Sirsi Marikamba ಶಿರಸಿ ಮಾರಿಕಾಂಬಾ ಜಾತ್ರೆ ಆರಂಭ

ಶಿರಸಿಯ ಮಾರಿಕಾಂಬಾ Sirsi Marikamba ದೇವಾಲಯವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿರುವುದು
ಶಿರಸಿಯ ಮಾರಿಕಾಂಬಾ Sirsi Marikamba ದೇವಾಲಯವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿರುವುದು
Published on
ಶಿರಸಿ: ರಾಜ್ಯದ ಅತಿದೊಡ್ಡ ಜಾತ್ರೆ, ನಗರದ ಮಾರಿಕಾಂಬಾ ಜಾತ್ರಾ ಮಹೋತ್ಸವ Sirsi Marikamba ಈಗ ಆರಂಭಗೊಂಡಿದೆ. ಮಾರಿಕಾಂಬಾ ದೇವಾಲಯದ ಸಭಾ ಮಂಟಪದಲ್ಲಿ ಮಂಗಳವಾರ ರಾತ್ರಿ 11.36ರಿಂದ 11.43 ರವರೆಗೆ ದೇವಿಯ ಕಲ್ಯಾಣ ಪ್ರತಿಷ್ಠೆ ಕಾರ್ಯಕ್ರಮಗಳು ನಡೆದವು. ಈ ಅಪರೂಪದ ಸನ್ನಿವೇಶವನ್ನು ಭಕ್ತರು ಕಣ್ತುಂಬಿಕೊಂಡರು.
ಜಾತ್ರಾ ವಿಧಿವಿಧಾನಗಳ ಅಂಗವಾಗಿ ಮಂಗಳವಾರ ಬೆಳಗ್ಗೆಯಿಂದಲೇ ವಿವಿಧ ಕಾರ್ಯಕ್ರಮ ನಡೆದವು. ಬೆಳಗ್ಗೆ ಗಣಹೋಮ ಧಾರ್ಮಿಕ ಕಾರ್ಯಕ್ರಮ ನಡೆಯಿತು.
ಬಳಿಕ ಕಲಶ ಪೂಜಿಸಿ ರಥದ ಮೇಲೆ ಪ್ರತಿಷ್ಠಾಪಿಸಲಾಯಿತು. ಈ ವೇಳೆ ಧರ್ಮದರ್ಶಿಗಳು, ಬಾಬುದಾರರು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಜಯಘೋಷಗಳು, ವಾದ್ಯಗಳು ಮೊಳಗಿದವು.
ರಾತ್ರಿ ದೇವಿಯ ಕಲ್ಯಾಣೋತ್ಸವ ವಿಧಿವಿಧಾನಗಳು ನೆರವೇರಿದವು. ಮಾರಿಕಾಂಬೆ ಮತ್ತು ಮರ್ಕಿ-ದುರ್ಗಿ ದೇವಿಯರಿಗೆ ಹೊಸ ಸೀರೆ ಉಡಿಸಿ ಬಂಗಾರದ ಆಭರಣ ತೊಡಿಸಲಾಯಿತು. ನಂತರ ವಿಧ್ಯುಕ್ತವಾಗಿ ಮಾರಿಕಾಂಬಾ ವಿವಾಹ ಕಾರ್ಯ ನಡೆದು ಮಧ್ಯರಾತ್ರಿ ದೇವಿಯ ಜಾತ್ರಾ ಕಲ್ಯಾಣ ಪ್ರತಿಷ್ಠೆ ನಡೆಯಿತು.
ದೇವಾಲಯದ ಅಧ್ಯಕ್ಷ ರವಿ ನಾಯ್ಕ, ಉಪಾಧ್ಯಕ್ಷ ಸುದೇಶ ಜೋಗಳೇಕರ್, ಧರ್ಮದರ್ಶಿಗಳಾದ ಸುಧೀರ ಹಂದ್ರಾಳ, ವತ್ಸಲಾ ಹೆಗಡೆ, ಶಿವಾನಂದ ಶೆಟ್ಟಿ, ಬಾಬುದಾರ ಮುಖ್ಯಸ್ಥ ಜಗದೀಶ ಗೌಡ ಇತರರಿದ್ದರು.
