siege ಶಿರಸಿಯಲ್ಲಿ ಪೆಟ್ರೋಲ್​ ಬಂಕ್​ಗೆ ಮುತ್ತಿಗೆ 7ರಂದು

ಆಟೋ ರಿಕ್ಷಾ
ಆಟೋ ರಿಕ್ಷಾ
Published on

ಪ್ರಮುಖ ಮುಖ್ಯಾಂಶಗಳು

  • ಸಿಬಿಜಿ ಸ್ಥಗಿತಗೊಳಿಸಿ ಸಿಎನ್​ಜಿ ಇಂಧನ ಪೂರೈಸಲು ಆಗ್ರಹ
ಶಿರಸಿ: ನಗರದ ಪೆಟ್ರೋಲ್​ ಬಂಕ್​ಗಳಲ್ಲಿ ಸಿಎನ್​ಜಿ ಗ್ಯಾಸ್​ ಬದಲು ಸಿಬಿಜಿ ಗ್ಯಾಸ್​ ಹಾಕಲಾಗುತ್ತಿದೆ. ಇದರಿಂದಾಗಿ ವಾಹನದ ಇಂಜಿನ್​ ಹಾಳಾಗುತ್ತಿವೆ. ಈ ಮೊದಲಿನಂತೆಯೇ ಸಿಎನ್​ಜಿ ಗ್ಯಾಸ್​ ಇಂಧನವನ್ನೇ ಪೂರೈಸಲು ಒಂದು ವಾರದ ಗಡುವು ನೀಡಿ, ಪಂಪ್​ಗಳಿಗೆ ವಾಹನ ಸಮೇತ ಮುತ್ತಿಗೆ ಹಾಕಲು ನಿರ್ಧರಿಸಿದ್ದೇವೆ ಎಂದು ಜಿಲ್ಲಾ ಆಟೋ ಚಾಲಕ ಮಾಲಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಮೂರು ವರ್ಷಗಳ ಹಿಂದೆ ಶಿರಸಿಯಲ್ಲಿ ಸಿಎನ್​ಜಿ ಪಂಪ್​ ಆರಂಭ ಆಗಿದೆ. ನಾವೂ ಸಹ ಸಿಎನ್​ಜಿ ಇಂಧನ ಬಳಸಲಾರಂಭಿಸಿದ್ದೇವಲ್ಲದೇ, ನಮ್ಮ ವಾಹನಗಳ ನೋಂದಣಿ ಪತ್ರದಲ್ಲಿ ಸಿಎನ್​ಜಿ ಗ್ಯಾಸ್​ನಿಂದ ಚಲಿಸುವ ವಾಹನ ಎಂದು ದಾಖಲಾಗಿದೆ. ಆದರೆ, ಕೆಲ ತಿಂಗಳಿನಿಂದ ಶಿರಸಿ ಹಾಗೂ ಮುಂಡಗೋಡ ಬಂಕ್​ಗಳಲ್ಲಿ ಸಿಎನ್​ ಜಿ ಬದಲು ಸಿಬಿಜಿ ಗ್ಯಾಸ್​ ಹಾಕಲಾಗುತ್ತಿದೆ. ಈ ಬಗ್ಗೆ ಕೇಳಿದರೆ, ಸಿಬಿಜಿಯೇ ಈಗ ಪೂರೈಕೆ ಆಗುತ್ತಿದೆ ಎಂಬ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಜಿಲ್ಲೆಯ ಬೇರಾವ ನಗರದಲ್ಲಿಯೂ ಇರದ ಸಿಎನ್​ಜಿ ಕೊರತೆ, ಸಿಬಿಜಿ ಪೂರೈಕೆ ಮುಂಡಗೋಡ ಮತ್ತು ಶಿರಸಿಗೆ ಮಾತ್ರ ಏಕೆ ಪೂರೈಕೆ ಆಗುತ್ತಿದೆ? ಈ ಬಗ್ಗೆ ತಹಸೀಲ್ದಾರರಿಗೂ, ಬಂಕ್​ ಮಾಲೀಕರಿಗೂ ಮನವಿ ಮಾಡಿದ್ದರೂ ಯಾವುದೇ ಬದಲಾವಣೆ ಆಗಿಲ್ಲ ಎಂದರು.
