ಶಿರಸಿ ‘ಮಾರಿ ಜಾತ್ರೆ’ ಫೆ. 24ರಿಂದ

ಶಿರಸಿ ಮಾರಿಕಾಂಬಾ ದೇವಿ ಜಾತ್ರಾ ದಿನಾಂಕ ಘೋಷಣೆ ಮಾಡಿದ ಬಳಿಕ ದೀಪ ಬೆಳಗಲಾಯಿತು. ಶಾಸಕ ಭೀಮಣ್ಣ ನಾಯ್ಕ, ಎಸಿ ಕಾವ್ಯಾರಾಣಿ, ಉಪಾಧ್ಯಕ್ಷ ಸುದೇಶ ಜೋಗಳೇಕರ್, ಸುಧೀರ ಹಂದ್ರಾಳ ಇತರರಿದ್ದರು.
ಶಿರಸಿ ಮಾರಿಕಾಂಬಾ ದೇವಿ ಜಾತ್ರಾ ದಿನಾಂಕ ಘೋಷಣೆ ಮಾಡಿದ ಬಳಿಕ ದೀಪ ಬೆಳಗಲಾಯಿತು. ಶಾಸಕ ಭೀಮಣ್ಣ ನಾಯ್ಕ, ಎಸಿ ಕಾವ್ಯಾರಾಣಿ, ಉಪಾಧ್ಯಕ್ಷ ಸುದೇಶ ಜೋಗಳೇಕರ್, ಸುಧೀರ ಹಂದ್ರಾಳ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಾ. 4ರವರೆಗೆ ಭಕ್ತರಿಗೆ ದರ್ಶನ ಭಾಗ್ಯ
  • ಘೋಷಣಾ ಸಭೆಯಲ್ಲಿ ದಿನಾಂಕ ಪ್ರಕಟ
ಶಿರಸಿ: ರಾಜ್ಯದ ಅತಿದೊಡ್ಡ, ಶಿರಸಿಯ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವ ಫೆ. 24ರಿಂದ ಆರಂಭಗೊಳ್ಳಲಿದೆ. ಮಾರಿಕಾಂಬಾ ದೇವಸ್ಥಾನದ ಆವರಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಜಾತ್ರಾ ದಿನಾಂಕ ಘೋಷಣೆ ಸಭೆಯಲ್ಲಿ ಸಾರ್ವಜನಿಕರು, ಜನಪ್ರತಿನಿಧಿಗಳ ಸಮ್ಮುಖದಲ್ಲಿ ಈ ದಿನಾಂಕ ಪ್ರಕಟಿಸಲಾಯಿತು.
ಜ. 7ರಿಂದ ಜಾತ್ರೆ ಸಿದ್ಧತೆಗಳು ಆರಂಭಗೊಳ್ಳಲಿವೆ. ಫೆ. 24ರಂದು ದೇವಿಯ ಕಲ್ಯಾಣ ಪ್ರತಿಷ್ಠೆ, ಆ ಬಳಿಕ ಜಾತ್ರಾ ವಿಧಿ ವಿಧಾನಗಳು ನಡೆದು ಮಾ. 4ರಂದು ಜಾತ್ರೆ ಮುಕ್ತಾಯಗೊಳ್ಳಲಿದೆ. ಬಳಿಕ ಯುಗಾದಿಯಂದು ದೇವಿಯನ್ನು ಪುನಃ ದೇವಸ್ಥಾನದಲ್ಲಿ ಸ್ಥಾಪಿಸಲಾಗುತ್ತಿದ್ದು, ಭಕ್ತರಿಗೆ ದರ್ಶನ ನೀಡಲಿದ್ದಾಳೆ. ವೈದಿಕರಾದ ಶರಣ ಆಚಾರ್ಯ ಜಾತ್ರಾ ದಿನಾಂಕಗಳು ಮತ್ತು ವಿದಿ ವಿಧಾನಗಳನ್ನು ಸಭೆಗೆ ಘೋಷಿಸಿದರು.
ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಭೀಮಣ್ಣ ನಾಯ್ಕ, ಲಕ್ಷಾಂತರ ಭಕ್ತರು ಆಗಮಿಸುವ ಜಾತ್ರೆಯಲ್ಲಿ ಸ್ವಚ್ಛತೆ, ನೀರು, ಸಾರಿಗೆ ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸಬೇಕು. ಹಳ್ಳಿಗಳಿಗೆ ಬೇಡಿಕೆ ಅನುಗುಣವಾಗಿ ಬಸ್ಸಿನ ವ್ಯವಸ್ಥೆ ಮಾಡಲಾಗುತ್ತದೆ. ಸಾರ್ವಜನಿಕರು ಸಹಕಾರ ನೀಡಿದರೆ ರಥಬೀದಿ ಅಗಲೀಕರಣ ಮಾಡಲಾಗುತ್ತದೆ ಎಂದರು.
ಉಪ ವಿಭಾಗಾಧಿಕಾರಿ ಕೆ.ವಿ. ಕಾವ್ಯಾರಾಣಿ ಮಾತನಾಡಿ, ಜಾತ್ರಾ ಮಹೋತ್ಸವ ಭಾವನಾತ್ಮಕವಾಗಿದ್ದು, ರಾಜ್ಯದ ಎಲ್ಲೆಡೆಯಿಂದಲೂ ಭಕ್ತರು ಆಗಮಿಸುತ್ತಾರೆ. ಜಾತ್ರೆಯ ಯಶಸ್ಸಿಗಾಗಿ ಜಿಲ್ಲಾಡಳಿತ ಸಂಪೂರ್ಣ ಸಹಕಾರ ನೀಡುತ್ತೇವೆ. ಬರುವ ಲಕ್ಷಾಂತರ ಭಕ್ತರಿಗೆ ಮೂಲಭೂತ ಸೌಲಭ್ಯ ಒದಗಿಸುವುದು ನಮ್ಮ ಜವಾಬ್ದಾರಿ. ನಗರಸಭೆಯಿಂದ ನೀರು, ಸ್ವಚ್ಛತೆಯ ಸಂಪೂರ್ಣ ಜವಾಬ್ದಾರಿ ನಿರ್ವಹಿಸಲಾಗುತ್ತಿದ್ದು, ರಸ್ತೆ ಕೆಲವೆಡೆ ಹೊಂಡ ತುಂಬುವ ಕಾರ್ಯ ನಡೆಯುತ್ತಿದೆ. ಶೀಘ್ರವಾಗಿ ಈ ಕಾರ್ಯ ಪೂರ್ಣಗೊಳಿಸುವಂತೆ ಲೊಕೋಪಯೋಗಿ ಇಲಾಖೆಗೆ ಸೂಕ್ತ ನಿರ್ದೇಶನ ನೀಡಲಿದ್ದೇವೆ. ಜಾತ್ರೆಯ ವೇಳೆ ಅವಘಡ ತಪ್ಪಿಸಲು ಹೆಚ್ಚುವರಿ ಅಗ್ನಿ ಶಾಮಕ ತಂಡವನ್ನು ಬೇರೆ ತಾಲೂಕಿನಿಂದಲೂ ಸಹ ಕರೆಸಲಾಗುವುದು. ಬರುವ ಭಕ್ತರಿಗೆ ಸೂಕ್ತ ಪಾಕಿರ್ಂಗ್ ವ್ಯವಸ್ಥೆ ಮಾಡಲಾಗುತ್ತಿದೆ. ಸೂಕ್ತ ನಾಮಫಲಕ ಅಳವಡಿಕೆ, ಬಸ್ ವ್ಯವಸ್ಥೆ ಮಾಡಲಾಗುತ್ತದೆ ಎಂದರು.
ಡಿವೈಎಸ್ಪಿ ಗೀತಾ ಪಾಟೀಲ ಮಾತನಾಡಿ, ಮಾರಿಕಾಂಬಾ ಜಾತ್ರೆ ನಮಗೆ ಕೇವಲ ಕರ್ತವ್ಯ ಅಲ್ಲ, ಅದು ಸೇವೆ. ಹೆಚ್ಚುವರಿ ಸಿಬ್ಬಂದಿ ಕರೆಸಿಕೊಂಡು ಸೂಕ್ತ ಭದ್ರತೆ ಕೈಗೊಳ್ಳುತ್ತೇವೆ. ಹೊರಗಿನಿಂದ ಬಂದವರಿಗೆ ಪಾಕಿರ್ಂಗ್, ಇಲ್ಲಿಯ ಸೌಲಭ್ಯಗಳ ಕುರಿತು ಮಾಹಿತಿ ಪ್ರತಿಯೊಬ್ಬರೂ ನೀಡಬೇಕು ಎಂದರು.
