ಬನವಾಸಿಯ ಅನಾನಸ್ ರುಚಿ ಮತ್ತು ಗುಣಮಟ್ಟದಲ್ಲಿ ಉತ್ಕೃಷ್ಟವಾಗಿದೆ. ರಾಜಸ್ಥಾನದವರೆಗೂ ಬನವಾಸಿಯ ಅನಾನಸ್ ಕಂಪು ಪಸರಿಸಿದೆ. ಅನಾನಸ್ ಮೌಲ್ಯವರ್ಧನೆ ಮಾಡುವ ಬಗ್ಗೆ 1969ರಲ್ಲಿ ಅಂದಿನ ಮೈಸೂರು ಸರ್ಕಾರದ ಹಣಕಾಸು ಸಚಿವರಾಗಿದ್ದ ರಾಮಕೃಷ್ಣ ಹೆಗಡೆ ದೊಡ್ಮನೆ ಕನಸು ಕಂಡಿದ್ದರು. ಅದರನ್ವಯ ಗೋಳಿಕಟ್ಟಾದಲ್ಲಿ ಕಾಮಧೇನು ಕೋ ಆಪ್ ಸೊಸೈಟಿ ಸ್ಥಾಪನೆಗೆ ಕಾರಣರಾಗಿದ್ದರು. ಜತೆಗೆ ರೈತರು ಅನಾನಸ್ ಬೆಳೆಯಲಿ ಎಂಬ ಉದ್ದೇಶದಿಂದ 389.07 ಎಕರೆ ಅರಣ್ಯ ಭೂಮಿಯನ್ನು ಲೀಸ್ ಆಧಾರದಲ್ಲಿ ಕೊಡಿಸಿದ್ದರು. ಅನಾನಸ್ ಸಾಗುವಳಿ, ಆಹಾರ ಸಂಸ್ಕರಣೆ ಮುಂತಾದ ಉದ್ದೇಶಕ್ಕೆ 1969ರ ಡಿ. 2ರಂದು ಈ ಸಂಸ್ಥೆ ಭೂಮಿಯನ್ನು ಲಾಗಣಿ ಪಡೆದಿತ್ತು. ಸರ್ಕಾರದ ಆದೇಶದನ್ವಯ 30 ವರ್ಷ ಲೀಸ್ ದೊರೆತಿತ್ತು. ಆದರೆ, 1976ರಲ್ಲಿ ರಾಜ್ಯ ಸರ್ಕಾರ ಈ ಲೀಸ್ ಅವಧಿಯನ್ನು 20 ವರ್ಷಕ್ಕೆ ಸೀಮಿತಗೊಳಿಸಿತ್ತು. 1989ರಲ್ಲಿ ಲೀಸ್ ಅವಧಿ ಮುಗಿದಿದೆ ಎಂದು ಅಂದಿನ ಡಿಸಿಎಫ್ ಜಾಗ ಖುಲ್ಲಾ ಮಾಡುವಂತೆ ನೋಟಿಸ್ ನೀಡಿದ್ದರು. ಆದರೆ, ಲೀಸ್ ಅವಧಿ 30 ವರ್ಷ ಅವಧಿಯದ್ದು ಎಂದು ಕಾಮಧೇನು ಸಂಸ್ಥೆಯವರು ಶಿರಸಿ ಸಿವಿಲ್ ಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದ್ದರು.