ತಾಲೂಕಾಧ್ಯ ರಾಜು ಗೌಳಿ ಮಾತನಾಡಿ, ಸಿಎನ್​ಜಿ ಬದಲು ಸಿಬಿಜಿ ಇಂಧನ ಹಾಕುವುದರಿಂದ ಇಂಜಿನ್​ನಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳಲಾರಂಭಿಸಿವೆ. ಸಿಬಿಜಿ ಹಾಕಿದರೆ ಮೈಲೇಜ್​ ಕೂಡ ಕಡಿಮೆ ಲಭಿಸುತ್ತಿದೆ. ತಾಲೂಕಿನ ರಸ್ತೆಗಳು ಏರು ದಿನ್ನೆಯವಾಗಿದ್ದು, ವಾಹನದ ಪಿಕಪ್​ ಕೂಡ ಕಡಿಮೆ ಆಗಿದೆ. ಈ ರೀತಿ ಇಂಧನ ಬದಲಿಸಿ ವಾಹನ ಓಡಿಸುವಾಗ ಅಪಘಾತವಾದರೆ ವಿಮೆ ಸೌಲಭ್ಯ ಸಿಗುವ ಬಗ್ಗೆ ಸ್ಪಷ್ಟತೆ ಇಲ್ಲ ಎಂದರು.
ಈಗಾಗಲೇ ಪೆಟ್ರೋಲ್​ ಬಂಕ್​ಗಳ ಮಾಲೀಕರೊಂದಿಗೆ ಎರಡ್ಮೂರು ಮೀಟಿಂಗ್​ ನಡೆಸಿದ್ದೇವೆ. ವಾಹನ ಸಿಎನ್​ಜಿ ಇಂಧನವಾಗಿರುವುದರಿಂದ ಸಿಬಿಜಿ ಇಂಧನ ಬಳಕೆಗೆ ಅನುಮತಿ ನೀಡಿಲ್ಲ. ಆದಾಗ್ಯೂ ಒತ್ತಾಯಪೂರ್ವಕವಾಗಿ ನಮ್ಮ ವಾಹನಗಳಿಗೆ ಸಿಬಿಜಿ ಇಂಧನ ಹಾಕುತ್ತಿರುವುದರ ಹಿಂದೆ ಪ್ರಭಾರಿ ರಾಜಕಾರಣಿಗಳು ಶಾಮೀಲಿದ್ದಂತಿದೆ. ನಮಗೆ ಸಿಬಿಜಿ ಇಂಧನ ಬೇಡ. ಸಿಎನ್​ಜಿ ನಮಗೆ ಪೂರೈಸಲು ಸಾಧ್ಯವಿಲ್ಲ ಎಂದಾದರೆ ನಾವು ವಾಹನ ಓಡಿಸುವುದನ್ನು ಸ್ಥಗಿತಗೊಳಿಸಲಿದ್ದೇವೆ, ಸರ್ಕಾರ ನಾವು ತುಂಬಿದ ತೆರಿಗೆ ವಾಪಸ್​ ಕೊಡಲಿ. ಒಂದು ವಾರದೊಳಗೆ ಸಿಬಿಜಿ ಸ್ಥಗಿತಗೊಳಿಸಿ ಸಿಎನ್​ಜಿ ಇಂಧನವನ್ನೇ ಪೂರೈಸಬೇಕು. ಇಲ್ಲದಿದ್ದರೆ ಜು. 7ರಂದು ಪೆಟ್ರೋಲ್​ ಬಂಕ್​ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲು ಉದ್ದೇಶಿಸಿದ್ದೇವೆ ಎಂದರು.
ಪ್ರದಿಪ ಪವಾರ, ಚಂದ್ರಕಾಂತ, ರಾರ್ಬಟ್​ ಮುಂಡಗೋಡ, ರಾಜು ಪಾಟೀಲ, ವಿನಾಯಕ ನಾಯಕ, ಅರುಣ ನಾಯಕ, ಸತೀಶ ಶೆಟ್ಟಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net