ಕರಾವಳಿಗೂ ವ್ಯಾಪಿಸಿದ ನದಿ ತಿರುವು ಹೋರಾಟ

ಕಾರವಾರದಲ್ಲಿ ಪ್ರತಿಭಟನೆ ನಡೆಯಿತು.
ಕಾರವಾರದಲ್ಲಿ ಪ್ರತಿಭಟನೆ ನಡೆಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಕಾರವಾರ, ಗೋಕರ್ಣ ಅಂಕೋಲಾದಲ್ಲಿ ಪ್ರತಿಭಟನೆ
  • ಕರಾವಳಿ, ಮಲೆನಾಡಿನ ಜನ ಒಟ್ಟಾಗಿ ಭಾಗಿ
  • ಸಂಘಟನೆಗಳ ಮುಖಂಡರು, ರಾಜಕೀಯ ಮುಖಂಡರು ಭಾಗಿ
ಕಾರವಾರ: ಬೇಡ್ತಿ, ಅಘನಾಶಿನಿ ನದಿಗಳ ತಿರುವು ಯೋಜನೆಯನ್ನು ವಿರೋಧಿಸಿ ನದಿ ತಟದಲ್ಲಿ ಶುರುವಾರ ಹೋರಾಟ ಈಗ ಕರಾವಳಿಗೂ ವ್ಯಾಪಿಸಿದೆ. ನದಿ ತಿರುವು ಯೋಜನೆಯಿಂದ ಮಲೆನಾಡಿಗೆ ಮಾತ್ರವಲ್ಲ ಇಡೀ, ಉತ್ತರ ಕನ್ನಡ ಕರಾವಳಿಗೆ ಜಲ ಕಂಠಕ ಎದುರಾಗಲಿದೆ ಎಂಬ ಎಚ್ಚರಿಕೆಯ ಸಂದೇಶವನ್ನು ಪ್ರತಿಭಟನಾಕಾರರು ಸಾರಿದ್ದಾರೆ.
ಬೇಡ್ತಿ, ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ನೇತೃತ್ವದಲ್ಲಿ ಗುರುವಾರ ಕಾರವಾರ, ಅಂಕೋಲಾ ಹಾಗೂ ಗೋಕರ್ಣದಲ್ಲಿ ಪ್ರತಿಭಟನಾ ಸಭೆಗಳು, ಜಾಥಾಗಳು ಜೋರಾಗಿ ನಡೆದವು. ಎಲ್ಲ ಕಡೆ ಪಕ್ಷಾತೀತವಾಗಿ ಮುಖಂಡರು, ಸಂಘಟನೆಗಳ ಪದಾಽಕಾರಿಗಳು ಪಾಲ್ಗೊಂಡರು. ಯಾವುದೇ ಕಾರಣಕ್ಕೂ ನದಿ ತಿರುವು ಯೋಜನೆ ಮಾಡಲು ಕೊಡುವುದಿಲ್ಲ ಎಂದು ಕೇಂದ್ರ, ರಾಜ್ಯ ಸರ್ಕಾರಗಳಿಗೆ ಸಂದೇಶ ನೀಡಿದ ಹೋರಾಟಗಾರರು, ಬೇಡ್ತಿ-ವರದಾ ಜೋಡಣೆಯ ಡಿಪಿಆರ್ ತಯಾರಿಕೆ ಕೈಬಿಡಲು ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆಸಬೇಕು ಎಂದು ಜನಪ್ರತಿನಿಧಿಗಳಿಗೆ ಹಕ್ಕೊತ್ತಾಯ ಮಂಡಿಸಿದರು. ಕೈಬಿಡದಿದ್ದರೆ ಹೋರಾಟ ತೀವ್ರಗೊಳ್ಳಲಿದೆ ಎಂದು ಎಚ್ಚರಿಸಿದರು.
