ಶಿಕ್ಷಣ ಇಲಾಖೆ ಕಚೇರಿಗಳಿಗೆ ಸಂಪೂರ್ಣ ಡಿಜಿಟಲ್‌ ಸ್ವರೂಪ : ಈಶ್ವರ ಉಳ್ಳಾಗಡ್ಡಿ

ಕಾರವಾರದಲ್ಲಿ ಈಶ್ವರ ಉಳ್ಳಾಗಡ್ಡಿ ಅವರನ್ನು ಸನ್ಮಾನಿಸಲಾಯಿತು.
ಕಾರವಾರದಲ್ಲಿ ಈಶ್ವರ ಉಳ್ಳಾಗಡ್ಡಿ ಅವರನ್ನು ಸನ್ಮಾನಿಸಲಾಯಿತು.
Published on
ಕಾರವಾರ: ಜೇಷ್ಠತಾ ಪಟ್ಟಿ ಪ್ರಕಟಿಸಿ, ಕೌನ್ಸೆಲಿಂಗ್‌ ಮುಗಿಸಲಾಗಿದ್ದು, ಧಾರವಾಡ ವಿಭಾಗದಲ್ಲಿ 101 ಸಹ ಶಿಕ್ಷಕರಿಗೆ ಮುಖ್ಯ ಶಿಕ್ಷಕರಾಗಿ ಬಡ್ತಿ ಆದೇಶವನ್ನು ಶೀಘ್ರ ನೀಡಲಾಗುವುದು ಎಂದು ಶಾಲಾ ಶೀಕ್ಷಣ ಮತ್ತು ಶೈಕ್ಷಣಿಕ ಇಲಾಖೆಯ ಅಪರ ಆಯುಕ್ತ ಈಶ್ವರ ಉಳ್ಳಾಗಡ್ಡಿ ತಿಳಿಸಿದರು.
ಕಾರವಾರದ ಬಾಡ ಶಿವಾಜಿ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣಾ ಸಭೆಯಲ್ಲಿ ಅವರು ಅತಿಥಿಯಾಗಿ ಮಾತನಾಡಿದರು.
ಈಗಾಗಲೇ ಶಿಕ್ಷಣ ಇಲಾಖೆಯ ಹಲವು ಸೇವೆಗಳು ಆನ್‌ಲೈನ್‌ನಲ್ಲಿ ಲಭ್ಯವಿವೆ. ಡಿಡಿಪಿಐ ಕಚೇರಿ, ಬಿಇಒ ಕಚೇರಿ ಹಾಗೂ ಡಯಟ್‌ ಸೇವೆಗಳನ್ನೂ ಇ-ಆಫೀಸ್‌ ವ್ಯವಸ್ಥೆಗೆ ಅಳವಡಿಸುವ ಎಲ್ಲ ತಯಾರಿ ಪೂರ್ಣಗೊಂಡಿದೆ ಎಂದರು.
ಉಡುಪಿ-ಮಂಗಳೂರಿಗೆ ಪೈಪೋಟಿ ನೀಡಿ
ಧಾರವಾಡ ವಿಭಾಗದ ಇತರ ಜಿಲ್ಲೆಗೆ ಹೋಲಿಸಿದರೆ ಕಾರವಾರ ಶೈಕ್ಷಣಿಕ ಜಿಲ್ಲೆಯ ಪ್ರಗತಿ ಉತ್ತಮವಾಗಿದೆ. ಶೈಕ್ಷಣಿಕ ವರದಿಯಂತೆ ಇಲ್ಲಿನ ಶೇ. 3.5ರಷ್ಟು ಮಕ್ಕಳಿಗೆ ಮಾತ್ರ ಓದಲು ಬರೆಯಲು ಬಾರದವರು. ಇತರ ಜಿಲ್ಲೆಗಳಲ್ಲಿ ಈ ಪ್ರಮಾಣ ಶೇ.25 ರವರೆಗೂ ಇದೆ. ಆದರೆ, ಜಿಲ್ಲೆ ಪಕ್ಕದ ಉಡುಪಿ, ಮಂಗಳೂರಿನ ಜತೆ ಪೈಪೋಟಿ ಮಾಡಬೇಕು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉಡುಪಿ, ಮಂಗಳೂರು ಜಿಲ್ಲೆಯನ್ನು ಮೀರಿ ಕಾರವಾರ ಶೇ.100 ರಷ್ಟು ಫಲಿತಾಂಶ ಪಡೆಯಬೇಕು. ಮಾತ್ರವಲ್ಲ ಗುಣಮಟ್ಟದಲ್ಲೂ ಸಾಧನೆ ಮಾಡಬೇಕು ಎಂದು ಗುರಿ ನೀಡಿದರು.
ಈಗಾಗಲೇ ಮಿಷನ್‌ 40-45, ಮಿಷನ್‌ 50 ಕಾರ್ಯಕ್ರಮ ಜಾರಿ ಮಾಡಲಾಗಿದೆ. ಈಗಾಗಲೇ ಪರೀಕ್ಷೆಯ ಪಠ್ಯಕ್ರಮದ ನೀಲ ನಕ್ಷೆ ನೀಡಲಾಗಿದೆ. ಹಳೆಯ ಪ್ರಶ್ನೆಪತ್ರಿಕೆಗಳನ್ನು ನೀಡಲಾಗುತ್ತಿದೆ. ಮೂರು ಪೂರಕ ಪರೀಕ್ಷೆಗಳು ನಡೆಯುತ್ತಿವೆ ಎಲ್ಲವಕ್ಕೂ ಶಿಕ್ಷಕರು ಸ್ಪಂದಿಸಬೇಕು ಎಂದರು.
ಈ ಬಾರಿ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ವಿಧಾನ ಪರಿಷತ್‌ನಲ್ಲಿ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಅತಿ ಹೆಚ್ಚು ಪ್ರಶ್ನೆಗಳು ಚರ್ಚೆಯಾದವು. ಸಭಾಪತಿಗಳಾದ ಬಸವರಾಜ ಹೊರಟ್ಟಿ ಅವರ ಮಾರ್ಗದರ್ಶನದಲ್ಲಿ, ಅವರು ನೀಡಿದ ಹಲವು ಸೂಚನೆಗಳನ್ನು ಜಾರಿಗೆ ತರಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಶಿಕ್ಷಕರ ಸಂಘದಿಂದ ಉಳ್ಳಾಗಡ್ಡಿ ಅವರನ್ನು ಸನ್ಮಾನಿಸಲಾಯಿತು. ಸಭಾಪತಿಗಳಾದ ಬಸವರಾಜ ಹೊರಟ್ಟಿ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net