂಹ ಚಿತ್ರವನ್ನು ಚಿತ್ರಿಸಲಾಗಿದ್ದು, ಇದು ಆ ಕಾಲದಲ್ಲಿ ಕದಂಬರ ಆಡಳಿತ ಇಲ್ಲದೇ ಇದ್ದರೂ ಆ ವಂಶಕ್ಕೆ ಸೇರಿದ ಅಧಿಕಾರಿ ವರ್ಗ ಇಲ್ಲಿತ್ತು ಅನ್ನುವುದನ್ನು ಸೂಚ್ಯವಾಗಿ ತಿಳಿಸುತ್ತದೆ' ಎಂದು ಶ್ಯಾಮಸುಂದರ ಗೌಡ ಪತ್ರಿಕಾ ಹೇಳಿಕೆಯಲ್ಲಿ ವಿವರಿಸಿದ್ದಾರೆ.

ನಾಗವರ್ಮರಸ

ನಾಗವರ್ಮರಸನನ್ನು `ಗೋಕರ್ಣಪುರಾಧೀಶ್ವರ' ಎಂಬ ಬಿರುದಿತ್ತು. ಆತ ಹೈವೆಐನೂರು ಮತ್ತು ಕೊಂಕಣ ಒಂಭೈನೂರರ ದಕ್ಷಿಣ ಭಾಗಗಳನ್ನು ಆಳಿದ ಒಬ್ಬ ಅರಸ ಎಂದು ಶಾಸನಗಳಲ್ಲಿ ದಾಖಲೆಗಳಿವೆ. ಈ ಅರಸನಿಗೆ ಸೇರಿದ 12 ಶಾಸನಗಳು ಈವರೆಗೂ ಲಭ್ಯವಾಗಿವೆ. ಅಂಕೋಲಾ ತಾಲೂಕಿನ ಬಡಗೇರಿ-ಅಲಗೇರಿಯ ಉತ್ತರ ಭಾಗದಲ್ಲಿ ನಾಗವರ್ಮರಸನಿಗೆ ಸೇರಿದ ವೀರಗಲ್ಲೊಂದು ಪತ್ತೆಯಾಗಿರುವುದು ಇದೇ ಮೊದಲನೆಯದಾಗಿದೆ. ಎಲ್ಲ ಶಾಸನ ಹಾಗೂ ವೀರಗಲ್ಲುಗಳು ಒಂದೇ ಮಾದರಿಯದ್ದಾಗಿವೆ. ಅವುಗಳಲ್ಲಿ ರಾಮಾಯಣದ ಪ್ರಭಾವ ಕಂಡುಬರುತ್ತದೆ. ಆ ವೀರಗಲ್ಲುಗಳಲ್ಲಿ ನಾವರ್ಮರಸನ ಸೈನ್ಯವನ್ನು ವಾನರ ಸೈನ್ಯ ಎಂದು. ಎರುರಾಳಿ ಸೈನ್ಯವನ್ನು ರಾಕ್ಷಸ ಸೈನ್ಯವಾಗಿ ಚಿತ್ರಿಸಲಾಗಿದೆ ಎಂದು ಶ್ಯಾಮಸುಂದರ ಗೌಡ ವಿವರಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net