ಗೋಕರ್ಣ ಗ್ರಾಪಂ, ಕಾರವಾರ ನಗರಸಭೆ, ಜಿಲ್ಲಾಽಕಾರಿ, ಅಂಕೋಲಾ ತಾಲೂಕು ಪಂಚಾಯಿತಿ ಹಾಗೂ ಸೀಬರ್ಡ್ ನೌಕಾನೆಲೆಗಳಿಗೆ ಗಂಗಾವಳಿ ನದಿ ತಿರುವು ಯೋಜನೆಯ ವಿರುದ್ಧ ಕ್ರಮ ವಹಿಸುವಂತೆ ಪತ್ರ ನೀಡಲಾಯಿತು. ಅಲ್ಲದೇ ವೈಯಕ್ತಿಕ ಆಕ್ಷೇಪಣಾ ಪತ್ರಗಳನ್ನೂ ಸಲ್ಲಿಸಲಾಯಿತು.

ನಾಯಕರ ಮಾತು:

ಕಾರವಾರದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಮಾಜಿ ಶಾಸಕಿ ರೂಪಾಲಿ ನಾಯ್ಕ, ನದಿ ತಿರುವು ಯೋಜನೆಯಿಂದ ಪಶ್ಚಿಮ ಘಟ್ಟಕ್ಕೆ ಭಾರಿ ಹಾನಿಯಾಗುತ್ತದೆ. ನದಿ ತಿರುವು ಯೋಜನೆಯ ಪ್ರಸ್ತಾವದಿಂದ ಜನ ಆತಂಕಿತರಾಗಿದ್ದಾರೆ. ಗಂಗಾವಳಿ ಉತ್ತರ ಕನ್ನಡದ ಪ್ರಮುಖ ನದಿಗಳಲ್ಲೊಂದು. ಅದರ ನೀರು ಸ್ಥಳೀಯ ಜನರಿಗೆ ಕುಡಿಯಲು, ಕೃಷಿಗೆ ಬಳಕೆಯಾಗುತ್ತದೆ. ತಿರುವು ಯೋಜನೆಯಿಂದ ನೀರು ಕುಂಠಿತವಾಗಿ ಮುಂದಿನ ದಿನಗಳಲ್ಲಿ ನೀರಿನ ಅಭಾವ, ಪರಿಸರ ವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ. ಇದರಿಂದ ಯೋಜನೆ ಕೈಬಿಡಬೇಕು ಎಂದು ಒತ್ತಾಯಿಸಿದರು.
ಮಾಜಿ ಸಚಿವ ಆನಂದ ಅಸ್ನೋಟಿಕರ್ ಮಾತನಾಡಿ, ನಮ್ಮ ಜಿಲ್ಲೆಯ ಜೀವನಾಡಿಗಳಾದ ಬೇಡ್ತಿ, ಅಘನಾಶಿನಿ ಹಾಗೂ ಗಂಗಾವಳಿ ನದಿಗಳು ಕೇವಲ ನೀರಿನ ಮೂಲಗಳಲ್ಲ. ಅವು ನಮ್ಮ ಜನಜೀವನ, ಕೃಷಿ, ಮೀನುಗಾರಿಕೆ, ಪರಿಸರ ಮತ್ತು ಮುಂದಿನ ಪೀಳಿಗೆಯ ಬದುಕಿನ ಆಧಾರ. ಆದ್ದರಿಂದ ಈ ನದಿಗಳ ಸಂರಕ್ಷಣೆಯ ಹೋರಾಟದಲ್ಲಿ ಜನರ ಧ್ವನಿಯಾಗಿ ಸದಾ ಜೊತೆ ನಿಲ್ಲುತ್ತೇನೆ ಎಂದರು. ಮಾಜಿ ಎಂಎಲ್‌ಸಿ ಶಾಂತಾರಾಮ ಸಿದ್ದಿ ಮಾತನಾಡಿ, ಗಂಗಾವಳಿ ಅಘನಾಶಿನಿ ನದಿಗಳು ವರ್ಷವಿಡೀ ಉಕ್ಕಿ ಹರಿಯುವುದಿಲ್ಲ. ಬೇಸಿಗೆಯಲ್ಲಿ ಇದೇ ನದಿಗಳಲ್ಲಿ ನೀರಿರುವುದಿಲ್ಲ. ಅದನ್ನು ಬೇರೆಡೆ ಕೊಂಡೊಯ್ಯುತ್ತೇವೆ ಎಂಬುದು ಮೂರ್ಖತನದ ನಿರ್ಧಾರವಾಗುತ್ತದೆ ಎಂದರು.