ಕಿಕ್ಕಿರಿದ ಸಭಾಂಗಣ: ಮಾರಿಕಾಂಬಾ ಜಾತ್ರೆಯ ಕಲ್ಯಾಣ ಪ್ರತಿಷ್ಠೆಯ ದಿನವಾದ ಮಂಗಳವಾರ ಮಧ್ಯಾಹ್ನದ ಬಳಿಕ ಅಲ್ಪ ಪ್ರಮಾಣದ ಮಳೆ ಸುರಿದು ಬಿಸಿಲ ಝಳ ಇಂಗಿಸಿ, ಹವಾಮಾನವನ್ನೂ ತಂಪಾಗಿಸಿತ್ತು. ಉತ್ಸಾಹ ಭರಿತ ಭಕ್ತರು ನಾಡಿನೆಲ್ಲೆಡೆಯಿಂದ ಆಗಮಿಸಿ, ಸಭಾ ಮಂಟಪದ ತುಂಬೆಲ್ಲ ಜಮಾಯಿಸಿದ್ದರು.
ತಾಯಿಯ ಕಲ್ಯಾಣ ಪ್ರತಿಷ್ಠೆಗೆ ಸಾಕ್ಷಿಯಾಗಿದ್ದರು. ನಂಬಿದ ಭಕ್ತಗಣವನ್ನು ಪೊರೆಯುವ ಶಕ್ತಿಪೀಠವೆಂದು ನಾಡಿನಲ್ಲಿ ಪ್ರಸಿದ್ಧವಾದ ಶಿರಸಿ ಶ್ರೀ ಮಾರಿಕಾಂಬಾ ದೇವಿಯ ದ್ವೈವಾಷಿಕ ಜಾತ್ರೆಗೆ ಮಂಗಳವಾರ ನಾಂದಿಯಾಗಿದ್ದು, ಬುಧವಾರ ರಥಾರೋಹಿಯಾಗಿ ಆಗಮಿಸಿ ಜಾತ್ರಾ ಗದ್ದುಗೆಯಲ್ಲಿ ದೇವಿ ವಿರಾಜಮಾನಳಾಗುವ ಮೂಲಕ ಭಕ್ತಿಭಾವದ ಜಾತ್ರೆಗೆ ಮೆರುಗು ಬರಲಿದೆ.
ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಮಾರಿಕಾಂಬಾ ಜಾತ್ರೆ ಸ್ಥಳೀಯ ಹಾಗೂ ನಾಡಿನ ನಾನಾ ಜಿಲ್ಲೆ, ಹೊರ ರಾಜ್ಯಗಳ ಲಕ್ಷಾಂತರ ಭಕ್ತರನ್ನು ಸೆಳೆಯಲಿದೆ.
ಮಾ.4ರವರೆಗೆ ಜಾತ್ರೆಯ ವಿಧಿವಿಧಾನಗಳ ನೆರವೇರಲಿದ್ದು, ಭಕ್ತಾಧಿಗಳು ಮಾರಿಕಾಂಬೆಗೆ ಸೇವೆ, ಹರಕೆ ಸಲ್ಲಿಸಲಿದ್ದಾರೆ.
ಇಂದು ರಥೋತ್ಸವ: ಮಂಗಳವಾರ ರಾತ್ರಿ ದೇವಿಯ ಕಲ್ಯಾಣ ಪ್ರತಿಷ್ಠೆ ಮುಕ್ತಾಯವಾದ ಬಳಿಕ ದೇವಿಯ ರಥೋತ್ಸವದ ಸಿದ್ಧತೆಗಳನ್ನು ನಡೆಸಲಾಯಿತು.