ಸಾರ್ವಜನಿಕರ ಪರವಾಗಿ ರಘು ಕಾನಡೆ, ವಿಶ್ವನಾಥ ಶರ್ಮಾ ನಾಡಗುಳಿ, ರಾಮು ಕಿಣಿ, ಜಿ.ಎಸ್.ಹೆಗಡೆ ಹಲಸರಿಗೆ, ಮಂಜು ಮೊಗೇರ ಇತರರು ಸಲಹೆ ನೀಡಿದರು.
ದೇವಾಲಯದ ಅಧ್ಯಕ್ಷ ಆರ್.ಜಿ. ನಾಯ್ಕ, ಉಪಾಧ್ಯಕ್ಷ ಸುಧೇಶ ಜೋಗಳೇಕರ್, ಧರ್ಮದರ್ಶಿಗಳಾದ ಸುಧೀರ ಹಂದ್ರಾಳ, ಶಿವಾನಂದ ಶಿವನಂಚಿ, ಪೌರಾಯುಕ್ತ ಪ್ರಕಾಶ ಚನ್ನಪ್ಪ, ಬಾಬುದಾರ ಮುಖ್ಯಸ್ಥ ಜಗದೀಶ ಗೌಡ, ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ಇತರರಿದ್ದರು. ಬಳಿಕ ಜಾತ್ರೆ ಪ್ರಯುಕ್ತ ದೀಪ ಬೆಳಗಿ, ದೇವಿಯಲ್ಲಿ ವಿಶೇಷ ಪ್ರಾರ್ಥನೆ ಮಾಡಲಾಯಿತು.
ಜಾತ್ರೆ ಟೈಮ್‌ಲೈನ್
ಜ.7: ದೇವಿಯ ಪ್ರತಿಷ್ಠಾ ಮಂಟಪ ಕಳಚುವುದು
ಫೆ.3: ಮೊದಲ ಹೊರಬೀಡು
ಫೆ.6: ಎರಡನೇ ಹೊರಬೀಡು
ಫೆ.10: ಮೂರನೇ ಹೊರಬೀಡು
ಫೆ.13: ರಥದ ಮರಕ್ಕೆ ಪೂಜೆ
ಫೆ.13: ನಾಲ್ಕನೇ ಹೊರಬೀಡು
ಫೆ.17: ದೇವಿಯ ರಥಕ್ಕೆ ಮರ ತರುವುದು
ಫೆ.17 ಅಂಕೆಯ ಹೊರಬೀಡು
ಫೆ.18 ಅಂಕೆ ಹಾಕುವುದು
ಫೆ.24 ದೇವಿಯ ರಥದ ಕಲಶ ಪ್ರತಿಷ್ಠೆ
ಫೆ.24:ದೇವಿಯ ಜಾತ್ರಾ ಕಲ್ಯಾಣ ಪ್ರತಿಷ್ಠೆ
ಫೆ.25 ದೇವಿಯ ರಥಾರೋಹಣ, ರಥೋತ್ಸವ
ಫೆ.25 ಶೋಭಾ ಯಾತ್ರೆ, ಗದ್ದುಗೆಯ ಮೇಲೆ ದೇವಿ ಸ್ಥಾಪನೆ
ಫೆ.26: ಜಾತ್ರೆ ಗದ್ದುಗೆಯಲ್ಲಿ ಸೇವೆ ಆರಂಭ
ಮಾ. 4: ಜಾತ್ರೆ ಮುಕ್ತಾಯ, ಗದ್ದುಗೆಯಿಂದ ಏಳುವ ದೇವಿ
ಮಾ. 19: ಯುಗಾದಿ ಪ್ರತಿಷ್ಠೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net