ವಕೀಲ ನಾಗರಾಜ ನಾಯಕ ಮಾತನಾಡಿ, ನದಿಯ ನೀರು ವ್ಯರ್ಥವಾಗಿ ಹರಿದು ಸಮುದ್ರ ಸೇರುತ್ತದೆ ಎಂಬುದೇ ತಪ್ಪಾದ ವಾದ. ಅದು ವ್ಯರ್ಥವಲ್ಲ. ಜೀವ ಸಂಕುಲಕ್ಕೆ ನದಿ ಆಧಾರವಾಗಿದೆ. ಅದನ್ನು ರಕ್ಷಿಸಿಕೊಳ್ಳುವುದು ಎಲ್ಲರ ಜವಾಬ್ದಾರಿ ಎಂದರು. ಜಿ.ಎಂ.ಶೆಟ್ಟಿ ಮಾತನಾಡಿ, ನದಿ ತಿರುವು ಯೋಜನೆಯಿಂದ ಗಂಗಾವಳಿ ನದಿ ಬತ್ತಲಿದೆ. ಇದರಿಂದ ಜನಜೀವನಕ್ಕೆ
ಪಶ್ಚಿಮ ಘಟ್ಟ ಕಾರ್ಯಪಡೆ ಮಾಜಿ ಅಧ್ಯಕ್ಷ ಅನಂತ ಅಶೀಸರ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಕರಾವಳಿ ಉಳಿಸಿ ಜಾಗೃತಿ ಅಭಿಯಾನದ ಸಂಚಾಲ ವಿಶ್ವನಾಥ ಶೀಗೇಹಳ್ಳಿ, ಸದಸ್ಯ ಅನಂತ ಭಟ್ಟ ಹುಳಗೋಳ, ಸಂಚಾಲಕ ನರಸಿಂಹ ಸಾತೊಡ್ಡಿ, ಟಿಎಸ್‌ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಇತರರು ನೇತೃತ್ವ ವಹಿಸಿದ್ದರು. ಸ್ವರ್ಣವಲ್ಲೀ ಮಠದ ವಿವಿಧ ಸೀಮೆಗಳ ಸೀಮಾಧ್ಯಕ್ಷರು. ಬೇಡ್ತಿ, ಅಘನಾಶಿನಿ, ಗಂಗಾವಳಿ ನದಿ ತಟದ ಗ್ರಾಮಗಳ ವಿವಿಧ ಸೊಸೈಟಿಗಳ ಅಧ್ಯಕ್ಷರು. ಮೀನುಗಾರ ಮುಖಂಡರು ಪಾಲ್ಗೊಂಡಿದ್ದರು.

ಸರ್ಕಾರಕ್ಕೆ ವರದಿ

ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ನದಿ ತಿರುವು ಯೋಜನೆ ಜಾರಿ ಮಾಡದಂತೆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಮಾಡಿದ ನಿರ್ಣಯವನ್ನು ಸಂಬAಧಪಟ್ಟ ಸಂಸ್ಥೆಗೆ ರವಾನಿಸಲಾಗಿದೆ. ವಿವಿಧ ಹಂತಗಳಲ್ಲಿ ನೀಡಿದ ಮನವಿಗಳನ್ನೂ ಸರ್ಕಾರಕ್ಕೆ ಕಳಿಸಲಾಗಿದೆ. ಈ ಬೇಡಿಕೆಯನ್ನೂ ಸರ್ಕಾರಕ್ಕೆ ತಿಳಿಸಲಾಗುವುದು ಎಂದರು.