ಬುಧವಾರ ಬೆಳಗ್ಗೆ 7.27ರಿಂದ ದೇವಿಯ ರಥಾರೋಹಣವಾಗಲಿದ್ದು, ನಂತರ ರಥೋತ್ಸವ, ಶೋಭಾಯಾತ್ರೆ ನಡೆಯಲಿದೆ. ಭಕ್ತರ ಜಯಘೋಷದೊಂದಿಗೆ ರಥವು ಬಿಡಕಿಬಯಲಿನ ಜಾತ್ರಾ ಗದ್ದುಗೆ ಸ್ಥಳಕ್ಕೆ ತೆರಳಲಿದೆ. ಅಲ್ಲಿ ಮಧ್ಯಾಹ್ನ ಗುದ್ದುಗೆಯಲ್ಲಿ ದೇವಿಯನ್ನು ಪ್ರತಿಷ್ಠಾಪಿಸಲಾಗುತ್ತದೆ.
ಫೆ.26ರಿಂದ ಬೆಳಗ್ಗೆ 5ರಿಂದ ಜಾತ್ರಾ ಗದ್ದುಗೆಯಲ್ಲಿ ಮಾರಿಕಾಂಬೆಗೆ ಸೇವೆ ಸಲ್ಲಿಕೆ, ಹರಕೆ ಸೇವೆ ಪ್ರಾರಂಭವಾಗಲಿದ್ದು, ನಿರಂತರ ಎಂಟು ದಿನಗಳ ಕಾಲ ಮುಂದುವರೆಯಲಿದೆ. ಮಾ.4ರ ಬೆಳಗ್ಗೆ 10.47ರವರೆಗೆ ಸೇವೆ ಸ್ವೀಕರಿಸಲಿರುವ ತಾಯಿ, ಬಳಿಕ ಗದ್ದುಗೆಯಿಂದ ಏಳುವುದರೊಂದಿಗೆ ಜಾತ್ರೆ ಮುಕ್ತಾಯವಾಗಲಿದೆ.
ನಗರದ ಬಿಡ್ಕಿಬೈಲಿನಲ್ಲಿ ಜಾತ್ರಾ ಮಂಟಪ ನಿರ್ಮಾಣ ಕಾರ್ಯ ಈಗಾಗಲೇ ಪೂರ್ಣಗೊಂಡಿದ್ದು, ದೇವಿಯ ಆಗಮನಕ್ಕೆ ಕಾಯುತ್ತಿದೆ. ಜಾತ್ರಾ ಗದ್ದುಗೆ ಸುತ್ತಮುತ್ತಲೂ ಭಕ್ತರ ಆಗಮನಕ್ಕೆ, ಹರಕೆಗಳ ಪೂರೈಕೆಗೆ ಸೌಲಭ್ಯ ಕಲ್ಪಿಸಲಾಗಿದೆ.
ಪೊಲೀಸ್ ಇಲಾಖೆ ಈಗಾಗಲೇ ಬಿಡ್ಕಿಬೈಲು, ಜಾತ್ರಾ ಗದ್ದುಗೆ, ಬಳೆಪೇಟೆ ಸೇರಿದಂತೆ ವಿವಿಧೆಡೆ ಭದ್ರತೆ ಒದಗಿಸಿದೆ.
ಈ ವರ್ಷ ಮಾ.3ರಂದು ಚಂದ್ರಗ್ರಹಣ ಇರುವುದರಿಂದ ಅಂದು ಸೇವಾ ವಿಧಾನದಲ್ಲಿ ಬದಲಾವಣೆ ಮಾಡಲಾಗಿದೆ. ಅಂದು ಕೆಲ ಹೊತ್ತು ಹಣ್ಣು ಕಾಯಿ ಸೇರಿದಂತೆ ಇತರ ಸೇವೆಗಳಿಗೆ ಅವಕಾಶ ಇರುವುದಿಲ್ಲ.
ಭಕ್ತರು ದೇವಿಯ ದರ್ಶನ ಮಾತ್ರ ಮಾಡಬಹುದಾಗಿದೆಯಲ್ಲದೇ ಅಂದು ಅನ್ನ ಪ್ರಸಾದ ವಿತರಣೆಯನ್ನೂ ಸಹ ಆಯೋಜಿಸಲಾಗಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net