ನದಿ ತಿರುವಿನಿಂದ ಸಾಂಪ್ರದಾಯಿಕ ಜೀವನಾಧಾರ ಮತ್ತು ಧಾರ್ಮಿಕ ಹಕ್ಕುಗಳಿಗೆ ಧಕ್ಕೆ

ಗೋಕರ್ಣ: ಬೇಡ್ತಿ ಗಂಗಾವಳಿ ಅಘನಾಶಿನಿ ನದಿ ತಿರುವು ಯೋಜನೆ ಯಲ್ಲಾಪುರ-ಶಿರಸಿ ಘಟ್ಟದ ಪ್ರದೇಶಗಳಿಂದ ಹಿಡಿದು ಸಂಪೂರ್ಣ ಕರಾವಳಿಯ ಜನರ ಬದುಕಿಗೆ ನಿರಂತರ ಉರಿಯುವ ಕೊಳ್ಳಿಯಾಗಿ ಸುಡಲಿದೆ ಎಂದು ಇಲ್ಲಿನ ಆನುವಂಶೀಯ ಉಪಾದಿವಂತ ಮಂಡಳದ ಅಧ್ಯಕ್ಷ,ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ರಾಜಗೋಪಾಲ ಅಡಿ ನುಡಿದರು.
ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಸ್ಥಳೀಯ ಪಂಚಾಯತದ ಬಯಲು ಸಭಾವೇದಿಕೆಯಲ್ಲಿ ಗುರುವಾರ ಆಯೋಜಿಸಲಾದ ಯೋಜನಾ ವಿರೋಧಿ ಹಕ್ಕೊತ್ತಾಯ ಮಹಾಸಭೆಯಲ್ಲಿ ಅವರು ಮಾತನಾಡಿದರು.
ಈ ನದಿಗಳ ನಿಸರ್ಗದತ್ತ ವರದಾನವನ್ನು ಕಡಿದು ಹಾಕುವ ಮೂಲಕ ಈ ಯೋಜನೆ ಗೋಕರ್ಣ ಸೇರಿದಂತೆ ಸಮಗ್ರ ಕುಮಟಾ ತಾಲೂಕು,ಅಂಕೋಲಾ ಮತ್ತು ಕಾರವಾರ ತಾಲೂಕುಗಳ ಸಾಂಪ್ರದಾಯಿಕ ಜೀವನಾಧಾರ ಮತ್ತು ಸಂವಿಧಾನ ದತ್ತವಾದ ಮೂಲಭೂತ ಧಾರ್ಮಿಕ ಹಕ್ಕುಗಳಿಗೆ ಮತ್ತೆಂದೂ ಸರಿಪಡಿಸಲಾಗದ ಧಕ್ಕೆಯನ್ನು ತಂದೊಡ್ಡಲಿದೆ.ಈ ಹಿನ್ನೆಲೆಯಲ್ಲಿ ಸರ್ಕಾರ ತಕ್ಷಣದಲ್ಲಿ ಮಾನವ ಜೀವ ಸಂಕುಲಗಳ ವಿನಾಶಕ್ಕೆ ಹೆಬ್ಬಾಗಿಲು ಆಗಲಿರುವ ನದಿ ತಿರುವು ಯೋಜನೆಗೆ ತಡೆಹಾಕಬೇಕು ಎಂದು ಒತ್ತಾಯಿಸಿದರು.
ಬೃಹತ್ ಯೋಜನೆಯ ಮೂಲಕ ಗೋಕರ್ಣ ಸೇರಿ ಸುತ್ತಲಿನ ಆರು ಅಂಕೋಲಾ ತಾಲೂಕಿನ ನಾಲ್ಕು ಗ್ರಾಪಂಗಳಿಗೆ ಗಂಗಾವಳಿ ನದಿಯ ನೀರು ಜೀವಜಲವಾಗಿದೆ. ನಿತ್ಯ 50 ಲಕ್ಷ ಲೀ.ಗೂ ಅಽಕ ಕುಡಿಯುವ ನೀರನ್ನು ಕರುಣಿಸುವ ಗಂಗಾವಳಿ ನದಿ ಹೊಸ ಯೋಜನೆಯಿಂದ ತನ್ನ ಜಲಮೂಲವನ್ನೇ ನಷ್ಟವಾಗಿಸಿಕೊಂಡು ಬರಡಾಗುವ ಎಲ್ಲ ಅಪಾಯಗಳಿವೆ.ಇದೇ ಬಗೆಯಲ್ಲಿ ಅಘನಾಶಿನಿ ನದಿ ಜಿಲ್ಲೆಯ ಅಭಿವೃದ್ಧಿಶೀಲ ತದಡಿ ಬಂದರಿನ ಮೂಲಕ ಈ ಭಾಗದ ಮೀನುಗಾರರು ಸೇರಿ ಲಕ್ಷಾಂತರ ಜನರ ತಲತಲಾಂತರದ ಸಾಂಪ್ರದಾಯಿಕ ಬದುಕಿಗೆ ಭದ್ರ ನೆಲೆಯನ್ನೊದಗಿಸಿದೆ.15ಕಿಮಿ ಅಂದಾಜು ವ್ಯಾಪ್ತಿಯಲ್ಲಿರುವ ಅಘನಾಶಿನಿ ಹಿನ್ನೀರು ಪ್ರದೇಶ ಜಾಗತಿಕ ಮಹತ್ವದ ಪ್ರದೇಶ ಎಂಬ ಹೆಗ್ಗಳಿಕೆಯ ಹಿನ್ನೆಲೆಯಲ್ಲಿ 'ರಾಮಸರ್ ತಾಣ' ಎಂದು ಘೋಷಿತವಾಗಿದೆ.ನದಿ ತಿರುವು ಯೋಜನೆಯಿಂದ ಈ ಎಲ್ಲ ಪ್ರದೇಶಗಳಲ್ಲಿ ವಾಸಿಸಿ ಜೀವನ ನಡೆಸುತ್ತಿರುವ ನಾಗರಿಕರ ಸಂವಿಧಾನದತ್ತವಾದ ಮೂಲಭೂತ ಬದುಕುವ ಹಕ್ಕುಗಳಿಗೆ ಭಂಗ ಉಂಟುಮಡಲಿದೆ.ಇದರ ಜೊತೆಗೆ ಅಘನಾಶಿನಿ ನದಿ ಕಾಮದೇವನ ಪಾಪವನ್ನು ಕಳೆದ ಕಾಮಾಘನಾಶಿನಿಯಾಗಿ ಹಾಗೂ ಗಂಗಾವಳಿ ನದಿ ದಕ್ಷಿಣದ ಗಂಗೆಯಾಗಿ ಪೂಜಿಸಲ್ಪಟ್ಟು ಶ್ರದ್ಧಾಳುಗಳ ಭಕ್ತಿಭಾವದ ಸನ್ನಿಧೊಯಾಗಿದೆ.ತಿರುವು ಯೋಜನೆಯಿಂದ ಅಸಂಖ್ಯ ಜನರ ಧಾರ್ಮಿಕ ಹಕ್ಕುಗಳಿಗೆ ಧಕ್ಕೆ ಉಂಟಾಗಲಿರುವ ಕಾರಣ ಸರ್ಕಾರ ತಡೆಯಿಲ್ಲದೆ ಈ ಯೋಜನೆಯನ್ನು ಕೈಬಿಡಿಬೇಕು ಎಂದು ರಾಜಗೋಪಾಲ ಅಡಿ ಆಗ್ರಹಿಸಿದರು. ಸರ್ಕಾರ ಯೋಜನೆಯನ್ನು ಮುಂದುವರಿಸುವ ಕ್ರಮಕ್ಕೆ ಮುಂದಾದಲ್ಲಿ ಈ ಭಾಗದ ಎಲ್ಲ ಪಂಚಾಯತಿಗಳಲ್ಲಿ ಕರಾವಳಿ ಜಗೃತಿ ಅಭಿಯಾನದ ಮೂಲಕ ಜನಪರ ಹೋರಾಟ ಅನಿವಾರ್ಯವಾಗಲಿದೆ ಎಂದು ಅವರು ಎಚ್ಚರಿಸಿದರು.
ಸಮಿತಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ಹಿರಿಯ ಶಿಕ್ಷಣ ತಜ್ಞ ಮುರಳೀಧರ ಪ್ರಭು, ಸಮಿತಿಯ ಡಾ.ಸುರೇಶ ಹೆಗಡೆ,ಗೋಪಾಲಕೃಷ್ಣ ವೈದ್ಯ,ಇಲ್ಲಿನ ಅರ್ಬನ್ ಬ್ಯಾಂಕ್ ಅಧ್ಯಕ್ಷ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಮೋಹನ ನಾಯಕ, ಗ್ರಾಪಂ ಮಾಜಿ ಅಧ್ಯಕ್ಷ ಆನಂದ ಕವರಿ,ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್.ಹೆಗಡೆ,ಹಿರಿಯ ಶಿಕ್ಷಣ ತಜ್ಞ ಬಿ.ಎಸ್.ಗೌಡ ಬಾವಿಕೊಡ್ಲ ಸಭೆಯಲ್ಲಿ ಯೋಜನೆ ವಿರೋಧಿಸಿ ಮಾತನಾಡಿದರು. ನಿತಿನ್ ಮುತ್ತಿಗೆ,ಶಂಕರ ಗೋಪಿ, ವಿದ್ವಾನ್ ಗಣೇಶ್ವರ ಧೀಕ್ಷಿತ್‌ ಇತರರಿದ್ದರು. ಸಮಿತಿ ವತಿಯಿಂದ ಸ್ಥಳೀಯ ಪಂಚಾಯತಿ ಪಿಡಿಒ ವಿ.ಎ.ಪಟಗಾರ ಅವರಿಗೆ ಯೋಜನೆಯನ್ನು ವಿರೋಧಿಸಿ ಹಕ್ಕೊತ್ತಾಯ ಮನವಿಯನ್ನು ನೀಡಲಾಯಿತು. ಸಮಿತಿಯ ಎಂ.ಕೆ.ಭಟ್ಟ ಮನವಿ ಪತ್ರ ವಾಚಿಸಿದರು.ಅನಂತ ಭಟ್ಟ ಹುಳಗೋಳ ಸಭೆ ನಿರ್ವಹಿಸಿದರು.
"

ನದಿ ತಿರುವು ಯೋಜನೆ ಉತ್ತರ ಕನ್ನಡದ ಪರಿಸರಕ್ಕೆ, ಜನಜೀವನಕ್ಕೆ ಮಾರಕವಾಗಿದೆ. ಹಾಗಾಗಿ ಹನ್ನೊಂದು ತಿಂಗಳುಗಳಿAದ ಸಮಿತಿ ನೇತೃತ್ವದಲ್ಲಿ ವಿವಿಧ ಸ್ವರೂಪದ ಹೋರಾಟ ಮಾಡಲಾಗಿದೆ. ಸರ್ಕಾರ ತಕ್ಷಣ ಯೋಜನೆಯನ್ನು ತಡೆ ಹಿಡಿಯುವ ನಿರ್ಧಾರ ಘೋಷಿಸದೆ ಹೋದಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ಬೆಂಗಳೂರಿನ ಪ್ರೀಡಂ ಪಾರ್ಕ್ನಲ್ಲಿ ಬೃಹತ್ ವಿರೋಽ ಸಮಾವೇಶವನ್ನು ಸಮಿತಿ ಆಯೋಜಿಸಲಿದೆ.ಇದರ ಜತೆಗೆ ಯಲ್ಲಾಪುರದಲ್ಲಿ ನಿರಂತರವಾಗಿ ರಾಷ್ಟಿçÃಯ ಹೆದ್ದಾರಿಗೆ ತಡೆಯೊಡ್ಡಿ ಸಂಪೂರ್ಣ ಸಂಚಾರವನ್ನು ಸ್ಥಗಿತವಾಗಿಸಲಾಗುವುದು.ಈ ನಡುವೆ ಯೋಜನೆಯಿಂದ ಪೀಡಿತವಾಗಲಿರುವ ಎಲ್ಲ ತಾಲೂಕುಗಳ ಗ್ರಾಪಂಗಳಲ್ಲಿ ಜನ ಜಾಗೃತಿ ಅಭಿಯಾನವನ್ನು ಬಲಗೊಳಿಸಲಾಗುವುದು.

ಅನಂತ ಅಶೀಸರ ಬೇಡ್ತಿ, ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net